ಕೋಲಾರ, ೨೯ ಆಗಸ್ಟ್ (ಹಿ.ಸ) :
ಆ್ಯಂಕರ್ : ಸಮೃದ್ಧ ಸಮುದಾಯ ನಿರ್ಮಾಣದಲ್ಲಿ ಹೆಚ್ಚಿನ ಬೆಂಬಲ ನೀಡುವವರನ್ನು ಗುರಿಯಾಗಿಸಿಕೊಂಡು ಜಿಲ್ಲಾ ಶಾಖೆಗಳನ್ನು ಬಲಗೊಳಿಸಲು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸದಸ್ವತ್ವ ಆಂದೋಲನ ಆರಂಭಿಸಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯ ಆಡಳಿತ ಮಂಡಳಿ ಸದಸ್ಯ ಜಿ. ಶ್ರೀನಿವಾಸ್ ತಿಳಿಸಿದರು.
ನಗರದ ಕಾರಂಜಿ ಕಟ್ಟೆ ಬಡಾವಣೆಯಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯಲ್ಲಿ ಆಯೋಜಿಸಿದ್ದ ಸದಸ್ಯತ್ವ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಈಗಾಗಲೇ ಇರುವ ಸದಸ್ಯರೊಂದಿಗೆ ಹೊಸ ಸದಸ್ಯರನ್ನು ಸಂಸ್ಥೆಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಸಂಸ್ಥೆಯ ದ್ಯೇಯೋದೇಶವಾಗಿದ್ದು, ಶತಮಾನದ ಇತಿಹಾಸ ಇರುವ ಅಂತರಾಷ್ಟ್ರೀಯ ರೆಡ್‌ಕ್ರಾಸ್ ಸಂಸ್ಥೆ ಜಗತ್ತಿನ ಅಪೂರ್ವ ನಿಧಿ ಎಂದರು.
ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ತಾಲೂಕು ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದ್ದು ಈ ದೆಸೆಯಲ್ಲಿ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸುವಂತೆ ಸಲಹೆ ಮಾಡಿದ ಅವರು ಜಿಲ್ಲೆಯ ಪ್ರೌಢ ಶಾಲೆಗಳಲ್ಲಿ ಕಿರಿಯ ರೆಡ್‌ಕ್ರಾಸ್ ಮತ್ತು ಯೂತ್ ರೆಡ್ ಕ್ರಾಸ್ ಘಟಕಗಳನ್ನು ಮರುಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಪತಿ ಡಾ.ಎನ್ ಗೋಪಾಲಕೃಷ್ಣ ಗೌಡ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ತಕ್ಷಣಕ್ಕೆ ಸ್ಪಂದಿಸುವ ಉದ್ದೇಶದಿಂದ ರೆಡ್‌ಕ್ರಾಸ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ರಕ್ತದಾನ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿಸ್ವಾರ್ಥ ಸೇವೆ ಒದಗಿಸುತ್ತಿದೆ ಈ ಸೇವೆಯನ್ನು ಮತ್ತಷ್ಟು ವಿಸ್ತರಿಸಿ ಬಲಗೊಳಿಸುವ ಉದ್ದೇಶದಿಂದ ಸದಸ್ಯತ್ವ ಆಂದೋಲನ ಮಹತ್ವ ಪೂರ್ಣವಾಗಿದೆ ಎಂದರು.
ರೆಡ್ ಕ್ರಾಸ್ ಸಂಸ್ಥೆಯ ಆಶೋತ್ತರಗಳಿಗೆ ಸ್ಪಂದಿಸಿ ದೇವೋದ್ದೇಶಗಳನ್ನು ಅನುಷ್ಠಾನಗೊಳಿಸಲು ಸಮಾಜ ಸೇವೆಗಾಗಿ ಸದಸ್ಯರಾಗಲು ದೂರವಾಣಿ ಸಂಖ್ಯೆ ೯೪೪೮೭೧೪೮೦೯ ಸಂಪರ್ಕಿಸಲು ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ನಂದೀಶ್ ಕುಮಾರ್ ಮನವಿ ಮಾಡಿದರು.
ಸಭೆಯಲ್ಲಿ ಉಪಸಭಾಪತಿ ಆರ್.ಶ್ರೀನಿವಾಸನ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ನಾಗೇಂದ್ರ ಪ್ರಸಾದ್, ವಿ.ಪಿ.ಸೋಮಶೇಖರ್, ಎಸ್.ಸಿ.ವೆಂಕಟಕೃಷ್ಣಪ್ಪ, ವೆಂಕಟೇಶಪ್ಪ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ - ಕೋಲಾರ ನಗರದ ಕಾರಂಜಿ ಕಟ್ಟೆ ಬಡಾವಣೆಯಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯಲ್ಲಿ ಆಯೋಜಿಸಿದ್ದ ಸದಸ್ಯತ್ವ ಆಂದೋಲನಕ್ಕೆ ಚಾಲನೆ ನೀಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್