ಶ್ರೀನಗರ, 11 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕಾಶ್ಮೀರದ ಸೇಬುಗಳನ್ನು ಸುರಕ್ಷಿತವಾಗಿ ಹಾಗೂ ವೇಗವಾಗಿ ದೇಶದ ಮಾರುಕಟ್ಟೆಗಳಿಗೆ ತಲುಪಿಸಲು ಇಂದು ಬುಡ್ಗಾಮ್ ರೈಲು ನಿಲ್ದಾಣದಿಂದ ವಿಶೇಷ ಪಾರ್ಸೆಲ್ ವ್ಯಾನ್ ಸೇವೆ ಪ್ರಾರಂಭಗೊಂಡಿದೆ.
ಎರಡು ಪಾರ್ಸೆಲ್ ವ್ಯಾನ್‌ಗಳಲ್ಲಿ ಒಂದನ್ನು ದೆಹಲಿಗೆ ಮತ್ತು ಇನ್ನೊಂದನ್ನು ಜಮ್ಮುವಿಗೆ ತೆರಳುವ ರೈಲುಗಳಿಗೆ ಜೋಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕ್ರಮವು ಹವಾಮಾನ ವೈಪರೀತ್ಯ, ಭೂಕುಸಿತಗಳಿಂದಾಗಿ ಹೆಚ್ಚಾಗಿ ಅಡಚಣೆಗೆ ಒಳಗಾಗುವ ಶ್ರೀನಗರ-ಜಮ್ಮು ಹೆದ್ದಾರಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ರೈಲಿನ ಮೂಲಕ ಸೇಬು ಸಾಗಾಣಿಕೆಯಿಂದ ಸಮಯ ಹಾಗೂ ವೆಚ್ಚ ಉಳಿತಾಯವಾಗುವುದಲ್ಲದೆ ಬೆಳೆಗಾರರಿಗೆ ನೇರ ಪ್ರಯೋಜನ ದೊರೆಯಲಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಬೆಳೆಗಾರರು ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಹೆದ್ದಾರಿಯಲ್ಲಿ ಟ್ರಕ್‌ಗಳು ಸಿಲುಕಿಕೊಂಡು ನಾವು ಹಣ್ಣುಗಳನ್ನು ಕಳೆದುಕೊಳ್ಳುತ್ತಿದ್ದೆವು. ಈಗ ರೈಲಿನ ಮೂಲಕ ಮಾರುಕಟ್ಟೆಗೆ ಸಮಯಕ್ಕೆ ತಲುಪಿಸಿ ಉತ್ತಮ ಬೆಲೆ ಪಡೆಯುವ ನಿರೀಕ್ಷೆಯಿದೆ ಎಂದು ಶೋಪಿಯಾನ್‌ನ ತೋಟಗಾರ ಅಬ್ದುಲ್ ಮಜೀದ್ ಹೇಳಿದ್ದಾರೆ.
ಪುಲ್ವಾಮಾದ ತೋಟಗಾರ ಗುಲಾಮ್ ನಬಿ, ಸೇಬುಗಳು ಕಾಶ್ಮೀರದ ಆರ್ಥಿಕತೆಯ ಬೆನ್ನೆಲುಬು. ರೈಲು ಸಾರಿಗೆ ನಮಗೆ ಐತಿಹಾಸಿಕ ಕ್ಷಣ. ಇದು ಕಣಿವೆಯ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa