ಕೋಲಾರ, ೧೬ ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಶಾಲಾ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಎಷ್ಟು ಒತ್ತು ನೀಡಿ ಪರೀಕ್ಷೆಗಳನ್ನು ಬರೆಯುತ್ತಾರೋ ಅದೇ ರೀತಿ ಕ್ರೀಡೆಗೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಪೋಷಕರು ಮಕ್ಕಳಿಗೆ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಕೆಲಸವನ್ನು ಮಾಡಬೇಕು ಎಂದು ಕೋಲಾರ ಲೋಕಸಭಾ ಕ್ಷೇತ್ರ ಸಂಸದರಾದ ಎಂ.ಮಲ್ಲೇಶ್ ಬಾಬು ಹೇಳಿದರು.
ಕೋಲಾರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ,ಶ್ರೀ ಆರ್.ವಿ.ಪದವಿಪೂರ್ವ ಕಾಲೇಜು ಕೋಲಾರ ಇವರ ಸಹಯೋಗದಲ್ಲಿ ಕೋಲಾರ ೨೦೨೫-೨೬ನೇ ಸಾಲಿನ ಬಾಲಕ-ಬಾಲಕಿಯರ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಕಾರ್ಯಕ್ರಮಕ್ಕೆ ಕ್ರೀಡಾ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದ್ದರು.
ಆರೋಗ್ಯವೇ ಭಾಗ್ಯ ಆಗಿರುವುದರಿಂದ ತಾವು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ತಮ್ಮ ದೇಹವನ್ನು ಬಲಪಡಿಸಿಕೊಳ್ಳಬಹುದು ಮತ್ತು ಆರೋಗ್ಯವಂತರಾಗಿರಬಹುದು ತಮ್ಮ ಕುಟುಂಬ ಮತ್ತು ತಮಗೆ ಇರುವಂತಹ ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಪ್ರಸ್ತುತ ಸರ್ಕಾರವು ಕ್ರೀಡೆಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದು ತಾವು ಮುಕ್ತವಾಗಿ ಕ್ರೀಡೆಗಳಲ್ಲಿ ಭಾಗವಹಿಸಬಹುದು ಆದ್ದರಿಂದ ವಿದ್ಯಾರ್ಥಿಗಳು ತಾವು ಮನೆಯಲ್ಲಿ ಪೋಷಕರಿಗೆ ಹೇಳಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ತಮಗೆ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿ ಎಂದರು.
ಮೊಬೈಲ್ ಗೇಮ್ ಗಳಿಂದ ದೂರವಿರಿ:ವಿದ್ಯಾರ್ಥಿಗಳು ಶೀಘ್ರವಾಗಿ ಮೊಬೈಲ್ ಗೇಮಿಂಗ್ ಆಡಲು ಆಕರ್ಷಿತರಾಗುತ್ತಾರೆ ಇದರಿಂದ ಅನೇಕ ಯುವಕ ಯುವತಿಯರು ಪ್ರಾಣಗಳನ್ನು ಕಳೆದುಕೊಂಡಿರುವುದನ್ನು ನಾವು ಕಂಡಿದ್ದೇವೆ ಆದ್ದರಿಂದ ಈಗಿನ ವಿದ್ಯಾರ್ಥಿಗಳು ದೈಹಿಕವಾಗಿ ಕ್ರೀಡೆಗಳಲ್ಲಿ ಪಾಲ್ಗೊಂಡು ಮುಂದಿನ ಪೀಳಿಗೆಗೆ ತಾವು ಮಾರ್ಗದರ್ಶನ ವಾಗಬೇಕು ಎಂದು ತಿಳಿಸಿದರು.
ಶ್ರೀ ಆರ್.ವಿ.ಪದವಿ ಪೂರ್ವ ಕಾಲೇಜು ತಾಲ್ಲೂಕಿನಲ್ಲಿರುವ ಬೇರೆ ಕಾಲೇಜುಗಳಿಗೆ ಮಾರ್ಗದರ್ಶನ ವಾಗುವಂತೆ ಕ್ರೀಡಾಕೂಟವನ್ನು ಅತ್ಯುತ್ತಮವಾಗಿ ಆಯೋಜಿಸಿದ್ದಾರೆ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜೀವನಕ್ಕೆ ಪ್ರಮುಖವಾಗಿರುತ್ತದೆ ಎಂದರು.
ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುಳ ಅವರು ಮಾತನಾಡಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ ಸೋಲು ಗೆಲುವು ಸಾಮಾನ್ಯವಾಗಿರುತ್ತದೆ ಮತ್ತು ಇವತ್ತಿನ ಕ್ರೀಡಾಕೂಟದಲ್ಲಿ ತಾಲ್ಲೂಕಿನ
ಮೂವತ್ತಕ್ಕೂ ಹೆಚ್ಚಿನ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಆರ್.ವಿ.ಕಾಲೇಜಿನ ಆಡಳಿತ ಮಂಡಳಿ ಅವರು ಅಚ್ಚುಕಟ್ಟಾಗಿ ನಡೆಸಿದ್ದಾರೆ ಎಂದು ತಿಳಿಸಿದರು.
ಪ್ರಾಂಶುಪಾಲರಾದ ವೇದಾಶೇಖರ್ ಅವರು ಮಾತನಾಡಿ ಈ ಒಂದು ಕ್ರೀಡಾಕೂಟದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವಂತಹ ವಿದ್ಯಾರ್ಥಿಗಳಿಗೆ ನಮ್ಮ ಆರ್.ವಿ.ಪದವಿ ಪೂರ್ವ ಕಾಲೇಜು ವತಿಯಿಂದ ವಿಶೇಷ ಗೌರವವನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್.ಗೀತಾ, ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಕೋಲಾರ ಜಿಲ್ಲಾ ಅಧ್ಯಕ್ಷರಾದ ಬಿ.ಎನ್.ಮುರಳಿ, ಉಪನ್ಯಾಸಕರ ಸಂಘದ ಅಧ್ಯಕ್ಷರಾದ ನಟರಾಜ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ್, ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಎಸ್ ಚೌಡಪ್ಪ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ವಿ ಮುರಳಿ ಮೋಹನ್, ತಾಲೂಕು ಅಧ್ಯಕ್ಷರಾದ ಆರ್. ನಾಗರಾಜ್, ಆರ್ ವಿ ಪದವಿಪೂರ್ವ ಕಾಲೇಜು ಕಾರ್ಯದರ್ಶಿಗಳಾದ ಪಿ.ಆರ್. ಸೋಮಶೇಖರ್, ಸೇರಿದಂತೆ ಕ್ರೀಡಾಪಟುಗಳು ತೀರ್ಪುಗಾರರು ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ : ಕೋಲಾರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಬಾಲಕ-ಬಾಲಕಿಯರ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಕಾರ್ಯಕ್ರಮಕ್ಕೆ ಕ್ರೀಡಾ ಧ್ವಜಾರೋಹಣ ಮಾಡುವ ಮೂಲಕ ಸಂಸಕ ಮಲ್ಲೇಶ್ ಬಾಬು ಚಾಲನೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್