ಕೋಲಾರ, ೨೯ ಮಾರ್ಚ್ (ಹಿ.ಸ) : ಸರ್ಕಾರದಿಂದ ಕಂದಾಯ ಕಾಯ್ದೆ, ಸೇರಿದಂತೆ ಭೂಸುಧಾರಣೆ ಕಾಯ್ದೆಗಳ ಅಡಿಯಲ್ಲಿ ರೈತರಿಗೆ ಮಂಜೂರು ಮಾಡಿರುವ ಸರ್ಕಾರದ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಯವರು ಅಕ್ರಮವಾಗಿ ತೆರವುಗೊಳಿಸುತ್ತಿರುವುದನ್ನು ಕೈಬಿಡುವಂತೆ ಒತ್ತಾಯಿಸಿ ಸಂಯುಕ್ತ ಹೋರಾಟ ಸಮಿತಿಯ ಮುಖಂಡರು ಅಪರ ಜಿಲ್ಲಾಧಿಕಾರಿ ಮಂಗಳಾ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕÀರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಎಂ ವೆಂಕಟೇಶ್ ಮಾತನಾಡಿ ರೈತ ಅಂದರೆ ಅನ್ನದಾತ ಇಡೀ ಮಾನವ ಕುಲಕ್ಕೆ ಆಹಾರ ಉತ್ಪಾದನೆ ಮಾಡುವ ಅನ್ನದಾತರು ಅಳುವ ಸರ್ಕಾರಗಳ ಧೋರಣೆಗಳಿಂದ ವಂಶಪಾರAಪರ್ಯವಾಗಿ ನಂಬಿದ್ದ ಕೃಷಿಯಿಂದ ದೂರ ಉಳಿಯುವಂತಾಗಿದೆ. ಕಾರ್ಪೋರೇಟೀಕರಣದ ಕೃಷಿಯನ್ನು ಬೆಂಬಲಿಸುತ್ತಿರುವ ಸರ್ಕಾರಗಳು, ಅದಕ್ಕೆ ರಕ್ಷಕರಾಗಿ ನಿಂತಿರುವ ಅಧಿಕಾರಿಶಾಹಿ ವರ್ಗದ ನೀತಿಗಳಿಂದ ಈ ದೇಶದ ರೈತರು ದಿನ ನಿತ್ಯ ಹತ್ತು ಹಲವು ಸಂಕಷ್ಠಗಳನ್ನು ಎದುರಿಸುಂತಾಗಿದೆ ಕೃಷಿ ಮಾಡುವ ರೈತರು ಈ ನೆಲದ ಭೂಮಿಯನ್ನೇ ನಂಬಿ ಬದುಕುತ್ತಾ ಬಂದಿದ್ದಾರೆ ಅಂತಹ ರೈತರನ್ನು ಬೀದಿಗೆ ತರಲು ಹೊರಟಿದ್ದಾರೆ ಎಂದು ಆರೋಪಿಸಿದರು
ಕಾನೂನು ಬದ್ದವಾಗಿ ರೈತರಿಗೆ ಭೂಮಿ ಹಂಚಲು ಕರ್ನಾಟಕದಲ್ಲಿ ೪೦ಕ್ಕೂ ಹೆಚ್ಚು ಬಾರಿ ಕಂದಾಯ ಮತ್ತು ಭೂಸುಧಾರಣಾ ಕಾಯ್ದೆಗಳಿಗೆ ತಿದ್ದುಪಡಿ ತಂದು ಭೂಹೀನರಿಗೆ, ಸಣ್ಣ ರೈತರಿಗೆ ಹಾಗೂ ದಲಿತರಿಗೆ ಭೂಮಿ ಹಂಚಲಾಗಿದೆ. ೧೯೦೬ರಲ್ಲಿ ರೂಪಗೊಂಡ ಕಂದಾಯ ಭೂಮಿ ದಾಖಲೆಗಳ ಪ್ರಕಾರ ಹಾಗೂ ಭೂಸುಧಾರಣೆಗಳ ಕಾಯ್ದೆಗಳ ಹಿನ್ನೆಲೆಯಲ್ಲಿ ೧೯೬೧ ರಿಂದ ಮತ್ತು ೨೦೧೮ ರವರೆಗೂ ಭೂಕಾಯ್ದೆಗಳಿಂದ ಜಿಲ್ಲೆಯಾದ್ಯಂತ ಲಕ್ಷಾಂತರ ರೈತರು ಕಾನೂನು ಬದ್ದವಾಗಿ ಭೂಮಿಯ ಹಕ್ಕುದಾರರಾಗಿದ್ದಾರೆ.
ಹಲವಾರು ವರ್ಷಗಳಿಂದ ಸಾಗುವಳಿ ಮಾಡಿ ಸರ್ಕಾರದ ನಿಯಮಾನುಸಾರ ಸಾಗುವಳಿ ಚೀಟಿಯನ್ನು ಪಡೆದು, ಪೋಡಿ ಮಾಡಿಕೊಂಡು ಹೊಸ ಸರ್ವೆ ನಂಬರ್ ಪಡೆದಿದ್ದಾರೆ. ಆದರೂ ತಾಲ್ಲೂಕಿನ ಕೋಟಿಗಾನಹಳ್ಳಿ, ಹರಟಿ, ಹರಳಕುಂಟೆ, ಅಬ್ಬಣ, ಹೆಚ್. ಮಲ್ಲಾಂಡಹಳ್ಳಿ, ಶಿಳ್ಳಂಗೆರೆ ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ ಎಂದು ಆರೋಪಿಸಿದರು
ರಾಜ್ಯ ರೈತ ಸಂಘ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಮಾತನಾಡಿ ರೈತರು ತಮ್ಮ ಜಮೀನನನ್ನು ಅಭಿವೃದ್ಧಿ ಪಡಿಸಲು, ಬೆಳೆ ಬೆಳೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜಮೀನಿನಲ್ಲಿ ಕೊಳವೆ ಬಾವಿ, ಇತರೆ ಬೆಳೆಗಳನ್ನು ಬೆಳೆಯಲು ಇದೇ ಜಮೀನಿನ ಮೇಲೆ ಬ್ಯಾಂಕ್ ಮತ್ತು ಖಾಸಗಿಯವರಿಂದ ಸಾಲ ಸಹ ಪಡೆದಿರುತ್ತಾರೆ. ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಪೊಲೀಸ್ ಬಂದೋಬಸ್ತ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಯ ಸಹಾಯದಿಂದ ಅಕ್ರಮವಾಗಿ ರೈತರ ಜಮೀನಿನಲ್ಲಿ ಇದ್ದ ತರಕಾರಿ ಬೆಳೆಗಳು, ರೇಷ್ಮೆ ಗಿಡಗಳು, ಮಾವಿನ ಮರಗಳು, ಪಾಲಿ ಹೌಸ್ ಮತ್ತು ನೆಟ್ ಹೌಸ್‌ಗಳನ್ನು ನಾಶಪಡಿಸಿ ಭೂಮಿಯನ್ನು ದೌಜನ್ಯದಿಂದ ವಶಕ್ಕೆ ಪಡೆಯುತ್ತಿರುವ ಖಂಡನೀಯ. ಈ ವಿಚಾರದಲ್ಲಿ ಹಲವು ರೈತರು ಕೋರ್ಟ್ ನಲ್ಲಿ ಕೇಸು ಹಾಕಿ ಜಂಟಿ ಸರ್ವೆ ಮಾಡಲು ಆದೇಶವಾಗಿದ್ದರೂ ರೈತರ ಗಮನಕ್ಕೆ ತರದೇ, ಯಾವುದೇ ನೋಟೀಸು ನೀಡದೇ ಜಂಟಿ ಸರ್ವೆ ಆಗಿದೆ ಎಂದು ಹೇಳುವುದು ಅನುಮಾನಾಸ್ಪದವಾಗಿದೆ ಎಂದರು
ನಮ್ಮ ಕೋಲಾರ ರೈತ ಸಂಘದ ಅಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್ ಗೌಡ ಮಾತನಾಡಿ ಅಧಿಕಾರಿಗಳು ಕಛೇರಿಯಲ್ಲಿ ಕುಳಿತು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಜಂಟಿ ಸರ್ವೆ ಆಗಿದೆ ಎಂದು ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಸರಿಯಲ್ಲ.
ಕರ್ನಾಟಕ ಸರ್ಕಾರ ೩ ಎಕರೆಗಿಂತ ಕಡಿಮೆ ಇರುವ ರೈತರ ಭೂಮಿಯನ್ನು ಯಾವುದೇ ಕಾರಣಕ್ಕೆ ಒತ್ತುವರಿ ತೆರವು ಮಾಡಬಾರದೆಂದು ಹೇಳಿದ್ದರೂ, ಈ ಕುರಿತು ಹಲವು ರೈತರು ರಾಜ್ಯದ ಘನ ಹೈಕೋರ್ಟ್ ಮತ್ತು ಕೆಲವು ರೈತರು ಘನ ಸುಪ್ರೀಂಕೋರ್ಟ್ ನಲ್ಲಿ ಕೇಸು ದಾಖಲಿಸಿದ್ದಾರೆ. ಘನ ನ್ಯಾಯಾಲಯಗಳು ಈ ಕುರಿತು ಸ್ಪಷ್ಟತೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಹಂತದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ನಮ್ಮ ಜಿಲ್ಲೆಯಲ್ಲಿ ಪದೇ ಪದೇ ರೈತರಿಗೆ ತೊಂದರೆ ನೀಡುವುದನ್ನು ನಿಲ್ಲಿಸಬೇಕು. ಈ ವಿಚಾರವಾಗಿ ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶ ಮಾಡಿ ರೈತರ ಜಮೀನನ್ನು ರೈತರಿಗೆ ಉಳಿಸಬೇಕು. ಹಾಗೂ ಅಕ್ರಮವಾಗಿ ರೈತರ ಜಮೀನಿಗೆ ಪ್ರವೇಶ ಮಾಡಿ, ಬೆಳೆ ನಷ್ಠ ಮಾಡಿರುವ ರೈತರಿಗೆ ಅರಣ್ಯ ಇಲಾಖೆಯಿಂದ ನಷ್ಠ ಪರಿಹಾರ ಕೊಡಿಸಬೇಕು ಮತ್ತು ಅಕ್ರಮವಾಗಿ ಪ್ರವೇಶ ಮಾಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು
ಅಪರ ಜಿಲ್ಲಾಧಿಕಾರಿ ಮಂಗಳಾ ಅವರು ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಜಂಟಿ ಸಭೆ ನಡೆಸುವುದಾಗಿ ತಿಳಿಸಿದರು ಸಂಯುಕ್ತ ಹೋರಾಟ ಸಮಿತಿ ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಪಾತಕೋಟ ನವೀನ್ ಕುಮಾರ್, ಹರಟಿ ಪ್ರಕಾಶ್ ಅಲಹಳ್ಳಿ ವೆಂಕಟೇಶಪ್ಪ, ವಿಜಯಕೃಷ್ಣ, ಮಂಜುಳಾ, ಅಂಬಿಕಾ, ಉಮಾ ಮುಂತಾದವರು ಇದ್ದರು.
ಚಿತ್ರ : ಅರಣ್ಯ ಇಲಾಖೆ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಒತ್ತಾಯಿಸಿ ರೈತ ಪರ ಸಂಘಟನೆಗಳು ಕೋಲಾರ ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳ ರವರಿಗೆ ಮನವಿ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್