ಸ್ನೇಹ ಸೇವೆಯ ಧ್ಯೇಯಕ್ಕೆ ಜೀವ ತುಂಬಿದ ಇನ್ನರ್ ವೀಲ್ ಕ್ಲಬ್
ಗದಗ, 30 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಇನ್ನರ್ ವೀಲ್ ಕ್ಲಬ್‌ನ ಮೂಲ ಧ್ಯೇಯವಾದ ಸ್ನೇಹ ಮತ್ತು ಸೇವೆಯನ್ನು ಅಕ್ಷರಶಃ ಕಾರ್ಯರೂಪಕ್ಕೆ ತರುತ್ತಿರುವ ಇನ್ನರ್ ವೀಲ್ ಕ್ಲಬ್ ಗದಗ–ಬೆಟಗೇರಿ ಒಂದು ಆದರ್ಶ ಸಂಸ್ಥೆಯಾಗಿದೆ. ಎಲ್ಲಿ, ಯಾವಾಗ ಅವಶ್ಯಕತೆ ಇದೆಯೋ ಅಲ್ಲಿ ತಕ್ಷಣ ಸ್ಪಂದಿಸುವ ಕ್ಲಬ್‌ನ ಸಮಯಪ್ರಜ್ಞೆ
ಫೋಟೋ


ಗದಗ, 30 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಇನ್ನರ್ ವೀಲ್ ಕ್ಲಬ್‌ನ ಮೂಲ ಧ್ಯೇಯವಾದ ಸ್ನೇಹ ಮತ್ತು ಸೇವೆಯನ್ನು ಅಕ್ಷರಶಃ ಕಾರ್ಯರೂಪಕ್ಕೆ ತರುತ್ತಿರುವ ಇನ್ನರ್ ವೀಲ್ ಕ್ಲಬ್ ಗದಗ–ಬೆಟಗೇರಿ ಒಂದು ಆದರ್ಶ ಸಂಸ್ಥೆಯಾಗಿದೆ. ಎಲ್ಲಿ, ಯಾವಾಗ ಅವಶ್ಯಕತೆ ಇದೆಯೋ ಅಲ್ಲಿ ತಕ್ಷಣ ಸ್ಪಂದಿಸುವ ಕ್ಲಬ್‌ನ ಸಮಯಪ್ರಜ್ಞೆ ಹಾಗೂ ಸೇವಾ ಮನೋಭಾವ ಶ್ಲಾಘನೀಯವಾಗಿದೆ ಎಂದು ಇನ್ನರ್ ವೀಲ್ ಕ್ಲಬ್ ಡಿಸ್ಟ್ರಿಕ್ 317ರ ಡಿಸ್ಟ್ರಿಕ್ ಚೇರಮನ್ ಉತ್ಕರ್ಷಾ ಪಾಟೀಲ್ ಪ್ರಶಂಸೆ ವ್ಯಕ್ತಪಡಿಸಿದರು.

ನಗರದ ರೋಟರಿ ಕ್ಲಬ್ ಗದಗ–ಬೆಟಗೇರಿಯಲ್ಲಿ ಆಯೋಜಿಸಲಾಗಿದ್ದ ಇನ್ನರ್ ವೀಲ್ ಕ್ಲಬ್‌ನ ಅಧಿಕೃತ ಭೇಟಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವರ್ಣ ಸಂಭ್ರಮವನ್ನು ಯಶಸ್ವಿಯಾಗಿ ಆಚರಿಸಿಕೊಂಡ ಇನ್ನರ್ ವೀಲ್ ಕ್ಲಬ್ ಗದಗ–ಬೆಟಗೇರಿಯ ಸೇವಾ ಚಟುವಟಿಕೆಗಳು ಸಮಾಜಕ್ಕೆ ಮಾದರಿಯಾಗಿದೆ ಎಂದರು.

2025–26ನೇ ಸಾಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ದಾಖಲೆಗಳನ್ನು ಪರಿಶೀಲಿಸಿ, ಅವರ ನಿಷ್ಠೆ, ಶಿಸ್ತು ಹಾಗೂ ಸಮರ್ಪಣಾ ಭಾವವನ್ನು ಮೆಚ್ಚಿಕೊಂಡು, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಯೋಜನೆಗಳು ಮತ್ತು ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಕ್ಲಬ್‌ನ ಅಧ್ಯಕ್ಷರಾದ ಅಶ್ವಿನಿ ಜಗತಾಪ ಸ್ವಾಗತ ಭಾಷಣ ಮಾಡಿದರು. ಉದಾಹರಣೆಯ ಮೂಲಕ ಮುನ್ನಡೆಯಿರಿ ಎಂಬ ಧ್ಯೇಯದೊಂದಿಗೆ ಇನ್ನರ್ ವೀಲ್ ಕ್ಲಬ್ ಗದಗ–ಬೆಟಗೇರಿ ವತಿಯಿಂದ ಡಿಸ್ಟ್ರಿಕ್ ಚೇರಮನ್ ಉತ್ಕರ್ಷಾ ಪಾಟೀಲ್ ಅವರು ಮಂಜು ಶಿಕ್ಷಣ ಸಂಸ್ಥೆ, ಬೆಟಗೇರಿ–ಗದಗದ ಮಂದಬುದ್ಧಿ ಮಕ್ಕಳ ವಸತಿ ವಿಶೇಷ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಲೆಗೆ ಅಗತ್ಯವಿದ್ದ ದೇಣಿಗೆಯನ್ನು ಕ್ಲಬ್ ವತಿಯಿಂದ ನೀಡಲಾಯಿತು. ಅಲ್ಲದೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ನಿಟ್ಟಿನಲ್ಲಿ ಬಾಲಕಿಯೊಬ್ಬಳಿಗೆ ಸೈಕಲ್‌ನ್ನು ವಿತರಿಸಿ ಮಾನವೀಯತೆಯ ಸಂದೇಶವನ್ನು ಸಾರಿದರು.

ಕಾರ್ಯಕ್ರಮದ ಆರಂಭದಲ್ಲಿ ಬಿರಾದರ್ ಇನ್ನರ್ ವೀಲ್ ಪ್ರಾರ್ಥನೆಯನ್ನು ನೆರವೇರಿಸಿದರು. ದೀಪಾ ಪಟ್ಟಣಶೆಟ್ಟಿ ಅವರು ಡಿಸ್ಟ್ರಿಕ್ ಚೇರಮನ್ ಉತ್ಕರ್ಷಾ ಪಾಟೀಲ್ ಅವರ ಪರಿಚಯವನ್ನು ನೀಡಿದರು. ರೂಪಾ ಸಂಶೀಮಠ ಅವರು ಪಿ.ಡಿ.ಸಿ. ಪ್ರೇಮಾ ಗುಳಗೌಡರ್ ಅವರ ಪರಿಚಯವನ್ನು ಮಾಡಿಕೊಟ್ಟರೆ, ಹೊಸ ಸದಸ್ಯರಾಗಿ ಸೇರಿಕೊಂಡ ಗೀತಾ ನಾಲ್ವಾಡ ಅವರ ಪರಿಚಯವನ್ನು ಸುವರ್ಣಾ ಮದ್ರಿಮಠ ಮಾಡಿದರು.

ಕಾರ್ಯದರ್ಶಿಗಳಾದ ಶಿವಲೀಲಾ ಅಕ್ಕಿ ಅವರು 2025–26ನೇ ಸಾಲಿನಲ್ಲಿ ಇನ್ನರ್ ವೀಲ್ ಕ್ಲಬ್ ಗದಗ–ಬೆಟಗೇರಿಯಿಂದ ಇದುವರೆಗೆ ಕೈಗೊಂಡ ವಿವಿಧ ಸೇವಾ ಪ್ರೊಜೆಕ್ಟ್‌ಗಳ ವಿವರವಾದ ವರದಿಯನ್ನು ಮಂಡಿಸಿದರು.

ಸಂಪಾದಕರಾದ ವೀಣಾ ಕಾವೇರಿ ಅವರು ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡ 2025–26ನೇ ಸಾಲಿನ ಬುಲೆಟಿನ್ ಬುಕ್ ಕುರಿತು ವಿವರಣೆ ನೀಡಿದರು. ಮಾಜಿ ಅಧ್ಯಕ್ಷರಾದ ನೀಲಾಂಬಿಕಾ ಉಗಲಾಟ್ ಹಾಗೂ ಕೊ–ಸಿ.ಪಿ.ಸಿ.ಸಿ. ಶಿಲ್ಪಾ ಅಕ್ಕಿ ಅವರು ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿದರು.

ಈ ಸಂದರ್ಭದಲ್ಲಿ ಗದಗ–ಬೆಟಗೇರಿಯ ರೋಟರಿ, ರೋಟ್ಯಾಕ್ಟ್, ರೋಟರಿ ಸೆಂಟ್ರಲ್ ಹಾಗೂ ಇನ್ನರ್ ವೀಲ್ ಕ್ಲಬ್ ಮಿಡ್‌ಟೌನ್‌ನ ಸದಸ್ಯರು, ಜೊತೆಗೆ ಇನ್ನರ್ ವೀಲ್ ಕ್ಲಬ್ ಗದಗ–ಬೆಟಗೇರಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.

ಒಟ್ಟಾರೆ, ಸಮಾಜದ ವಿವಿಧ ವರ್ಗಗಳಿಗೆ ಸ್ಪಂದಿಸುವ ಸೇವಾ ಚಟುವಟಿಕೆಗಳ ಮೂಲಕ ಇನ್ನರ್ ವೀಲ್ ಕ್ಲಬ್ ಗದಗ–ಬೆಟಗೇರಿ ತನ್ನ ಸ್ನೇಹ–ಸೇವೆಯ ಧ್ಯೇಯವನ್ನು ನಿರಂತರವಾಗಿ ಸಾಕಾರಗೊಳಿಸುತ್ತಿದೆ ಎಂಬುದು ಈ ಕಾರ್ಯಕ್ರಮದಿಂದ ಮತ್ತೊಮ್ಮೆ ಸಾಬೀತಾಯಿತು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande