ಆ್ಯಂಕರ್: 2002ರ ಹೊತ್ತು. ನಾನು ಪಿಯು ಓದುತ್ತಿದ್ದೆ. ನಮ್ಮ ದೇಹಗಳಲ್ಲಿ ಒಂದೇ ರಕ್ತ ಹರಿಯುತ್ತಿರುವಾಗ ಈ ಜಾತಿಗಳು ಯಾಕೆ? ಈ ವ್ಯವಸ್ಥೆ ಹೀಗ್ಯಾಕೆ? ಎನ್ನುವ ಪ್ರಶ್ನೆಗಳು ನನ್ನೊಳಗೆ ಒಡಮೂಡಲು ಆರಂಭವಾಗಿದ್ದ ದಿನಗಳವು. ವಾರಕ್ಕೊಮ್ಮೆಯಾದರು ಬೀದಿ ಹೋರಾಟ ನಡೆಸಿ, ಚರ್ಚೆ ವಾಗ್ದಾವದಕ್ಕಿಳಿಯುತ್ತಿದ್ದೆವು ಅವರಿವರೊಂದಿಗೆ. ಆ ಪಟ್ಟಣದ ಇಕ್ಕಟ್ಟಾದ ಓಣಿಯಲ್ಲಿ ಚಿಕ್ಕದೊಂದು ಕಚೇರಿ. ಸುತ್ತ ಎತ್ತೆತ್ತಲು ಗೋಡೆಗೆ ಅಂಟಿದ ಚಿತ್ರಗಳು, ಕರ ಪತ್ರಗಳು, ಅಲ್ಲಿನ ಅಕ್ಷರಗಳು, ಪಟಗಳೇ ನಮ್ಮ ಆಗಿನ ದಿನಚರಿ..!
ಆ ಪಟ್ಟಣ.. ಆ ಗಜೇಂದ್ರಗಡದಲ್ಲಿದ್ದಾಗ ನನಗೆ ಈಗಲೂ ನೆನಪಿದೆ. ಅವತ್ತು ಬೆಳ್ಳಂ ಬೆಳಗ್ಗೆ ಬಸ್ ನಿಲ್ದಾಣದಲ್ಲಿ ನಿಂತಾಗ ಜೊತೆಗಿದ್ದ ಸಂಗಾತಿ ರವೀಂದ್ರ ಹೊನವಾಡ ಅವರು ಆ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಯೊಂದನ್ನು ತೋರಿಸಿ ಇವರದೇ ಅದು ಸ್ಟೇಟಮೆಂಟು ಎಂದು ಸಂಗಾತಿ ಎಂ.ಎಸ್.ಹಡಪದ ಅವರಿಗೆ ತಿಳಿಸುತ್ತಿದ್ದರು. ವಾಗ್ವಾದ ಸ್ವರೂಪದ ಆ ವೇಳೆ ಮೊಟ್ಟಮೊದಲ ಬಾರಿಗೆ ನನ್ನ ಕಿವಿ ಹೊಕ್ಕಿದ್ದ ಪದವೇ ಅದು. ಆ ಲಡಾಯಿ.. ಲಡಾಯಿ..!
ಮತ್ತೊಂದು ದಿನ. ಅದೇ ಗಜೇಂದ್ರಗಡದ ದಕ್ಷಿಣ ದಿಕ್ಕಿನಲ್ಲಿರುವ, ಹಿರಿಯರಾದ ಬಿ.ಎ.ಕೆಂಚರೆಡ್ಡಿ ಅವರ ಮನೆಯಲ್ಲಿ ಸಂಜೆ ಹೊತ್ತಿಗೆ ದಿಢೀರ್ ಎಂದು ಸೇರಿದ್ದೆವು. ಸುತ್ತಲು ಪುಸ್ತಕಗಳು. ಆ ಪುಸ್ತಕಗಳ ರಾಶಿಯ ಮಧ್ಯೆ ಕುಳಿತಿದ್ದ ಕೆಂಚರೆಡ್ಡಿ ಗುರುಗಳು ತಮ್ಮ ನೀಳವಾದ ಗಡ್ಡವನ್ನು ಸವರುತ್ತ ಮಾತಾಡುತ್ತಿದ್ದರು. ಸಂಗಾತಿಗಳಾದ ರವೀಂದ್ರ ಹೊನವಾಡ, ಶರಣಬಸವ ಮರದ, ಎಂ.ಎಸ್.ಹಡಪದ, ಐ.ಸಿ.ಗೋಡೆಕಾರ, ಎಫ್.ಡಿ.ಕಟ್ಟಿಮನಿ ಇನ್ನೀತರರು ಮತ್ತದೇ ವಾಗ್ದಾದಕ್ಕಿಳಿದಿದ್ದರು ವಿಷಯವೊಂದರ ಮೇಲೆ. ‘ಅದು ಅವರ ಹೋರಾಟದ ಹಾದಿ.. ಅವರ ಹಾಗೆಯೇ ಎಂದೆಲಾ’್ಲ ಚರ್ಚೆಗಳು ನಡೆದವು. ಅವತ್ತು ಲಡಾಯಿ ನನ್ನೆದೆಗಿಳಿಯಿತು. ಆ ಬಸವರಾಜ ಸೂಳಿಭಾವಿ ಯಾರು? ಎನ್ನುವ ಪ್ರಶ್ನೆಯೊಂದು ತಲೆ ಹೊಕ್ಕಿತ್ತು.
2006ರಲ್ಲಿ ಗಜೇಂದ್ರಗಡದಲ್ಲಿ ಪದವಿ ಮುಗಿಸಿದ ಬಳಿಕ ನನಗೆ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯ ಸೀಟು ಸಿಕ್ಕಿತು. ಅಡ್ಮಿಶನ್ ಮಾಡಿಸಲು ಹಣವಿರಲಿಲ್ಲ. ಸಂಗಾತಿಗಳು ತುಸು ಹಣವನ್ನು ಕೂಡಿಸಿ ಕೈಯಲ್ಲಿಟ್ಟು ಧಾರವಾಡ ಬಸ್ ಹತ್ತಿಸಿದರು ಆ ದಿನ. ಪರಶುರಾಮ ಬೋನೇರ ಮತ್ತು ಟಿ.ಎಸ್.ಗೊರವರ ಸ್ನೇಹಿತರೊಟ್ಟಿಗೆ ಧಾರವಾಡ ಕವಿವಿಯಲ್ಲಿ ಅಡ್ಮಿಷನ್ ಆಯ್ತು. ಗಜೇಂದ್ರಗಡದ ಆ ಕಚೇರಿಯಲ್ಲಿದ್ದ ಟ್ರಂಕ್, ಪುಸ್ತಕಗಳು, ಹಾಸಿಗೆ, ದಿಂಬು ಎಲ್ಲವೂ ಹಾಗೆಯೇ ನೇರವಾಗಿ ಶಾಲ್ಮಲಾ ಹಾಸ್ಟೇಲ್ ಸೇರಿದವು. ಅಲ್ಲಿಂದ ಲಡಾಯಿ ಕಚೇರಿ ಹತ್ತಿರವಾಯಿತು.
ಪದವಿ ಓದುವಾಗ ಕೆಲವು ಬಾರಿ ಜಿಲ್ಲಾ ಕೇಂದ್ರ ಗದಗನಲ್ಲಿ ಎದುರಾಗುತ್ತಿದ್ದ ಆ ಬಸವರಾಜ ಸೂಳಿಭಾವಿ ಅವರು ಧಾರವಾಡದಲ್ಲಿ ಮತ್ತಷ್ಟು ಹತ್ತಿರವಾಗುತ್ತ ಹತ್ತಿರವಾಗುತ್ತ ನನಗೆ ಅದು ಇದು ಹೇಳುತ್ತ.. ಆ ದಾರಿ ತೋರುತ್ತ.. ಮೇಷ್ಟ್ರು ರೀತಿಯಲ್ಲಿ ನನ್ನೊಳಗಿಳಿದರು. ಕವಿಗೋಷ್ಠಿ, ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮತ್ತೆ ಮತ್ತೆ ಸಿಗುತ್ತಿದ್ದರಿಂದ ಬಸೂ ಮೇಷ್ಟ್ರು ಅವರೊಂದಿಗಿನ ಆತ್ಮೀಯತೆ ಬಲವಾಯಿತು. ಅವರಿಂದಲೇ ಪೋನ್ ಕರೆಗಳು.. ಎಲ್ಲಿದ್ದೀರಿ ಕಥೆಗಾರರೇ.. ನಾಳೆ ಕವಿಗೋಷ್ಠಿ ಬರಬೇಕು.. ಎಂದು ಆಹ್ವಾನವಿತ್ತಾಗ ನನಗೆ ಮಹಾದಾನಂದ. ಒಂದಲ್ಲ, ಎರಡಲ್ಲ.. ಲಡಾಯಿ ಪ್ರಕಾಶನದ ಅನೇಕ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳಲ್ಲಿ.. ಕವಿ ಕಥೆಗಾರರ ಸಾಲಿನಲ್ಲಿ.. ನನ್ನ ಹೆಸರು ಸೇರಿರುತ್ತಿತ್ತು..! ಹೀಗೆಯೇ ಲಡಾಯಿ ಬಳಗದ ಸನ್ಮಿತ್ರರ ಜೊತೆಗಿರುತ್ತ ಮೇ ಸಾಹಿತ್ಯ ಮೇಳದ ಭಾಗವಾದೆ ನಾನು.
ಹೋರಾಟದ ಹಾದಿಯ ಬಗೆಗಿನ ಭಿನ್ನತೆಯ ವಾಗ್ದಾದದ ಜೊತೆಜೊತೆಗೆ ಸಾಹಿತ್ಯ ರಾಜಕಾರಣದ ಬಗ್ಗೆಯೂ ನಮ್ಮಲ್ಲಿ ಮತ್ತೆ ಮತ್ತೆ ಪ್ರಶ್ನೆಗಳು ಮೂಡಿ ಅವು ಸ್ಪಷ್ಟವಾಗುತ್ತ, ನಮ್ಮ ದಾರಿ ಇದು ಎಂದು ಹೋಗುತ್ತಿರುವ ಹೊತ್ತಿನಲ್ಲಿ ಬರೆಹಗಾರರಾಗಿ ನಾನು ಏನು ಮಾಡಬೇಕು.. ಯಾವ ಹಾದಿಯಲ್ಲಿ ನಡೆಯಬೇಕು, ಯಾರೊಂದಿಗಿರಬೇಕು ಎಂದು ನಾನು ಆಲೋಚನೆ ಮಾಡುತ್ತಿರುವಾಗ, ಸಮಕಾಲೀನ ಸವಾಲುಗಳು: ಹೊಸ ತಲೆಮಾರಿನ ಪ್ರತಿಸ್ಪಂದನೆ ಎನ್ನುವ ಅಡಿಶೀರ್ಷಿಕೆಯ ಬರೆಹ ಹೊತ್ತ ಮೇ ಸಾಹಿತ್ಯ ಮೇಳದ ಕಾರ್ಯಕ್ರಮವು ನನ್ನ ಚಿಂತನೆ, ಆಲೋಚನೆಗಳಿಗೆ ತೀರಾ ಹತ್ತಿರ ಅನಿಸಿ ನನಗೆ ಅತ್ಯಂತ ಅಪ್ತವಾಯಿತು. 2016ರ ಮೇ 28 ಮತ್ತು 29 ಎರಡು ದಿನಗಳ ಕಾಲ ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರಡು ದಿನಗಳ ಕಾಲ ಸಕ್ರಿಯ ಭಾಗಿಯಾದೆ. ಧಾರವಾಡ ಕಾರ್ಯಕ್ರಮದ ಮೂಲಕ ಆರಂಭವಾದ ಮೇ ಸಾಹಿತ್ಯ ಮೇಳದ ನಂಟು ನನ್ನನ್ನು ಈಗ 2025ರ ವೇಳೆಯಲ್ಲಿ ರಾಯಚೂರ ಜಿಲ್ಲೆಯ ಸಿಂಧನೂರವರೆಗೂ ಕರೆತಂದಿದೆ.
2016-2025ರ ಅವಧಿಯಲ್ಲಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ನಡೆದ ಮೇ ಬಳಗದ ಕಾರ್ಯಕ್ರಮಗಳ ಪೈಕಿ ನಾನು ಕೆಲವೇ ಕಾರ್ಯಕ್ರಮಗಲ್ಲಿ ಭಾಗಿಯಾಗಿದ್ದೇನೆ. ಮೇ ಸಾಹಿತ್ಯ ಮೇಳದ ಎಲ್ಲ ಕಡೆಗಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗದಿರುವ ಕೊರಗು ಈಗಲೂ ನನ್ನಲ್ಲಿದೆ. ನಾನು ಕಳೆದ ವರ್ಷ ಕೊಪ್ಪಳದಲ್ಲಿಯೇ ಇದ್ದರು ಅಲ್ಲಿಯೇ ನಡೆದ ಪೂರ್ವಭಾವಿ ಸಭೆಗಳಲ್ಲಿ ಭಾಗಿಯಾಗದಷ್ಟು ಪುರುಷೋತ್ತಿಲ್ಲದ ಕಾರ್ಯದೊತ್ತಡದಲ್ಲಿ ಸಿಲುಕಿದ್ದೆ. ನನ್ನ ಮನಸ್ಸು ಮಾತ್ರ ಮೇ ಸಾಹಿತ್ಯ ಮೇಳದತ್ತಲೇ ಇರುತ್ತಿತ್ತು. ಧಾರವಾಡ, ಗದಗ, ವಿಜಯಪುರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಆಯೋಜನೆಯಾದ ಮೇ ಸಾಹಿತ್ಯ ಮೇಳದ ಕಾರ್ಯಕ್ರಮಗಳಲ್ಲಿ ಪೂರ್ಣಪ್ರಮಾಣದಲ್ಲಿ ಗೋಷ್ಠಿಗಳಲ್ಲಿ ಭಾಗಿಯಾಗಿಲ್ಲ. ಹಾಗೆ ಕುಳಿತ ಕೆಲವು ಗೋಷ್ಠಿಯಲ್ಲಿ ಕೇಳಿದ ವಿಚಾರಗಳು ನನ್ನ ಅರಿವು, ಪ್ರಜ್ಞೆಯ ಪರಿಯನ್ನು ವಿಸ್ತರಿಸಿವೆ. ಕಾರ್ಯದ ನಿಮಿತ್ತ ನಾನು ಗೋಷ್ಠಿಯಿಂದ ನಿರ್ಗಮಿಸಿ ಬಾಗಿಲು ದಾಟುತ್ತಿರುವಾಗ ‘ನಾನಿನ್ನು ಕೂಡಬೇಕಿತ್ತು ಗೋಷ್ಠಿಗಳಲ್ಲಿ..’ ಎನ್ನುವುದೊಂದು ಚಡಪಡಿಕೆಯ ಭಾವ ಹುಟ್ಟಿಸಿರುವುದೇ ಮೇ ಸಾಹತ್ಯ ಮೇಳದ ಹೆಚ್ಚುಗಾರಿಕೆಯಾಗಿದೆ.
ಮೇ ಸಾಹಿತ್ಯ ಮೇಳ ಕಾರ್ಯಕ್ರಮವು ರೂಪುಗೊಳ್ಳುವ ಪರಿಯು ನನ್ನನ್ನು ಚಕಿತನನ್ನಾಗಿಸಿದೆ. ಮೇ ಸಾಹಿತ್ಯ ಮೇಳವು ಬರೀ ಗದಗನ ಲಡಾಯಿ ಪ್ರಕಾಶನ, ಕವಲಕ್ಕಿಯ ಕವಿ ಪ್ರಕಾಶನ ಮತ್ತು ಚಿತ್ತಾರ ಕಲಾ ಬಳಗ ಸೇರಿದಂತೆ ಕೆಲವೇ ಸಂಘ ಸಂಸ್ಥೆಗಳ ಕಾರ್ಯಕ್ರಮವಲ್ಲ; ಅದೊಂದು ಸಂಘಟಿತ ಪ್ರಯತ್ನ ಎಂಬುದು ನನ್ನ ಅನಿಸಿಕೆ. ಮೇ ಸಾಹಿತ್ಯ ಮೇಳವನ್ನು ‘ಸಮಕಾಲಿನ ಸ್ಪಂದನೆ’ ಎಂದೇ ವ್ಯಾಖ್ಯಾನಿಸಬಹುದಾಗಿದೆ. ‘ಬಹುತ್ವ ಭಾರತ’ ಆಶಯದ ಮೇ ಬಳಗವು ಸಮಕಾಲಿನ ವಿಷಯ ವಸ್ತುಗಳನ್ನು ತನ್ನ ಥೀಮ್ ಆಗಿಸಿಕೊಂಡು ರೂಪುಗೊಳ್ಳುವ ಪರಿಯು ಮೇ ಸಾಹಿತ್ಯ ಬಳಗದ ಮಿತ್ರರ ವಿಚಾರ ಹಿರಿಮೆ-ಗರಿಮೆ ಆಗಿದೆ. ಕಾರ್ಯಕ್ರಮದ ವೇಳೆ ವಿಭಾ ಸಾಹಿತ್ಯ ಪುರಸ್ಕಾರ ನೀಡಿ ಯುವ ಲೇಖಕರನ್ನು ಹುರಿದುಂಬಿಸುವ ಪರಂಪರೆಯನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ. ‘ಸಮಕಾಲಿನ ಸವಾಲುಗಳು: ಹೊಸ ತಲೆಮಾರಿನ ಸ್ಪಂದನೆ’ ಎನ್ನುವ ಥೀಮಿನೊಂದಿಗೆ ಆರಂಭವಾದ ಮೇ ಬಳಗದ ಪಯಣವು ಮುಂದೆ ‘ಅಭಿವೃದ್ಧಿ ಭಾರತ: ಕವಲುದಾರಿಗಳ ಮುಖಾಮುಖಿ’, ‘ಸ್ವಾತಂತ್ರ್ಯ-75: ನೆಲದ ದನಿಗಳು–ಗಳಿಸಿದ್ದೇನು? ಕಳಕೊಂಡದ್ದೇನು?’, ‘ಭಾರತೀಯ ಪ್ರಜಾತಂತ್ರ: ಸವಾಲು ಮೀರುವ ದಾರಿಗಳು’ ಹೀಗೆ ನಾನಾ ವಿಷಯಗಳನ್ನು ಮುಖ್ಯವಾಗಿರಿಸಿಕೊಂಡು ಮೇ ಬಳಗವು ಕಾರ್ಯಕ್ರಮಗಳನ್ನು ರೂಪಿಸುತ್ತ ಬರೋಬ್ಬರಿ ದಶಕದ ಹಾದಿಯನ್ನು ಕ್ರಮಿಸಿದೆ. ಇದು ಗುರುತರವಾದ ಸಾಧನೆಯೇ ಆಗಿದೆ. ಇತ್ತೀಚೆಗೆ ಸಂವಿಧಾನವನ್ನು ವಿರೂಪಗೊಳಿಸುವ ಮಾತುಗಳು ಕೇಳಿ ಬರಲಾರಂಭಿಸಿದಾಗ ಮೇ ಸಾಹಿತ್ಯ ಬಳಗವು ‘ಸಂವಿಧಾನ ಭಾರತ: ಧರ್ಮ ರಾಜಕಾರಣ’ ಎಂಬುದಾಗಿ ಕೊಪ್ಪಳದಲ್ಲಿ ಎರಡು ದಿನ ಕಾರ್ಯಕ್ರಮ ರೂಪಿಸಿ ಪ್ರಭುತ್ವಕ್ಕೆ ಎಚ್ಚರಿಕೆಯನ್ನು ನೀಡಿದ್ದು ಇತಿಹಾಸ.
ವಿಜಯಪುರದಲ್ಲಿ ನಡೆದ 9ನೇ ಮೇ ಸಾಹಿತ್ಯ ಮೇಳದಲ್ಲಿ ಭಾಗಿಯಾದ ಹಿರಿಯ ಲೇಖಕಿ ಪ್ರೊ.ಮಾಲತಿ ಪಟ್ಟಣಶೆಟ್ಟಿ ಅವರು ‘ಮೇ ಸಾಹಿತ್ಯ ಮೇಳದಲ್ಲಿ ಭಾಗಿಯಾಗಿ ಮನೆಗೆ ಹೊಂಟ ನಿಂತ ನಾನು ಒಂದು ಹೊಸ ವಿಚಾರವನ್ನು, ಒಂದು ಹೊಸ ನಿರ್ಧಾರವನ್ನು, ಒಂದು ಹೊಸ ಸಮಾಜವನ್ನು ಕಟ್ಟುವ ಆಶಯದಿಂದ ಹೊರಟಿದ್ದೇನೆ; ನೀವು ಸಹ ಹಾಗೆಯೇ ಹೊರಟಿದ್ದೀರಿ ಎಂದು ತಿಳಿದುಕೊಂಡಿದ್ದೇನೆ’ ಎಂದು ಮೇ ಸಾಹಿತ್ಯ ಮೇಳದ ಬಗ್ಗೆ ಅಭಿಪ್ರಾಯಪಡುವುದು ಈ ಕಾರ್ಯಕ್ರಮದ ಘನತೆಗೆ ಸಾಕ್ಷಿಯಾಗಿದೆ. ಮೇ ಸಾಹಿತ್ಯ ಮೇಳದ ಘನತೆ, ವಿಶೇಷತೆ, ಅವಶ್ಯಕತೆಯ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ಲೇಖಕರ ಪಟ್ಟಿ ದೊಡ್ಡದಿದೆ. ಮೇ ಸಾಹಿತ್ಯ ಮೇಳದಲ್ಲಿ ತೆಗೆದುಕೊಂಡ ಕೆಲ ನಿರ್ಣಯಗಳ ವಿಷಯವು ರಾಜಧಾನಿ ತಲುಪಿ ಸ್ವತಃ ಮುಖ್ಯಮಂತ್ರಿ ಅವರೇ ಪ್ರತಿಕ್ರಿಯಿಸಿದ್ದು ಸಹ ಈ ಮೇಳದ ಸಾಧ್ಯತೆಗೆ ಸಾಕ್ಷಿಯಂತಿದೆ.
ಹೊಸ ಸಾಹಸಗಾಥೆ: ಮೇ ಸಾಹಿತ್ಯ ಬಳಗದ ಕಾರ್ಯಕ್ರಮವನ್ನು ಹೊಸ ಸಾಹಸಗಾಥೆ ಎಂದೇ ನಾನು ಅರ್ಥೈಸಿಕೊಂಡಿದ್ದೇನೆ. ಕಾರ್ಯಕ್ರಮದ ನಡೆಯುವ ಹಿಂದಿನ ಮೂರ್ನಾಲ್ಕು ತಿಂಗಳ ಕಾಲಾವಧಿಯಲ್ಲಿ ನಿಯಮಿತವಾಗಿ ನಡೆಯುವ ಪೂರ್ವಭಾವಿ ಸಭೆಗಳು, ಅಲ್ಲಿನ ಚರ್ಚೆಗಳು, ಕಾರ್ಯಕ್ರಮದ ಕೇಂದ್ರ ಸ್ಥಾನದಲ್ಲಿನ ಸಂಘಟನೆಗಳೊಂದಿಗೆ ಮಾತುಕತೆ, ಅವರ ಅಭಿಪ್ರಾಯ, ಸಲಹೆ ಆಲಿಕೆ, ಕಾರ್ಯಕ್ರಮದ ಮುಖ್ಯ ವಿಷಯದ ಚರ್ಚೆ, ಗೋಷ್ಠಿಯ ವಿಷಯ ವಿಚಾರಗಳ ಚರ್ಚೆ, ಜಿಲ್ಲಾ ಕೇಂದ್ರಿತ ನಿರ್ಣಯಗಳ ಮಂಡನೆಯ ವಿಷಯ ಚರ್ಚೆ, ಸಂಪನ್ಮೂಲ ವ್ಯಕ್ತಿಗಳ ಆಯ್ಕೆ, ಆಹ್ವಾನ ಪತ್ರಿಕೆ ರೂಪಿಸುವುದು, ಕಾರ್ಯಕ್ರಮದ ಸಂಯೋಜನೆ, ಕವಿಗೋಷ್ಠಿ, ಮುಖ್ಯ ಭಾಷಣ, ಸಮಾರೋಪ ಭಾಷಣ, ನೋಂದಣಿ, ಅತಿಥಿಗಳು, ಆಮಂತ್ರಿತರರಿಗೆ ವಸತಿ ವ್ಯವಸ್ಥೆ ಮಾಡುವುದು ಹೀಗೆ ಪ್ರತಿಯೊಂದು ಅಳೆದು ತೂಗಿ ನಿರ್ಣಯವಾಗಿ ಶಿಸ್ತುಬದ್ಧವಾಗಿ ಕಾರ್ಯಕ್ರಮವು ರೂಪುಗೊಳ್ಳುವ ಪರಿಯು ನನಗಂತೂ ಅಚ್ಚರಿ ಹುಟ್ಟಿಸುತ್ತದೆ. ಒಳ್ಳೆಯ ಮನಸಿನ ವ್ಯಕ್ತಿಗಳಿಂದ ಮಾತ್ರ ಇಂತಹ ಕಾರ್ಯಕ್ರಮಗಳು ಸಾಧ್ಯವಾಗುತ್ತವೆ. ತಾಯಿ ಮನಸಿನ ಬಸೂ ಮೇಷ್ಟ್ರು ಆದಿಯಾಗಿ ಮೇ ಬಳಗದ ಎಲ್ಲ ಮಹನಿಯರ ಈ ಕಾರ್ಯವು ನನಗೆ ಸಾಹಸಗಾಥೆ ಎಂದೇ ಅನಿಸುತ್ತದೆ.
ಪುಸ್ತಕ ಪರಿಚಾರಿಕೆ: ಸಮಕಾಲಿನ ಸ್ಪಂದನೆಯ ಪುಸ್ತಕ ಪರಿಚಾರಿಕೆಯ ಕಾರ್ಯವು ಸಹ ಮೇ ಸಾಹಿತ್ಯ ಮೇಳದ ಜೊತೆಜೊತೆಗೆ ನಡೆಯುವುದು ಮತ್ತೊಂದು ವಿಶೇಷ. ಮೇ ಸಾಹಿತ್ಯ ಮೇಳಕ್ಕೆ ಪೂರಕವಾದ ಆರೋಗ್ಯಕರ ಚಿಂತನೆಯ ಹೊಸ ಸಮಾಜ ಕಟ್ಟುವ ಕನಸುಗಳ ಹಿನ್ನೆಲೆಯ ಸಣ್ಣ ಸಣ್ಣ ಗ್ರಂಥಗಳನ್ನು ಹೊರತರಬೇಕು. ಅಂತಹ ಕೆಲಸವನ್ನು ನಾವೆಲ್ಲರೂ ಸೇರಿ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಜಾನಪದ ವಿದ್ವಾಂಸರಾದ ಕಾಳೇಗೌಡ ನಾಗವಾರ ಅವರು ಅಭಿಪ್ರಾಯಪಟ್ಟಂತೆ ಬಸೂ ಅವರು ಸಮಕಾಲಿನ ಸ್ಪಂದನೆಯ ಅನೇಕ ಬಗೆಯ ಪುಸ್ತಕಗಳನ್ನು ಅನೇಕ ಚಿಂತಕರಿಂದ ಬರೆಯಿಸಿ ಪ್ರಕಟಿಸಿ ಮೇ ಸಾಹಿತ್ಯ ಮೇಳದ ಸಂದರ್ಭದಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದು ಉತ್ತಮ ಕಾರ್ಯವಾಗಿದೆ. ಈ ವೇಳೆ ಉತ್ತಮವಾದ ಬೇರೆ ಬೇರೆ ಪ್ರಕಾಶನಗಳ ಪುಸ್ತಕಗಳ ಮಾರಾಟಕ್ಕೂ ಸಹ ಅವಕಾಶ ನೀಡುವುದು ‘ಪುಸ್ತಕ ಓದು’ ಸಂಸ್ಕøತಿಯ ಕಾರ್ಯಕ್ಕೆ ಪ್ರೇರಣದಾಯಕವಾದ ಕಾರ್ಯವಾಗಿದೆ.
ಎಲ್ಲರನ್ನೊಳಗೊಳ್ಳುವ ಪರಿ: ಪ್ರತಿ ವರ್ಷ ವಿಭಿನ್ನ ಬಗೆಯ ವಿಷಯದೊಂದಿಗೆ ಜನರ ಬಳಿಗೆ ಹೋಗುವ ಮೇ ಬಳಗದ ಆಶಯವು ಒಂದು ರೀತಿಯದ್ದಾದರೆ ಅದರ ಆರ್ಥಿಕ ಸಂಪನ್ಮೂಲದ ರೀತಿ ರಿವಾಜು ಬೆರಗುಗೊಳಿಸುತ್ತದೆ. ನಾಡಗಲಕ್ಕೂ ಇರುವ ಚಿಂತಕರು, ಲೇಖಕ ಲೇಖಕಿಯರು, ಕಲಾವಿದರು, ಸಂಘಟಿಕರು, ಸಂಘ ಸಂಸ್ಥೆಗಳು, ಶಿಕ್ಷಕರು, ನೌಕರರು ತಮ್ಮ ಕೈಲಾದಷ್ಟು ಹಣ ನೀಡುತ್ತಾರೆ. ಉಪಾಹಾರ, ಊಟ, ವಸತಿ ವ್ಯವಸ್ಥೆಗೆ ಸಹಾಯ ಮಾಡುತ್ತಾರೆ. ಕೆಲವರು ಎರಡು ದಿನಗಳ ಕಾಲ ಕಾರ್ಯಕ್ರಮದಲ್ಲಿದ್ದು ಊಟ ಉಪಾಹಾರ ನೀರು ಸರಬರಾಜು ಸೇರಿದಂತೆ ಹತ್ತಾರು ಬಗೆಯ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಮೇ ಬಳಗದ ಮೇಲಿನ ಪ್ರೀತಿ, ಅಂತಃಕರಣಕ್ಕೆ ಸಾಕ್ಷಿಯೆಂಬಂತೆ ಕೈಲಾದಷ್ಟು ರೊಟ್ಟಿ, ಹೋಳಿಗೆ, ಹಪ್ಪಳ, ಸಂಡಿಗೆ ಮಾಡಿ ಕೆಲವರು ಮೇಳಕ್ಕೆ ಕೈಜೋಡಿಸುತ್ತಾರೆ. ಹಣಕಾಸಿನ ಕ್ರೋಡೀಕರಣ, ಲೆಕ್ಕಪತ್ರದಲ್ಲಿ ಪಾರದರ್ಶಕತೆ ಕಾಯ್ದುಕೊಂಡ ಕಾರಣದಿಂದಲೂ ಮೇ ಬಳಗದ ಮಿತ್ರರ ಬಗ್ಗೆ ಜನಮಾನಸದಲ್ಲಿ ವಿಶ್ವಾಸ ಪಡಿಮೂಡಿ ಕಾರ್ಯಕ್ರಮವು ಎಲ್ಲರನ್ನೊಳಗೊಂಡು ಪ್ರತಿ ವರ್ಷವೂ ಯಶ ಕಾಣುತ್ತಿದೆ.
‘ಮೇ ಮೇಳದ ಆಳದಲ್ಲಿ ದಲಿತರ ಸಂಕಟಗಳಿವೆ; ಎದೆಯಲ್ಲಿ ಅಲ್ಪಸಂಖ್ಯಾತರ ಪರದೇಶಿತನದ ಪ್ರಜ್ಞೆಯ ನೋವಿದೆ. ರೈತ, ಕಾರ್ಮಿಕ, ಮಹಿಳೆಯರು ಸೇರಿದಂತೆ ಈ ನೆಲದ ದನಿಗಳಿವೆ’ ಎಂದು ಲೇಖಕರಾದ ಬಿ ಶ್ರೀನಿವಾಸ ಅವರು ಮೇ ಸಾಹಿತ್ಯ ಮೇಳದ ಬಗ್ಗೆ ಅಭಿಪ್ರಾಯಪಡುತ್ತಾರೆ. ನಾಡಗಲದ ಅನೇಕ ಸಾಹಿತಿ ಚಿಂತಕರ ಅಭಿಪ್ರಾಯವೂ ಇದೆ ಆಗಿದೆ. ತಾಯಿ ಮನಸಿನ ಬಸೂ ಮೇಷ್ಟ್ರು, ಅಂತಃಕರಣದ ಚಿಂತಕಿ ಹೆಚ್ ಎಸ್ ಅನುಪಮ ಮತ್ತು ಅವರ ಸಹ ಮಿತ್ರರ ಪರಿಕಲ್ಪನೆಯ ಮೇ ಸಾಹಿತ್ಯ ಮೇಳಕ್ಕೀಗ 11ನೇ ವರ್ಷ. ಹಿಂದಿನ 10 ವರ್ಷಗಳ ಹಾದಿಯಲ್ಲಿನ ಬದ್ಧತೆಯನ್ನೇ ಮೇ ಬಳಗವು ಉಳಿಸಿಕೊಂಡು ಸಾಗಿದೆ. ರಾಯಚೂರ ಜಿಲ್ಲೆಯ ಸಿಂಧನೂರಿನಲ್ಲಿ ಆಯೋಜನೆಯಾದ 11ನೇ ವರ್ಷದ ಮೇ ಸಾಹಿತ್ಯ ಮೇಳದಲ್ಲಿ ಭಾಗವಹಿಸಲು ರಾಜ್ಯದ ನಾನಾ ಭಾಗದ ಲೇಖಕರು, ಕಲಾವಿರು, ಬುದ್ದಿ ಜೀವಿಗಳು, ಸಂಘಟಿಕರು ಉತ್ಸುಕರಾಗಿ ನೋಂದಣಿ ಪ್ರಮಾಣವು ಈಗಾಗಲೇ ಗರಿಷ್ಟ ಸಂಖ್ಯೆಯನ್ನು ದಾಟಿದೆ. ಜನಮಾನಸ ಗೆಲ್ಲುತ್ತಿದೆ ಮೇ ಬಳಗವು ಎಂಬುದನ್ನು ಇದು ತೋರಿಸುತ್ತದೆ.
ವರ್ತಮಾನದ ಭಾರತದಲ್ಲಿ ಅಸಮಾನತೆಯ ಗೋಡೆಗಳು ಏರುತ್ತಲೇ ಇವೆ. ಎಲ್ಲೆಡೆ ಜನರಲ್ಲಿ ಅತೃಪ್ತಿ ಮನೆ ಮಾಡುತ್ತಿದೆ. ಸಂವಿಧಾನ ಮತ್ತು ಅದರ ಆಶಯಗಳಿಗೆ ಕೊಡಲಿಪೆಟ್ಟು ಹಾಕುವ ಸಂಚನ್ನು ರೂಪಿಸಲಾಗುತ್ತಿದೆ. ಭಯೋತ್ಪಾದನೆ ತಾಂಡವವಾಡುತ್ತಿದೆ. ತನ್ನ ಪ್ರಮುಖ ಜವಾಬ್ದಾರಿ ನಿರ್ವಹಣೆಯಲ್ಲಿ ರಾಜಕಾರಣ ಸೋಲುತ್ತಿದೆ. ಇಂತಹ ಸವಾಲುಗಳ್ನು ನಾವುಗಳು ಈಗ ಎದುರಿಸಬೇಕಿದೆ. ಭಾರತವು ಸರ್ವ ಜನಾಂಗದ ಶಾಂತಿಯ ತೋಟವಾಗಿರುಂತೆ ನೋಡಿಕೊಳ್ಳಬೇಕಿದೆ. ಇಂತಹ ಸಂದರ್ಭದಲ್ಲಿ, ತಾತ್ವಿಕ ಬದ್ಧತೆಯೊಂದಿಗೆ ಕಣ್ಣು ತೆರದು, ಗಟ್ಟಿಯಾಗಿ ಬೆಳೆದು ಮುನ್ನುಗ್ಗುತ್ತಿರುವ ಮೇ ಮೇಳದ ಕಾರ್ಯವು ಚೆಂದದ ಬದುಕಿನ ಭರವಸೆಯಂತೆ ಕಾಣುತ್ತದೆ. ದೇಶದ ನಾನಾ ಭಾಗಗಳಿಂದ ಆಗಮಿಸಿ ವಿಷಯ ಮಂಡಿಸುವ ಚಿಂತಕರ ವಿಚಾರ ವೈವಿದ್ಯ, ಪ್ರತಿವರ್ಷವೂ ಹೊಸಬರ ಪ್ರವೇಶ, ನಮ್ಮನ್ನು ಕಾಡಿ ಪೀಡಿಸುವ ನಾನಾ ವಿಷಯಗಳ ಚರ್ಚೆ-ಸಂವಾದ, ಹೋರಾಟದ ಹಾಡುಗಳು ಎಲ್ಲವೂ ಎಲ್ಲವೂ ನಮ್ಮ ಚಿಂತನಾ ಕ್ರಮವನ್ನು ಸರಿ ಮಾಡುವ ಪರಿಯು, ಲೋಕದ ಜನಹಿತಕ್ಕಾಗಿ ನಾವೇನಾದರು ಮಾಡೋಣ ಎಂದು ಹೇಳುವ ಮೇ ಸಾಹಿತ್ಯ ಮೇಳದ ಅಂತಿಮ ಆಶಯವು ನನಗೆ ಇಷ್ಟವಾಗುತ್ತದೆ.
* ಹೊಸಮನಿ ಗವಿಸಿದ್ಧ, ಕುಷ್ಟಗಿ
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್