ಕೋಗಿಲು : ಸರ್ಕಾರದ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ
ಬೆಂಗಳೂರು, 30 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಬೆಂಗಳೂರಿನ ಕೋಗಿಲು ಲೇಔಟ್ ನಿವಾಸಿಗಳಿಗೆ ಮನೆ ಹಂಚಿಕೆ ಕುರಿತು ರಾಜ್ಯ–ರಾಷ್ಟ್ರಮಟ್ಟ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆ ನಡೆಯುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Ashok


ಬೆಂಗಳೂರು, 30 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬೆಂಗಳೂರಿನ ಕೋಗಿಲು ಲೇಔಟ್ ನಿವಾಸಿಗಳಿಗೆ ಮನೆ ಹಂಚಿಕೆ ಕುರಿತು ರಾಜ್ಯ–ರಾಷ್ಟ್ರಮಟ್ಟ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆ ನಡೆಯುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

“ಯಾವ ಕಾನೂನಿನಡಿ ಇವರಿಗೆ ಮನೆ ಕೊಡಲಾಗುತ್ತಿದೆ? ಕನ್ನಡಿಗರ ನೆಲವನ್ನು ಪರಭಾರೆ ಮಾಡುವ ಅಧಿಕಾರ ಸರ್ಕಾರಕ್ಕೆ ಯಾರು ನೀಡಿದರು? ರಾಜ್ಯದಲ್ಲಿರುವ ಸರ್ಕಾರ ಕೇರಳದ್ದಾ ಅಥವಾ ಕರ್ನಾಟಕದ್ದಾ?” ಎಂದು ಪ್ರಶ್ನಿಸಿದರು.

ವಿಧಾನ ಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಗಿಲು ಲೇಔಟ್‌ನ ಅನಧಿಕೃತ ಮನೆಗಳ ತೆರವುಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಮನೆ ಹಂಚಿಕೆ ವಿಚಾರ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಿದ್ದು, “ಈಗ ಪಾಕಿಸ್ತಾನವೂ ಕರ್ನಾಟಕದ ವಿಚಾರವಾಗಿ ಮಾತನಾಡುತ್ತಿದೆ. ಪಾಕಿಸ್ತಾನಕ್ಕೆ ಮಹಾರಾಷ್ಟ್ರ, ತಮಿಳುನಾಡು ಬಗ್ಗೆ ಯಾಕೆ ಮಾತಿಲ್ಲ?” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಗಿಲು ಲೇಔಟ್ ನಿವಾಸಿಗಳಿಗೆ ಮನೆ ಹಂಚಿಕೆ ವಿಚಾರವಾಗಿ ಕೋರ್ಟ್ ಮೊರೆ ಹೋಗುವ ಬಗ್ಗೆ ಚರ್ಚೆ ನಡೆಸಲಾಗಿದ್ದು, ಕಾನೂನು ತಂಡಕ್ಕೆ ಸೂಚನೆ ನೀಡಲಾಗಿದೆ ಎಂದು ಅಶೋಕ್ ತಿಳಿಸಿದರು.

ವಿಜಯಪುರ ಜಿಲ್ಲೆಯ ಆಲಮಟ್ಟಿ, ಕೊಡಗು ಸೇರಿದಂತೆ ರಾಜ್ಯದ ಹಲವು ಸಂತ್ರಸ್ತರಿಗೆ ಮನೆ ನೀಡಲು ಸಾಧ್ಯವಾಗಿಲ್ಲದಿರುವಾಗ, ಇಲ್ಲಿಗೆ ಮನೆ ನೀಡುವ ನಿರ್ಧಾರ ಅನ್ಯಾಯ ಎಂದು ಟೀಕಿಸಿದರು. ಇದು ವಕ್ಫ್ ಬೋರ್ಡ್ ಆಸ್ತಿ ಅಲ್ಲ, ಸರ್ಕಾರಿ ಭೂಮಿ ಎಂದು ಸ್ಪಷ್ಟಪಡಿಸಿದ ಅವರು, ವಕ್ಫ್ ಆಸ್ತಿಯಲ್ಲಿದ್ದರೆ ಅಲ್ಲಿ ಮನೆ ಕಟ್ಟಿಕೊಡಲಿ ಎಂದರು.

ಕೋಗಿಲು ಲೇಔಟ್‌ನಲ್ಲಿ ಸುಮಾರು ₹650 ಕೋಟಿ ಮೌಲ್ಯದ ಭೂಮಿ ಇದ್ದು, ಅನಧಿಕೃತ ನಿರ್ಮಾಣ ಕುರಿತು ಕಳೆದ ವರ್ಷ ಸೆಪ್ಟೆಂಬರ್ 12ರಂದು ತಹಶೀಲ್ದಾರ್ ಬಿಬಿಎಂಪಿ ಜಂಟಿ ಆಯುಕ್ತರಿಗೆ ಪತ್ರ ಬರೆದಿದ್ದರು ಎಂದು ಹೇಳಿದರು. ಆಶ್ರಯ ಯೋಜನೆಯಡಿ ಮನೆ ನೀಡಬೇಕಾದರೆ ಶಾಸಕರ ಅಧ್ಯಕ್ಷತೆಯ ಸಮಿತಿಯ ಮೂಲಕವೇ ಆಗಬೇಕು. ತಮ್ಮ ಮಾಹಿತಿಯ ಪ್ರಕಾರ, ಸಂಬಂಧಿಸಿದ ಕ್ಷೇತ್ರದ ಶಾಸಕ ವಿದೇಶದಲ್ಲಿದ್ದಾರೆ ಎಂದರು.

ಕಾಂಗ್ರೆಸ್ ಪ್ರಾಯೋಜಿತವಾಗಿ ಅಕ್ರಮ ಮನೆಗಳ ನಿರ್ಮಾಣ ನಡೆದಿದೆ ಎಂದು ಆರೋಪಿಸಿದ ಅಶೋಕ್, ಮಾನವೀಯತೆ ನೆಪದಲ್ಲಿ ವಸತಿ ನೀಡಲು ಸಿಎಂ ಸೂಚಿಸಿದ್ದಾರೆ ಎಂದು ಟೀಕಿಸಿದರು.

“ಕಸ ಹಾಕುವ ಜಾಗದಲ್ಲೇ ಮನೆ ಕಟ್ಟಲಾಗಿದೆ. 14 ಎಕರೆ 8 ಗುಂಟೆ ಜಮೀನಿನಲ್ಲಿ ಅಕ್ರಮವಾಗಿ ಮನೆಗಳು ನಿರ್ಮಾಣವಾಗಿವೆ. ಘನತ್ಯಾಜ್ಯ ನಿರ್ವಹಣೆಗೆ ₹100 ಕೋಟಿ ಮೀಸಲಾಗಿದೆ” ಎಂದು ವಿವರಿಸಿದರು.

ಸರ್ವೆ ನಂಬರ್ 99ರ ಭೂಮಿಯು ಹಿಂದಿನಿಂದಲೂ ಕಲ್ಲುಬಂಡೆಯ ಜಾಗವಾಗಿದ್ದು, 2023ರ ಸ್ಯಾಟಲೈಟ್ ಚಿತ್ರಗಳಲ್ಲಿ ಖಾಲಿಯಾಗಿತ್ತು. ಆದರೆ 2025ರ ಸ್ಯಾಟಲೈಟ್ ಮ್ಯಾಪ್‌ನಲ್ಲಿ ಮನೆಗಳು ಕಾಣಿಸುತ್ತಿವೆ. ಆರು ತಿಂಗಳ ಹಿಂದೆ ಮಣ್ಣು ತುಂಬಿ ಮನೆ ಕಟ್ಟಲಾಗಿದೆ ಎಂದು ಆರೋಪಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande