
ಗದಗ, 30 ಡಿಸೆಂಬರ್ (ಹಿ.ಸ.) :
ಅ್ಯಂಕರ್ : ಗದಗ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನರಗುಂದ ವಿಧಾನ ಸಭಾ ಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ ಅವರು, ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಉತ್ತರ ಕರ್ನಾಟಕದ ಅಭಿವೃದ್ಧಿಯ ದೃಷ್ಟಿಯಿಂದ ಸಂಪೂರ್ಣವಾಗಿ ವ್ಯರ್ಥವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಚಳಿಗಾಲದ ಅಧಿವೇಶನದಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಹೊಸ ಸದಸ್ಯರಿಗೆ ಮಾತನಾಡಲು ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚಿಸಲು ಸಾಕಷ್ಟು ಅವಕಾಶ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಶಾಸಕರ ಅಭಿಪ್ರಾಯಗಳನ್ನು ಆಲಿಸಿ, ಈ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಸಿಎಂ ತಮ್ಮ ಸುದೀರ್ಘ ಉತ್ತರದಲ್ಲಿ ಮುಕ್ಕಾಲು ಭಾಗ ಸಮಯವನ್ನು ಕೇಂದ್ರ ಸರ್ಕಾರವನ್ನು ಟೀಕಿಸುವುದರಲ್ಲಿ ವ್ಯರ್ಥ ಮಾಡಿದರು. ಉತ್ತರ ಕರ್ನಾಟಕದ ಜನರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳು, ಅಭಿವೃದ್ಧಿ ಯೋಜನೆಗಳು ಹಾಗೂ ಅನುದಾನಗಳ ಕುರಿತು ಯಾವುದೇ ಸ್ಪಷ್ಟ ಭರವಸೆ ನೀಡಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸದನದಲ್ಲಿ ಶಾಸಕರು ಮುಂದಿಟ್ಟ ಅನೇಕ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲೇ ಇಲ್ಲ. ಉತ್ತರ ಕರ್ನಾಟಕಕ್ಕೆ ನಯಾ ಪೈಸೆಯೂ ಅನುದಾನ ಘೋಷಣೆ ಆಗಿಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಡೆಸಿದ ಈ ಅಧಿವೇಶನದಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗಿಲ್ಲ. ಇದು ಕೇವಲ ಆಡಳಿತ ಪಕ್ಷದ ಪ್ರಚಾರಕ್ಕೆ ಸೀಮಿತವಾದ ಅಧಿವೇಶನವಾಗಿದ್ದು, ಜನರ ಸಮಸ್ಯೆಗಳ ಪರಿಹಾರಕ್ಕೆ ಬಳಸಿಕೊಳ್ಳುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಿ.ಸಿ. ಪಾಟೀಲ ಹೇಳಿದರು.
ಬೆಂಗಳೂರು ನಗರದ ಕೋಗಿಲು ಸುತ್ತಮುತ್ತಲ ಬಡಾವಣೆಯಲ್ಲಿ ಸುಮಾರು 500 ಕೋಟಿ ರೂ. ಮೌಲ್ಯದ ಅತಿಕ್ರಮಿತ ಸರ್ಕಾರಿ ಜಾಗವನ್ನು ಸರ್ಕಾರ ವಶಪಡಿಸಿಕೊಂಡಿರುವ ಕ್ರಮ ಸ್ವಾಗತಾರ್ಹವಾಗಿದೆ. ಆದರೆ, ಈ ಕಾರ್ಯಾಚರಣೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ‘ಉತ್ತರ ಪ್ರದೇಶ ಮಾದರಿಯ ಬುಲ್ಡೋಜರ್ ಸರ್ಕಾರ’ ಎಂದು ಟೀಕಿಸಿರುವುದು ಸರಿಯಲ್ಲ. ದೇಶದ್ರೋಹಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಉತ್ತರ ಪ್ರದೇಶದ ಕ್ರಮಕ್ಕೂ, ಅತಿಕ್ರಮಣ ತೆರವಿಗೂ ಹೋಲಿಕೆ ಮಾಡುವುದು ತಾರ್ಕಿಕವಲ್ಲ. ಕೇವಲ 400 ಜನರ ಓಲೈಕೆಗೆ ರಾಜ್ಯದ 6 ಕೋಟಿ ಜನರ ಹಿತಾಸಕ್ತಿಯನ್ನು ಬಲಿ ಕೊಡಲಾಗುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಡ್ರಗ್ ಮಾಫಿಯಾದ ಅಟ್ಟಹಾಸ ದಿನೇದಿನೇ ಹೆಚ್ಚುತ್ತಿದೆ. ಮಹಾರಾಷ್ಟ್ರ ಪೊಲೀಸರು ಕರ್ನಾಟಕಕ್ಕೆ ಬಂದು ಎರಡು ಬಾರಿ ಡ್ರಗ್ ಮಾಫಿಯಾ ಪತ್ತೆ ಮಾಡುತ್ತಾರೆ ಎಂದರೆ, ನಮ್ಮ ರಾಜ್ಯದ ಪೊಲೀಸರು ಹಾಗೂ ಗುಪ್ತಚರ ವಿಭಾಗವನ್ನು ಯಾರೋ ಕಟ್ಟಿ ಹಾಕಿದ್ದಾರೆ ಎಂಬ ಅನುಮಾನ ಮೂಡುತ್ತದೆ. ಡ್ರಗ್ ಪೆಡ್ಲರ್‌ಗಳು ಹಾಗೂ ಕೋಟ್ಯ0ತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಗೃಹ ಸಚಿವರು ಸದನದಲ್ಲಿ ಉತ್ತರ ನೀಡಿದ್ದಾರೆ. ಆದರೆ, ಡ್ರಗ್ ತಯಾರಕರನ್ನು ಹಿಡಿಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪೊಲೀಸರ ಕೈ ಕಟ್ಟಿ ಹಾಕಿದವರು ಯಾರು? ಈ ಹಿಂದೆ ಇದ್ದ ರಾಜಕೀಯ ಒತ್ತಡಗಳೇ ಈಗಲೂ ಮುಂದುವರಿದಿವೆಯೇ ಎಂಬ ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡಬೇಕು ಎಂದು ಸಿ.ಸಿ. ಪಾಟೀಲ ಒತ್ತಾಯಿಸಿದರು.
ರಾಜ್ಯ ಸರ್ಕಾರವನ್ನು ಯಾರು ನಡೆಸುತ್ತಿದ್ದಾರೆ ಎಂಬುದೇ ಸ್ಪಷ್ಟವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸರ್ಕಾರ ನಡೆಸುತ್ತಿದ್ದಾರೋ, ಅಥವಾ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರಭಾವವೇ ಹೆಚ್ಚಿದೆಯೋ ಎಂಬ ಅನುಮಾನ ರಾಜ್ಯದ ಜನರಲ್ಲಿ ಮೂಡಿದೆ. ರಾಜ್ಯದ ಆಡಳಿತದಲ್ಲಿ ಕೆ.ಸಿ. ವೇಣುಗೋಪಾಲ್ ಅವರ ಹಸ್ತಕ್ಷೇಪ ಹೆಚ್ಚಾಗಿದ್ದು, ಅವರು ಈಗ ಕರ್ನಾಟಕದ ‘ಸೂಪರ್ ಸಿಎಂ’ ಆಗಿದ್ದಾರೆ ಎಂದು ಕಿಡಿಕಾರಿದರು.
ಈ ಸರ್ಕಾರದಲ್ಲಿ ಆಡಳಿತದ ಹಿಡಿತವೂ ಇಲ್ಲ, ಜನಪರ ಕಾಳಜಿಯೂ ಕಾಣುತ್ತಿಲ್ಲ. ದಿನಬೆಳಗಾದರೆ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವ ಚರ್ಚೆಯೇ ನಡೆಯುತ್ತಿದೆ. ಸರ್ಕಾರ ಮಂಡಿಸಿರುವ ದ್ವೇಷ ಭಾಷಣ ತಡೆ ಮಸೂದೆ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ಕೂಸು. ಪ್ರಧಾನಿಯವರ ವಿರುದ್ಧ ಅಸಭ್ಯ ಪದಗಳನ್ನು ಬಳಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂವಿಧಾನದ ಪುಸ್ತಕ ಹಿಡಿದು ಸಂವಿಧಾನ ವಿರೋಧಿ ಮಸೂದೆ ತರುತ್ತಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ದ್ವೇಷದ ರಾಜಕಾರಣವಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ತೀವ್ರವಾಗಿ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜು ಕುರುಡಗಿ, ಪ್ರಧಾನ ಕಾರ್ಯದರ್ಶಿ ಲಿಂಗರಾಜಗೌಡ ಪಾಟೀಲ, ಮುಖಂಡರಾದ ಎಂ.ಎಸ್. ಕರಿಗೌಡ್ರ, ಸಿದ್ದಪ್ಪ ಪಲ್ಲೇದ, ವಿಜಯಲಕ್ಷ್ಮೀ ಮಾನ್ವಿ, ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ಪ್ರಶಾಂತ ನಾಯ್ಕರ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP