ನವದೆಹಲಿ, 29 ಆಗಸ್ಟ್ (ಹಿ.ಸ.) :
ಆ್ಯಂಕರ್ : ಜಪಾನ್‌ನ ಟಕಾಸಾಕಿ-ಗುನ್ಮಾದಲ್ಲಿರುವ ಪ್ರಸಿದ್ಧ ಶೋರಿಂಜನ್ ದಾರುಮಾ-ಜಿ ದೇವಾಲಯದ ಪ್ರಧಾನ ಅರ್ಚಕ ರೆವರೆಂಡ್ ಸೀಶಿ ಹಿರೋಸ್ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ದಾರುಮಾ ಗೊಂಬೆಯನ್ನು ಉಡುಗೊರೆಯಾಗಿ ನೀಡಿದರು.
ಈ ಉಡುಗೊರೆಯನ್ನು ಭಾರತ ಮತ್ತು ಜಪಾನ್ ನಡುವಿನ ಆಳವಾದ ನಾಗರಿಕತೆ ಹಾಗೂ ಆಧ್ಯಾತ್ಮಿಕ ಸಂಬಂಧಗಳ ಸಂಕೇತವೆಂದು ಪರಿಗಣಿಸಲಾಗಿದೆ. ಜಪಾನಿ ಸಂಸ್ಕೃತಿಯಲ್ಲಿ ದಾರುಮಾ ಗೊಂಬೆಗಳು ಅದೃಷ್ಟ, ಯಶಸ್ಸು ಮತ್ತು ಶುಭದ ಸಂಕೇತವೆಂದು ವಿಶಿಷ್ಟ ಸ್ಥಾನ ಪಡೆದಿವೆ. ಟಕಾಸಾಕಿ ನಗರವನ್ನು ಈ ಗೊಂಬೆಗಳ ಜನ್ಮಸ್ಥಳವೆಂದು ಪರಿಗಣಿಸಲಾಗುತ್ತದೆ.
ವಿಶೇಷವೆಂದರೆ, ದಾರುಮಾ ಸಂಪ್ರದಾಯವು ಭಾರತದಲ್ಲೇ ಬೇರುಗಳನ್ನು ಹೊಂದಿದೆ. ಜಪಾನ್‌ನಲ್ಲಿ ದಾರುಮಾ ದೇಶಿ ಎಂದು ಕರೆಯಲ್ಪಡುವ ಕಾಂಚೀಪುರಂನ ಮಹಾನ್ ಭಾರತೀಯ ಬೌದ್ಧ ಸನ್ಯಾಸಿ ಬೋಧಿಧರ್ಮ ಅವರೊಂದಿಗೆ ಇದು ನೇರವಾಗಿ ಸಂಬಂಧಿಸಿದೆ. ಸಾವಿರ ವರ್ಷಗಳ ಹಿಂದೆ ಅವರು ಜಪಾನ್ ಪ್ರವಾಸ ಮಾಡಿದ್ದರೆಂದು ಇತಿಹಾಸ ಹೇಳುತ್ತದೆ. ಅಂದಿನಿಂದಲೇ ಆ ಪರಂಪರೆ ಜಪಾನಿನಲ್ಲಿ ದಾರುಮಾ ಸಂಸ್ಕೃತಿಯಾಗಿ ರೂಪಾಂತರಗೊಂಡಿತು.
ಪ್ರಧಾನಿ ಮೋದಿಗೆ ದಾರುಮಾ ಗೊಂಬೆ ಉಡುಗೊರೆಯಾಗಿ ನೀಡಿರುವುದು, ಭಾರತ-ಜಪಾನ್ ಸಂಬಂಧಗಳಲ್ಲಿನ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಬಾಂಧವ್ಯವನ್ನು ಮತ್ತಷ್ಟು ಗಾಢಗೊಳಿಸುವ ಮಹತ್ವದ ಸಂಕೇತವೆಂದು ಪರಿಗಣಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa