ನವದೆಹಲಿ, 16 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ 1xBet ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಮಾಜಿ ಕ್ರಿಕೆಟಿಗರಾದ ರಾಬಿನ್ ಉತ್ತಪ್ಪ, ಯುವರಾಜ್ ಸಿಂಗ್ ಮತ್ತು ನಟ ಸೋನು ಸೂದ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಇಡಿ ನೀಡಿರುವ ವೇಳಾಪಟ್ಟಿಯ ಪ್ರಕಾರ, ರಾಬಿನ್ ಉತ್ತಪ್ಪ ಸೆಪ್ಟೆಂಬರ್ 22ರಂದು, ಯುವರಾಜ್ ಸಿಂಗ್ 23ರಂದು ಹಾಗೂ ಸೋನು ಸೂದ್ 24ರಂದು ಹಾಜರಾಗಬೇಕು. ಇದೇ ಪ್ರಕರಣದಲ್ಲಿ ಕಳೆದ ವಾರಗಳಲ್ಲಿ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಶಿಖರ್ ಧವನ್ ಅವರನ್ನು ವಿಚಾರಣೆ ನಡೆಸಲಾಗಿದೆ.
ಇದಲ್ಲದೆ, ಟಿಎಂಸಿ ಮಾಜಿ ಸಂಸದೆ ಮತ್ತು ನಟಿ ಮಿಮಿ ಚಕ್ರವರ್ತಿ ಅವರ ಹೇಳಿಕೆಯನ್ನು ಈಗಾಗಲೇ ದಾಖಲಿಸಲಾಗಿದೆ. ಬಂಗಾಳಿ ನಟ ಅಂಕುಶ್ ಹಜ್ರಾ ಇಂದು ಇಡಿ ಮುಂದೆ ಹಾಜರಾದರೆ, 1xBet ಬ್ರಾಂಡ್ ಅಂಬಾಸಿಡರ್ ಊರ್ವಶಿ ರೌಟೇಲಾ ಇನ್ನೂ ವಿಚಾರಣೆಗೆ ಹಾಜರಾಗಿಲ್ಲ.
ಇಡಿ ತನಿಖೆಯ ಪ್ರಾಥಮಿಕ ವರದಿಗಳ ಪ್ರಕಾರ, ಈ ಅಕ್ರಮ ಆಪ್ ಮೂಲಕ ಕೋಟ್ಯಂತರ ರೂಪಾಯಿಗಳ ವಂಚನೆ ನಡೆದಿದೆ. 1xBet ಕಂಪನಿಯ ವೆಬ್‌ಸೈಟ್ ಹಾಗೂ ಆಪ್ 70ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದ್ದು, ದೇಶದಾದ್ಯಂತ ಹೂಡಿಕೆದಾರರು ಹಾಗೂ ಸಾಮಾನ್ಯ ಜನರಿಗೆ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa