ಶಿಮ್ಲಾ, 29 ಆಗಸ್ಟ್ (ಹಿ.ಸ.) :
ಆ್ಯಂಕರ್ : ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ನಿರಂತರ ಧಾರಾಕಾರ ಮಳೆ ಮತ್ತು ಭೂಕುಸಿತದಿಂದ ಮಣಿ ಮಹೇಶ್ ಯಾತ್ರೆಯಲ್ಲಿ ಇದುವರೆಗೆ 11 ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದು, ಸುಮಾರು 10 ರಿಂದ 12 ಸಾವಿರ ಮಂದಿ ವಿವಿಧ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ.
ಚಂಬಾ–ಭರ್ಮೌರ್ ರಾಷ್ಟ್ರೀಯ ಹೆದ್ದಾರಿ ಸೇರಿ ನೂರಾರು ರಸ್ತೆಗಳು ಸಂಚಾರಕ್ಕೆ ಅಡ್ಡಿಯಾಗಿದ್ದು, ವಿದ್ಯುತ್ ಹಾಗೂ ಕುಡಿಯುವ ನೀರಿನ ಯೋಜನೆಗಳು ಹಾನಿಗೊಳಗಾಗಿವೆ. ಬುಡಕಟ್ಟು ಪ್ರದೇಶಗಳಾದ ಭರ್ಮೌರ್ ಮತ್ತು ಪಂಗಿಯಲ್ಲಿ ಸಂವಹನ ಸೇವೆಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ಕಳೆದ ನಾಲ್ಕು ದಿನಗಳಿಂದ ದೂರವಾಣಿ ಸಂಪರ್ಕ ಸ್ಥಗಿತಗೊಂಡಿತ್ತು.
ಭಾರಿ ಮಳೆಯಿಂದಾಗಿ ಮಣಿ ಮಹೇಶ್ ಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಸಿಲುಕಿಕೊಂಡಿರುವ ಭಕ್ತರ ರಕ್ಷಣೆಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಆಡಳಿತ ತಂಡಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿವೆ. ಹೆಲಿಕಾಪ್ಟರ್‌ಗಳ ಸಹಾಯದಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದ್ದು, ಆಹಾರ ಹಾಗೂ ವಸತಿ ವ್ಯವಸ್ಥೆಗಳನ್ನು ಮಾಡಲಾಗಿದೆ.
ಹಿಮಾಚಲ ಪೊಲೀಸರು “ಆಪರೇಷನ್ ಹೌಸ್ಲಾ” ಹೆಸರಿನಲ್ಲಿ ವಿಶೇಷ ಅಭಿಯಾನ ಆರಂಭಿಸಿದ್ದು, ಸಿಲುಕಿಕೊಂಡ ಭಕ್ತರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಜನರು ವದಂತಿಗಳನ್ನು ನಂಬದೆ ಶಾಂತವಾಗಿರಬೇಕೆಂದು ಮನವಿ ಮಾಡಲಾಗಿದೆ. ತುರ್ತು ಸೇವೆಗಾಗಿ 112, ಹಾಗೂ ಶಿಮ್ಲಾ ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆ 0177-2621796 / 2621714 ಅನ್ನು ಸಂಪರ್ಕಿಸಲು ವಿನಂತಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa