ಕೋಲಾರ, ೨೯ ಆಗಸ್ಟ್ (ಹಿ.ಸ) :
ಆ್ಯಂಕರ್ : ಹವಾಮಾನ ವೈಪರಿತ್ಯವನ್ನು ತಡೆಯುವ ಸಲುವಾಗಿ ನರೇಗಾ ಯೋಜನೆಯನ್ನು ವ್ಯಾಪಕವಾಗಿ ಬಳಸಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಮತ್ತು ಜಲ ಸಂರಕ್ಷಣಾ ಕಾರ್ಯಕ್ರಮಗಳನ್ನು ಹೆಚ್ಚಾಗಿ ರೂಪಿಸಲು ಅನುಕೂಲವಾಗುವಂತೆ ಕಾನೂನು ತಿದ್ದುಪಡಿ ಮಾಡಬೇಕು ಎಂದು ಕೋಲಾರದಲ್ಲಿ ಗುರುವಾರ ನಡೆದ ಕಾನ್ಫರೆನ್ಸ್ ಆಫ್ ಪಂಚಾಯತ್ ಒತ್ತಾಯಿಸಿದೆ.
ಕೋಲಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಸರ್ ಮತ್ತು ಗ್ರಾಮ ವಿಕಾಸ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಸಮಾವೇಶದಲ್ಲಿ ಜಿಲ್ಲೆಯ ತಾಲೂಕುಗಳ ಗ್ರಾಮ ಪಂಚಾಯಿತಿಗಳ ೧೨೦ ಮಂದಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಒಗಳು ಭಾಗವಹಿಸಿದ್ದರು.
ಕಳೆದ ಒಂದು ವರ್ಷದಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನಡೆದ ಕಾನ್ಫರೆನ್ಸ್ ಆಫ್ ಪಂಚಾಯತ್ ಸಮಾವೇಶ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸದಸ್ಯರ ಜೊತೆ ನಡೆದ ಸಂವಾದದ ಸಂಗ್ರಹ ರೂಪವಾಗಿ ಸಿದ್ಧಪಡಿಸಲಾದ ೧೨ ಅಂಶಗಳ ಶಿಫಾರಸುಗಳನ್ನು ಇದೆ ವೇಳೆ ಬಿಡುಗಡೆ ಮಾಡಲಾಯಿತು.
ಗ್ರಾಮ ಪಂಚಾಯಿತಿಗಳಲ್ಲಿ ರಚನೆಯಾಗಿರುವ ಜೀವವೈವಿಧ್ಯತಾ ಸಮಿತಿಗಳನ್ನು ಕ್ರಿಯಾಶೀಲಗೊಳಿಸಬೇಕು. ತಾಲೂಕು ಮಟ್ಟದಲ್ಲಿ ಹವಾಮಾನ ಕ್ರಿಯಾ ಸಮಿತಿಗಳನ್ನು ರಚಿಸಿ ಕಾರ್ಯ ಯೋಜನೆ ರೂಪಿಸಬೇಕು. ಹವಾಮಾನ ಬದಲಾವಣೆ ಕುರಿತು ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸಿ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯ ಯೋಜನೆ ರೂಪಿಸಬೇಕು ಎಂದು ಶಿಫಾರಸು ಮಾಡಲಾಗಿದೆ.
ಪ್ರತಿ ಗ್ರಾಮ ಪಂಚಾಯಿತಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ವಾರ್ಷಿಕ ಕನಿಷ್ಠ ೨೦೦೦ ಪರಿಸರ ಸ್ನೇಹಿ ಗಿಡ ಬೆಳೆಸುವ ಅಭಿಯಾನ ನಡೆಸಬೇಕು. ಸಾವಯವ ಕೃಷಿಯನ್ನು ಉತ್ತೇಜಿಸುವ ಕಾರ್ಯಾಗಾರ ನಡೆಸಬೇಕು. ಅಂತರ್ಜಲ ಸಂರಕ್ಷಣೆ ಕಾರ್ಯ ಯೋಜನೆ ಹೆಚ್ಚು ಮಾಡಬೇಕು ಗ್ರಾಮಗಳಲ್ಲಿ ಅವಕಾಶವಿರುವ ಎಲ್ಲಾ ಕಡೆ ಮಳೆ ನೀರು ಕೊಯ್ಲು ಘಟಕ ಸ್ಥಾಪಿಸಿ ಅಂತರ್ಜಲ ಮರುಪೂರಣ ಮಾಡಬೇಕು ಎಂಬುದು ಸಹ ಶಿಪಾರಸುಗಳಲ್ಲಿ ಸೇರಿದೆ.
ಗ್ರಾಮಗಳಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಬೇಕು. ಪ್ರತಿ ಶಾಲೆಯಲ್ಲಿ ಪರಿಸರ ರಕ್ಷಣಾ ಕ್ಲಬ್ ರಚಿಸಿ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಪ್ರತಿ ಪಂಚಾಯಿತಿಗೆ ಒಂದರಂತೆ ಉದ್ಯಾನವನ ಸ್ಥಾಪಿಸಬೇಕು ಎಂದು ಸಹ ಶಿಫಾರಸು ಮಾಡಲಾಗಿದೆ.
ಸಮಾವೇಶ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಸಿಇಒ ಡಾ.ಪ್ರವೀಣ್ ಬಾಗೇವಾಡಿ ಮಾತನಾಡಿ, ಹವಾಮಾನದಲ್ಲಿ ಮಾನವನ ಹಸ್ತಕ್ಷೇಪ ಮಿತಿ ಮೀರಿರುವ ಕಾರಣ ವೈಪರಿತ್ಯ ಉಂಟಾಗುತ್ತಿದೆ. ನೀರನ್ನು ಸಂವೇದನಾಶೀಲವಾಗಿ ಬಳಸುವ ಜೊತೆಗೆ ಅರಣ್ಯೀಕರಣಕ್ಕೆ ಒತ್ತು ನೀಡಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೆ.ಜಿ.ರಮೇಶ್ ಮಾತನಾಡಿ, ಹವಾಮಾನ ವೈಪರಿತ್ಯ ಜಾಗತಿಕ ಸಮಸ್ಯೆಗಾದರೂ ಸ್ಥಳೀಯವಾಗಿಯೇ ಪರಿಹಾರ ಕ್ರಮಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಪರಿಸರ ಅಸಮತೋಲನ ಇವತ್ತಿನ ಜಾಗತಿಕ ಬಿಕ್ಕಟ್ಟು ಆಗಿ ಬೆಳೆದುನಿಂತಿದೆ. ಈ ಬಿಕ್ಕಟ್ಟು ನಿವಾರಿಸಿ ಸುಸ್ಥಿರ ಜನಜೀವನಕ್ಕೆ ಅವಕಾಶ ಮಾಡಿಕೊಳ್ಳಬೇಕಾದ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳ ಕಡೆಯಿಂದ ಆರಂಭವಾಗಬೇಕು ಎಂದರು.
ಸ್ಥಳೀಯವಾಗಿ ಪರಿಸರ ಮತ್ತು ಜಲ ಸಂರಕ್ಷಣೆಗೆ ಅನುದಾನದ ಕೊರತೆ ಇಲ್ಲ. ನರೇಗಾ ಸೇರಿದಂತೆ ಹತ್ತಾರು ಯೋಜನೆಗಳನ್ನು ಅನುದಾನ ಬಳಸಿಕೊಂಡು ಗ್ರಾಮ ಮಟ್ಟದಲ್ಲಿ ಪರಿಸರ ಸಂರಕ್ಷಣಾ ಕಾರ್ಯ ಯೋಜನೆ ರೂಪಿಸುವ ಮನಸ್ಥಿತಿಯ ಕೊರತೆ ಮೊದಲು ನಿವಾರಣೆ ಆಗಬೇಕು ಎಂದರು.
ಭಾರತೀಯ ಹವಾಮಾನ ಇಲಾಖೆ ಮಾಜಿ ಮಹಾ ನಿರ್ದೇಶಕ ಕೆ.ಜೆ.ರಮೇಶ್, ಆಸರ್ ಸಂಸ್ಥೆಯ ಸಿಇಒ ವಿನುತಾ ಮತ್ತು ಸುದೀಪ್ ಗ್ರಾಮ ವಿಕಾಸದ ಗಿರಿಜಾ, ಹುಳದೇನಹಳ್ಳಿ ರಾಮಕೃಷ್ಣಗೌಡ, ಸೀಸಂದ್ರ ಚೌಡಪ್ಪ, ಮಾಲೂರು ಸೂರ್ಯನಾರಾಯಣರಾವ್ ಮುಳಬಾಗಲು ಶಂಕರ್, ರಾಜು ಮೈಸೂರು, ಪಾಪಮ್ಮ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ - ಕೋಲಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಸರ್ ಮತ್ತು ಗ್ರಾಮ ವಿಕಾಸ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಸಮಾವೇಶದಲ್ಲಿ ಜಾಗತೀಕ ತಾಪಮಾನದ ಬಗ್ಗೆ ಸಮಾವೇಶ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್