ಗದಗ, 30 ಮಾರ್ಚ್ (ಹಿ.ಸ.) :
ಆ್ಯಂಕರ್ : ಗದಗ ಶಹರ ಹಾಗೂ ಬೆಟಗೇರಿ ಬಡಾವಣೆ ಠಾಣೆ ವ್ಯಾಪ್ತಿಯ 7 ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಳ್ಳರನ್ನು ಬಂಧಿಸಿದ್ದು, ಬಂಧಿತರಿಂದ 7.60 ಲಕ್ಷ ರೂ. ಮೌಲ್ಯದ 130 ಗ್ರಾಂ ಬಂಗಾರದ ಆಭರಣಗಳು, 1.52 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳು ಹಾಗೂ ಬೆಳ್ಳಿ ನಾಣ್ಯಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಮೂಲತಃ
ತಮಿಳುನಾಡಿನ ತಿರುವಾವುರು ಜಿಲ್ಲೆಯ ನಾಗಫಟೀನಾ ತಾಲೂಕಿನ ಪುನವಾಸನ ಸ್ಟ್ರೀಟ್ ನ ವೆಂಕಟೇಶನ್ ರಂಗನಾಥನ ವಡಬಾದಿ ಮಂಗಳಂ ಹಾಗೂ ಚೆನ್ನೈ ನ ನಚ್ಚಿಕುಪ್ಪಂನ ಲೈಟ್ ಹೌಸ್ ನ ನಿವಾಸಿ ಸೂರ್ಯ ಶೆಟ್ಟಿ ವಿಜಯಕುಮಾರ ಇಬ್ಬರು ಹೈದ್ರಾಬಾದ್ ನ ಎಲ್ ಬಿ ನಗರದ ಬೊಮ್ಮಳಗುಡಿಯಲ್ಲಿ ವಾಸವಿದ್ದರು.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾತನಾಡಿ, ಆರೋಪಿಗಳು ಮೂಲತಃ ತಮಿಳುನಾಡಿನವರಾಗಿದ್ದು, ಹೈದ್ರಾಬಾದ್ ನಲ್ಲಿ ವಾಸವಾಗಿದ್ದರು.
ಬಸ್ ಹಾಗೂ ಟ್ರೈನ್ ಮೂಲಕ ಗದಗ ನಗರಕ್ಕೆ ಆಗಮಿಸಿ ಕೀಲಿ ಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಮತ್ತೆ ಟ್ರೈನ್ ಹಾಗೂ ಬಸ್ ಮೂಲಕ ಪರಾರಿಯಾಗುತ್ತಿದ್ದರು. ಈ ರೀತಿ ಗದಗ ಶಹರ ಹಾಗೂ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಒಟ್ಟು 7 ಪ್ರಕರಣಗಳು ದಾಖಲಾಗಿದ್ದವು.
7 ಪ್ರಕರಣಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ. ಸಂಕದ, ಡಿವೈಎಸ್ಪಿ ಪ್ರಭುಗೌಡ ಕಿರೇದಹಳ್ಳಿ ಮಾರ್ಗದರ್ಶನದಲ್ಲಿ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಪ್ರಕರಣ ಬೆನ್ನತ್ತಿದ ಪೊಲೀಸ್ ತಂಡ ಆರೋಪಿಗಳನ್ನು ವಶಕ್ಕೆ ಪಡೆಯಲು ಯಶಸ್ವಿಯಾಗಿದ್ದಾರೆ ಎಂದರು.
ಇಬ್ಬರು ಅಂತಾರಾಜ್ಯ ವಂಚಕರ ಬಂಧನ:
ಬೆಟಗೇರಿ ಬಡಾವಣೆ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಬಂಗಾರ ತೊಳೆದು ಹೊಳಪು ಬರುವ ಹಾಗೆ ಮಡಿಕೊಡುತ್ತೇವೆ ಎಂದು ನಂಬಿಸಿ 1.40 ಲಕ್ಷ ರೂ. ಮೌಲ್ಯದ 35 ಗ್ರಾಂನ ಬಂಗಾರದ ಚೈನ್, 1.80 ಲಕ್ಷ ರೂ. ಮೌಲ್ಯದ 45 ಗ್ರಾಂ ಬಂಗಾರದ ಬಳೆಗಳು 40 ಸಾವಿರ ಮೌಲ್ಯದ 10 ಗ್ರಾಂ ಬಂಗಾರದ ಚೈನ್, 12 ಸಾಚಿರ ಮೌಲ್ಯದ 3 ಗ್ರಾಂ ಬಂಗಾರದ ಉಂಗುರ ಸೇರಿ 3.72 ಲಕ್ಷ ರೂ. ಮೌಲ್ಯದ 93 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಬಿಹಾರದ ಕಗರಿಯಾ ಜಿಲ್ಲೆಯ ಗೋಗಡಿ ತಾಲೂಕಿನ ಗೋವಿಂದಪೂರ ಗ್ರಾಮದ ಬಟ್ಟೆ ವ್ಯಾಪಾರಿ ದೀಪಕ್ ಅಶೋಕ ಗುಪ್ತಾ ಹಾಗೂ ಬಿಹಾರದ ಭಾಗಲಪೂರ ಜಿಲ್ಲೆಯ ನಗೋಚಿಯಾ ತಾಲೂಕಿನ ಜಮುನಿಯಾ ಗ್ರಾಮದ ಬಟ್ಟೆ ವ್ಯಾಪಾರಿ ಬಿಪಿನಕುಮಾರ ನಂದಕಿಶೋರ ಶಾಹ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಆರೋಪಿತರ ಮೇಲೆ ಹಳೆ ಪ್ರಕರಣಗಳಿದ್ದು, ಜಾಮೀನು ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಮನವ ಸಲ್ಲಿಸಲಾಗಿದೆ.
ಬಿಹಾರದ ಆರೋಪಿಗಳು ಒಂಟಿ ಮಹಿಳೆ ಇರುವ ಮನೆಯನ್ನು ಟಾರ್ಗೆಟ್ ಮಾಡಿ ಮನೆಗೆ ಹೋಗಿ ಬಂಗಾರ ತೊಳೆದು ಹೊಳಪು ಬರುವ ಹಾಗೆ ಮಡಿಕೊಡುತ್ತೇವೆ ಎಂದು ನಂಬಿಸಿ ವರದಿ ಬಂಗಾರದೊಂದಿಗೆ ಪರಾರಿಯಾಗುತ್ತಿದ್ದರು. ಇದೇ ರೀತಿ ಮೈಸೂರು, ಬೆಂಗಳೂರು ನಗರ ಹಾಗೂ ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಕೂಡ ಇವರ ಮೇಲೆ ಪ್ರಕರಣಗಳು ದಾಖಲಾಗಿವೆ. ಆರೋಪಿತರ ಪತ್ತೆಗೆ ವಿಶೇಷ ತಂಡಗಳ ರಚನೆ ಮೂಲಕ ಆರೋಪಿಗಳನ್ನು ಹುಬ್ಬಳ್ಳಿಯಲ್ಲಿ ದಸ್ತಗಿರ ಮಾಡಲಾಗಿದ್ದು, ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಲ್ಲದೇ, ಪ್ರಕರಣದ ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಕ್ತ ಬಹುಮಾನ ನೀಡುವುದಾಗಿ ಘೋಷಿಸಿದರು. ಜೊತೆಗೆ ಸಾರ್ವಜನಿಕರು ಮನೆಮನೆಗೆ ಬಂಗಾರ ತೊಳೆದು ಕೊಡುವುದಾಗಿ ಬರುವ ಆಗಂತುಕರಿಂದ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದರು.
ಈಗಾಗಲೇ ಸಾರ್ವಜನಿಕರಿಗೆ ಮನೆ ಕಳ್ಳತನ ಮುನ್ನೆಚ್ಚರಿಕೆ ಕ್ರಮಗಳು, ವಾಹನ ಕಳ್ಳರಿಂದ ಎಚ್ಚರಿಕೆ, ಸರಗಳ್ಳತನದ ಮುನ್ನೆಚ್ಚರಿಕೆ ಹಾಗೂ ಸೈಬರ್ ಅಪರಾಧ ತಡೆಗಟ್ಟುವ ಎಚ್ಚರಿಕೆ ಕ್ರಮಗಳ ಕುರಿತು ಜಿಲ್ಲೆಯ ಮನೆಮನೆಗೂ ಜಾಗೃತಿ ಮೂಡಿಸುವುದರ ಮೂಲಕ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಭಿತ್ತಿ ಪತ್ರಗಳನ್ನು ವಿತರಿಸಲಾಗುತ್ತಿದೆ. ಸಾರ್ವಜನಿಕರು ಕೂಡ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆಯಿದ್ದು, ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಹೇಳಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ. ಸಂಕದ, ಡಿವೈಎಸ್ಪಿ ಪ್ರಭುಗೌಡ ಕಿರೇದಹಳ್ಳಿ, ಸಿಪಿಐ ಧೀರಜ್ ಶಿಂಧೆ, ಡಿ.ಬಿ. ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP