ಬಳ್ಳಾರಿ, 04 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ಶ್ರೀಕನಕ ದುರ್ಗಮ್ಮಗುಡಿ ರೈಲ್ವೆ ಅಂಡರ್ ಬ್ರಿಡ್ಜ್‍ನಲ್ಲಿ ರಸ್ತೆ ನಿರ್ಮಾಣದ ಕಾಮಗಾರಿ ಪೂರ್ಣಗೊಂಡಿದ್ದರೂ ಜನಸಂಚಾರಕ್ಕೆ ಅವಕಾಶ ನೀಡದ ಕಾಂಗ್ರೆಸ್ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರ ನೇತೃತ್ವದಲ್ಲಿ ಬಿಜೆಪಿ ಮಂಗಳವಾರ ಸಂಜೆ ದಿಢೀರನೆ ಪ್ರತಿಭಟನೆ ನಡೆಸಿ, ಬುಧವಾರ ಮಧ್ಯಾಹ್ನ ಸೇತುವೆ ತೆರೆಯುವ ಭರವಸೆ ಸಿಕ್ಕ ನಂತರ, ಪ್ರತಿಭಟನೆಯನ್ನು ಕೈಬಿಡಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ವೈ.ಎಂ. ಸತೀಶ್ ಅವರು ಸುದ್ದಿಗಾರರ ಜೊತೆ ಮಾತನಾಡಿ, ರೈಲ್ವೆ ಅಂಡರ್ ಬ್ರಿಡ್ಜ್ ದುರಸ್ತಿಯಾಗಿ ಜನವರಿ 26ರಂದೇ ಜನ ಸಂಚಾರಕ್ಕೆ ತೆರವುಗೊಳಿಸುವ ವಿಶ್ವಾಸವಿತ್ತು. ಈ ಮಧ್ಯೆ ರೈಲ್ವೆ ಇಲಾಖೆಯ ಕಾಮಗಾರಿ ಇರುವ ಕಾರಣ ರಸ್ತೆ ಸಂಚಾರವನ್ನು ಮುಂದೂಡಲಾಗಿದೆ ಎಂದು ಬೋರ್ಡ್ ಅನ್ನು ಏಕಾಏಕಿ ಪ್ರದರ್ಶನ ಮಾಡಲಾಯಿತು. ಆದರೆ, ರೈಲ್ವೆ ಅಧಿಕಾರಿಗಳು ಜನವರಿ 29 ರಂದು ಜಿಲ್ಲಾಡಳಿತಕ್ಕೆ ಪತ್ರ ಬರೆದು, ರೈಲ್ವೆ ಅಂಡರ್ ಬ್ರಿಡ್ಜ್‍ನಲ್ಲಿ ರೈಲ್ವೆ ಇಲಾಖೆ ಯಾವುದೇ ಕಾಮಗಾರಿಯನ್ನು ನಡೆಸುತ್ತಿಲ್ಲ. ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ಬೋರ್ಡ್ ಪ್ರದರ್ಶನ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಮನವಿ ಮಾಡಿದ್ದಾರೆ. ಇಲ್ಲ ಸಲ್ಲದ ನೆಪಗಳನ್ನು ಹೇಳಿ ಫೆಬ್ರವರಿ 9 ರಂದು ರಸ್ತೆ ತೆರವು ಮಾಡುವುದಾಗಿ ಹೇಳುತ್ತಿರುವ ಶಾಸಕ ನಾರಾ ಭರತರೆಡ್ಡಿ, ಆ ದಿನವೂ ರಸ್ತೆಯನ್ನು ಜನ ಸಂಚಾರಕ್ಕೆ ಮುಕ್ತಗೊಳಿಸದಿದ್ದಲ್ಲಿ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಜನ ಸಾಮಾನ್ಯರ ಧ್ವನಿಯಾಗಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ. ಈವರೆಗೂ ರಸ್ತೆಯನ್ನು ಜನ ಸಂಚಾರಕ್ಕೆ ಮುಕ್ತಗೊಳಿಸದೇ ಇರುವುದು ಜನವಿರೋಧಿ ನೀತಿ. ಕಾಂಗ್ರೆಸ್ ಜನವಿರೋಧಿ ಆಡಳಿತ ನಡೆಸುತ್ತಿರುವುದಕ್ಕೆ ಇದೇ ಸಾಕ್ಷಿ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿಯ ಮುಖಂಡರು, ಬಳ್ಳಾರಿಯಲ್ಲಿ ಕಾಂಗ್ರೆಸ್ ಜನವಿರೋಧಿಯಾಗಿದೆ. ಜನ ಸಂಚಾರಕ್ಕೆ ಉಪಯೋಗ ಆಗುತ್ತಿಲ್ಲ. ಈ ರಸ್ತೆಯಲ್ಲಿ ಜನ ಸಂಚಾರವೇ ಇಲ್ಲವೆಂದರೆ ಹೇಗೆ? ಕಾಮಗಾರಿಯ ಯಾವುದೇ ಮಾಹಿತಿ ಎಲ್ಲೂ ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ. ಕಳಪೆ ಕಾಮಗಾರಿ ನಡೆದಿದೆ. ಅಧಿಕಾರಿಗಳು ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ. ಈ ರಸ್ತೆಯಲ್ಲಿ ಜನ ಸಂಚಾರಕ್ಕೆ ತಕ್ಷಣವೇ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಸ್ಥಳದಲ್ಲಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ. ರವಿಕುಮಾರ್ ಅವರು ಕಾಮಗಾರಿ ನಡೆಸುತ್ತಿರುವ ನಿರ್ಮಿತಿ ಕೇಂದ್ರ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿದಾಗ, ನಿರ್ಮಿತಿ ಕೇಂದ್ರದ ಅಧಿಕಾರಿ ಮೋಹನ್ ಕೃಷ್ಣ ಅವರು, ಬುಧವಾರ ಬೆಳಗ್ಗೆ 11.30ರ ವೇಳಗೆಗೆ ರಸ್ತೆಯನ್ನು ಜನ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಕಾರಣ, ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿಯ ಮುಖಂಡರು - ಕಾರ್ಯಕರ್ತರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ಈ ಕುರಿತು ಮಾತನಾಡಿದ ವೈ.ಎಂ. ಸತೀಶ್ ಅವರು, ರಸ್ತೆಯನ್ನು ಜನ ಸಂಚಾರಕ್ಕೆ ಮುಕ್ತಗೊಳಿಸದೇ ಇದ್ದಲ್ಲಿ ನಾವು (ಬಿಜೆಪಿ), ಬಳ್ಳಾರಿ ನಗರದ ಎಲ್ಲಾ ವೃತ್ತಗಳನ್ನು - ರಸ್ತೆಗಳನ್ನು ಬುಧವಾರ ಬಂದ್ ಮಾಡಿ ಪ್ರತಿಭಟನೆ ನಡೆಸಿ, ಸರ್ಕಾರದ ಜನ ವಿರೋಧಿ ನೀತಿಯನ್ನು ಜನರಿಗೆ ತಲುಪಿಸುತ್ತೇವೆ. ಬಡ, ಮಧ್ಯಮ, ವಿದ್ಯಾರ್ಥಿಗಳು - ರೋಗಿಗಳು ಈ ರಸ್ತೆಯಲ್ಲಿ ಸಂಚರಿಸಬೇಕು. ಅಂಥಹಾ ರಸ್ತೆ ಬಿಕೋ ಎನ್ನುತ್ತಿರುವುದು ದುರಾದೃಷ್ಟ ಎಂದು ಅವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್