ಬೆಂಗಳೂರು, 12 ಮೇ (ಹಿ.ಸ.) :
ಆ್ಯಂಕರ್ : ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕುರಿತು ಒಂದು ಸಂಕ್ಷಿಪ್ತ ಲೇಖನ ಇಲ್ಲಿದೆ :
ದೇಶದ ಭದ್ರತೆ, ಶಾಂತಿ ಮತ್ತು ಸಾಮರಸ್ಯಕ್ಕಾಗಿ ಸದಾ ಎಚ್ಚರಿಕೆಯಿಂದ ನಿಂತಿರುವವರು ಅಜಿತ್ ದೋವಲ್. ದೇಶದ ಒಳಗಿನ ಹಾಗೂ ಹೊರಗಿನ ಅಪಾಯಗಳನ್ನು ನಿಖರವಾಗಿ ಗುರುತಿಸಿ, ತಕ್ಕ ಪ್ರತಿ ಕ್ರಮ ಕೈಗೊಳ್ಳುವಲ್ಲಿ ಅವರು ಮಾದರಿಯಾಗಿದ್ದಾರೆ.
ಅಜಿತ್ ದೋವಲ್ ಅವರು ಉತ್ತರಾಖಂಡ ಮೂಲದವರು. 1968ರಲ್ಲಿ ಕೇರಳ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿ ಸೇವೆಗೆ ಸೇರಿದರು. ನಂತರ ಇಂಟೆಲಿಜೆನ್ಸ್ ಬ್ಯೂರೋ (ಐಬಿ)ಯಲ್ಲಿ ತಮ್ಮ ಗುಪ್ತಚರ ಸೇವೆಯನ್ನು ಪ್ರಾರಂಭಿಸಿದರು. ಸೇವೆ ಆರಂಭದಲ್ಲೇ ಪಾಕಿಸ್ತಾನದಲ್ಲಿ ಗೂಢಚಾರಿಯಾಗಿ ಕೆಲಸ ಮಾಡುವ ಮಹತ್ತರ ಜವಾಬ್ದಾರಿ ಅವರಿಗೆ ಸಿಕ್ಕಿತು. ಶತ್ರು ರಾಷ್ಟ್ರದಲ್ಲಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿ, ಪಾಕಿಸ್ತಾನದ ಸೇನೆ, ಐಎಸ್‌ಐ ಹಾಗೂ ಉಗ್ರ ಸಂಘಟನೆಗಳ ಶಕ್ತಿಶಾಲಿ ಜಾಲವನ್ನೇ ಬಿಚ್ಚಿಟ್ಟರು.
1975ರಲ್ಲಿ ಭಾರತಕ್ಕೆ ಹಿಂದಿರುಗಿದ ನಂತರ, ದೋವಲ್ ಅವರು ಮಿಜೋರಾಂ ಶಾಂತಿ ಒಪ್ಪಂದ, ಸಿಕ್ಕಿಂ ವಿಲೀನ, ಪಂಜಾಬ್‌ನ ಖಲಿಸ್ತಾನ್ ಚಳವಳಿ ನಿರ್ಮೂಲನೆ ಸೇರಿದಂತೆ ಹಲವು ಮಹತ್ವದ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡರು. ಗೋಲ್ಡನ್ ಟೆಂಪಲ್‌ನಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಗಳು, ಆಪರೇಷನ್ ಬ್ಲಾಕ್ ಥಂಡರ್, ಹಾಗೂ ವಿದೇಶದಲ್ಲಿರುವ ಭಾರತೀಯರನ್ನು ರಕ್ಷಿಸುವ ಕಾರ್ಯಾಚರಣೆಗಳೂ ಅವರ ತಂತ್ರಜ್ಞಾನದ ಫಲ.
1999ರಲ್ಲಿ ಕಂದಹಾರ್ ವಿಮಾನ ಅಪಹರಣ ಸಂದರ್ಭದಲ್ಲಿ, ಉಗ್ರರೊಂದಿಗೆ ನಡೆಸಲಾದ ಮಾತುಕತೆಗೂ ಅವರು ಪ್ರಮುಖ ನೆಡೆಸಿದವರು. ಈ ಸಮಯದಲ್ಲಿ ತಾಳ್ಮೆ, ಬುದ್ಧಿವಂತಿಕೆ ಮತ್ತು ರಾಜತಾಂತ್ರಿಕ ಕೌಶಲ್ಯವನ್ನು ಅವರು ಮೆರೆದರು.
2005ರಲ್ಲಿ ಅವರು ಸೇವೆಯಿಂದ ನಿವೃತ್ತಿಯಾದರೂ, 2014ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ನೇಮಿಸಿತು. ಈ ಹುದ್ದೆಯಲ್ಲಿ ದೋವಲ್ ಅವರು ದೇಶದ ಭದ್ರತಾ ತಂತ್ರವಿಧಾನಕ್ಕೆ ಹೊಸ ವಾತಾವರಣ ನೀಡಿದರು. ಉರಿ ಹಾಗೂ ಪುಲ್ವಾಮಾ ಉಗ್ರದಾಳಿಗಳ ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್‌ಗಳು ಹಾಗೂ ಬಾಲಾಕೋಟ್ ಎಯರ್‌ಸ್ಟ್ರೈಕ್‌ಗಳಿಗೆ ಅವರು ಮಾರ್ಗದರ್ಶನ ನೀಡಿದರು.
ಅಯೋಧ್ಯೆ ತೀರ್ಪು ಹೊರಬೀಳುವ ಸಂದರ್ಭದಲ್ಲಿ ದೇಶದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಮುಸ್ಲಿಂ ಧಾರ್ಮಿಕ ಮುಖಂಡರೊಂದಿಗೆ ನಡೆಸಿದ ಸಂವಾದ, ಅವರ ರಾಜತಾಂತ್ರಿಕ ವಿವೇಕಶಕ್ತಿಯ ಉದಾಹರಣೆ.
ಅಜಿತ್ ದೋವಲ್ ಅವರು ಭದ್ರತಾ ವಿಚಾರಗಳಲ್ಲಿ ಕೇವಲ ರಣತಂತ್ರಗಳಷ್ಟೆ ಅಲ್ಲ, ಮಾನವೀಯ ಹಿತದೃಷ್ಟಿಯೂ ಹೊಂದಿರುವ ವ್ಯಕ್ತಿ. 80 ವರ್ಷ ವಯಸ್ಸಾದರೂ, ದೇಶದ ಸೇವೆಯಲ್ಲಿ ಸಕ್ರಿಯರಾಗಿರುವ ಅವರಲ್ಲಿ ಸೈನಿಕ ಮನೋಭಾವವನ್ನೇ ಪ್ರತಿಬಿಂಬಿಸುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa