ಕೋಲಾರ, ೨೯ ಆಗಸ್ಟ್ (ಹಿ.ಸ) :
ಆ್ಯಂಕರ್ : ರಾಜ್ಯ ಸರ್ಕಾರದ ವತಿಯಿಂದ ಬಿಎಂಐಸಿ ನೈಸ್ ಕಂಪನಿಗೆ ಯಾವುದೇ ರಸ್ತೆ ನಿರ್ಮಾಣ ಕಾಮಗಾರಿ ನಡೆಸದಂತೆ ನಿರ್ಬಂಧ ವಿಧಿಸಿ ಹಾಗೂ ಅಕ್ರಮ-ಕಾನೂನು ಬಾಹಿರ ರಸ್ತೆ ಕಾಮಗಾರಿ ವಿರುದ್ಧ ಪ್ರತಿಭಟಿಸುವ ರೈತರಿಗೆ ಹಾಗೂ ರೈತ ಮುಖಂಡರಿಗೆ ರಕ್ಷಣೆ ನೀಡಲು ಆಗ್ರಹಿಸಿ ನಗರದ ಉಪ ತಹಶಿಲ್ದಾರ್‌ಗೆ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಮನವಿ ನೀಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಟಿ.ಎಂ ವೆಂಕಟೇಶ್ ಮಾತನಾಡಿ ಸುಮಾರು ೧೯೯೭ ರಲ್ಲಿ ಕರ್ನಾಟಕ ಸರ್ಕಾರ ನೈಸ್ ಕಂಪನಿ ಜೊತೆ ಕ್ರಿಯಾ ಒಪ್ಪಂದದಂತೆ ೧೧೧ ಕಿ.ಮೀ ಬೆಂಗಳೂರಿನಿಂದ ಮೈಸೂರಿನವರೆಗೆ ವೇಗದ ಹೆದ್ದಾರಿ ರಸ್ತೆ, ಬೆಂಗಳೂರಿನಲ್ಲಿ ೪೧ ಕಿ.ಮೀ. ಪೆರಿಪೆರಲ್ ರಸ್ತೆ, ೯.೮ ಕಿ.ಮೀ. ಲಿಂಕ್ ರಸ್ತೆ ಹಾಗೂ ನಿಯೋಜಿತ ಸ್ಥಳಗಳಲ್ಲಿ ಐದು ಟೌನ್ ಶಿಪ್ ಗಳನ್ನು ನಿರ್ಮಾಣ ಮಾಡಬೇಕಾಗಿತ್ತು. ಆದರೆ ಈ ಒಪ್ಪಂದ ಆಗಿ ೨೮ ವರ್ಷಗಳೇ ಕಳೆದಿದ್ದರೂ ಈ ಯೋಜನೆ ಕಾರ್ಯಗತವಾಗಿಲ್ಲ. ಆದರೂ ಈ ಯೋಜನೆಗೆ ಗುರುತಿಸಲಾಗಿದ್ದ ರೈತರ ಭೂ ಸ್ವಾಧೀನವನ್ನು ರದ್ದುಪಡಿಸದೇ ಹಾಗೇಯೆ ಮುಂದುವರೆಸಿಕೊಂಡು ಬರುತ್ತಿರುವುದು ಅತ್ಯಂತ ಯಾತನೆಯನ್ನು ಮತ್ತು ಅನ್ಯಾಯವನ್ನು ಈ ಯೋಜನಾ ವ್ಯಾಪ್ತಿಯ ರೈತರು ಅನುಭವಿಸುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ನೈಸ್ ಕಂಪನಿಯ ಪಾಲುದಾರಿಕೆ ಕುರಿತು ರಾಜ್ಯ ಸರ್ಕಾರ ಸಲಹಾ ಸಮಿತಿ ನೇಮಿಸಿರುವ ಹಿನ್ನಲೆಯಲ್ಲಿ, ಕಳಂಕಿತ ನೈಸ್ ಕಂಪನಿಗೆ ಯಾವುದೇ ರೀತಿಯ ಕಾಮಗಾರಿ ನಡೆಸದಂತೆ ನಿರ್ಬಂಧ ವಿಧಿಸಬೇಕು ಬಿಎಂಐಸಿ ಯೋಜನೆ ಹಾಗೂ ನೈಸ್ ಕಂಪನಿ ಪಾಲುದಾರಿಕೆಯನ್ನು ರದ್ದುಗೊಳಿಸಬೇಕು ರೈತರು ಹಾಗೂ ರೈತ ಮುಖಂಡರ ಮೇಲೆ ನಿಂದನೆ, ಬೆದರಿಕೆ ಮುಂತಾದ ನೈಸ್ ಕಂಪನಿ ದೌರ್ಜನ್ಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ನೈಸ್ ಆಕ್ರಮಗಳ ವಿರುದ್ಧದ ಹೋರಾಟಗಾರ ರೈತ ನಾಯಕ ಎನ್. ವೆಂಕಟಚಲಯ್ಯರವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
ನೈಸ್ ಕಂಪನಿಯ ಭೂ ಸ್ವಾಧೀನ ಹಾಗೂ ರಸ್ತೆ ನಿರ್ಮಾಣದ ಹಗರಣಗಳನ್ನು ತನಿಖೆಗೆ ಒಳಪಡಿಸಿ ಶಿಕ್ಷಿಸಬೇಕು.ರೈತರ ಒಪ್ಪಿಗೆ ಇಲ್ಲದ, ರೈತರ ಗಮನಕ್ಕೆ ಬಾರದಂತೆ ಭೂ ಸ್ವಾಧೀನ ಮಾಡಿರುವ ಎಲ್ಲಾ ಪ್ರಕರಣಗಳನ್ನು ರದ್ದುಪಡಿಸಬೇಕು. ನೈಸ್ ಅಕ್ರಮ ಕುರಿತ ಸದನ ಸಮಿತಿ ಮತ್ತು ಸಂಪುಟ ಉಪಸಮಿತಿಗಳ ಶಿಪಾರಸ್ಸುಗಳನ್ನು ಜಾರಿಗೊಳಿಸಬೇಕು ಕೆಐಎಡಿಬಿ ಹಾಗೂ ನೈಸ್ ಕಂಪನಿಯ ಅಕ್ರಮ ಮೈತ್ರಿಯಿಂದ ಹಗಲು ದರೋಡೆ ಮಾಡಿರುವ ಎಲ್ಲಾ ಹೆಚ್ಚುವರಿ ಭೂಮಿಯನ್ನು ವಾಪಸು ಪಡೆದುಕೊಳ್ಳಬೇಕು ಭೂ ಸ್ವಾಧೀನ ಪ್ರಕಟಣೆ ಮತ್ತು ಕೋರ್ಟ್ ತೀರ್ಪುಗಳ ಹೆಸರಿನಲ್ಲಿ ರೈತರ ಮೇಲಿನ ನೈಸ್ ಕಂಪನಿಯ ದಬ್ಬಾಳಿಕೆ-ದೌರ್ಜನ್ಯ ನಿಲ್ಲಿಸಬೇಕು ಟೋಲ್ ಸಂಗ್ರಹಿಸುತ್ತಿರುವ ರಸ್ತೆಗೆ ಭೂಮಿ ಕಳೆದುಕೊಂಡ ರೈತರಿಗೆ ಒಪ್ಪಂದದಂತೆ ಹೆಚ್ಚಿನ ಪರಿಹಾರ ಹಾಗೂ ನಿವೇಶನ ಒದಗಿಸಬೇಕು ಬಿಎಂಐಸಿ ಯೋಜನೆ ನೆಪದಲ್ಲಿ ನೈಸ್ ಸಂಸ್ಥೆ ನಡೆಸುತ್ತಿರುವ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಿರ್ಬಂಧಿಸಬೇಕು ನೈಸ್ ಕಂಪನಿಗೆ ಗುತ್ತಿಗೆಗೆ ನೀಡಿರುವ ಎಲ್ಲಾ ಸರ್ಕಾರಿ ಭೂಮಿಗಳನ್ನು ವಾಪಸ್ಸು ಪಡೆದು. ಮನೆ ನಿವೇಶನಕ್ಕಾಗಿ ಅರ್ಜಿ ಹಾಕಿಕೊಂಡಿರುವ ಎಲ್ಲಾ ವಸತಿ ರಹಿತರಿಗೆ ಮನೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಅಲಹಳ್ಳಿ ವೆಂಕಟೇಶಪ್ಪ, ತಾಲ್ಲೂಕು ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಮುಖಂಡರಾದ ವಿ.ವೆಂಕಟೇಶಪ್ಪ, ಅಪ್ಪಯ್ಯಣ್ಣ, ನಾರಾಯಣಸ್ವಾಮಿ, ಮಂಜುನಾಥ್, ರಾಮಾಂಜಿನಪ್ಪ ಮುಂತಾದವರಿದ್ದರು.
ಚಿತ್ರ - ನೈಸ್ ಕಂಪನಿ ಕಾಮಗಾರಿ ನಡೆಸದಂತೆ ಸರ್ಕಾರದ ಕ್ರಮಕ್ಕೆ ಒತ್ತಾಯಿಸಿ ಕೋಲಾರ ತಹಸೀಲ್ದಾರ್ ಮೂಲಕ ಪ್ರಾಂತ ಸಂಘದಿಂದ ಮನವಿ ಸಲ್ಲಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್