ಸರ್ವಧರ್ಮ ಸಮನ್ವಯ ಪೀಠಕ್ಕೆ ಚೆನ್ನಬಸವ ಶ್ರೀಗಳ ನೇಮಕ
ಗದಗ, 30 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ಮಾರನಬಸರಿ ಗ್ರಾಮದ ಸರ್ವಧರ್ಮ ಸಮನ್ವಯ ಪೀಠಕ್ಕೆ ಚೆನ್ನಬಸವ ಶ್ರೀಗಳನ್ನು ನೂತನ ಪೀಠಾಧಿಪತಿಗಳಾಗಿ ನೇಮಕ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಶ್ರೀಗಳ ಪುರಪ್ರವೇಶ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಶಿವಮೊಗ್ಗ ಜಿಲ್
ಫೋಟೋ


ಗದಗ, 30 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಮಾರನಬಸರಿ ಗ್ರಾಮದ ಸರ್ವಧರ್ಮ ಸಮನ್ವಯ ಪೀಠಕ್ಕೆ ಚೆನ್ನಬಸವ ಶ್ರೀಗಳನ್ನು ನೂತನ ಪೀಠಾಧಿಪತಿಗಳಾಗಿ ನೇಮಕ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಶ್ರೀಗಳ ಪುರಪ್ರವೇಶ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಿರೇಮಾಗೂ ಗ್ರಾಮದ ಸರ್ವಧರ್ಮ ಸಮನ್ವಯ ಪೀಠದ ಮಾರ್ಗದರ್ಶಕ ಮಹಾಧಿಪತಿಗಳಾದ ಜಾಗನಿ ಶ್ರೀಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಶ್ರೀಗಳ ಪುರಪ್ರವೇಶದ ನಿಮಿತ್ತ 510 ಮಹಿಳೆಯರಿಂದ ಆರತಿ ಬೆಳಗುವ ಮೂಲಕ, ವಾದ್ಯಮೇಳಗಳೊಂದಿಗೆ ಭವ್ಯ ಮೆರವಣಿಗೆ ಜರುಗಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೂವಿನಿಂದ ಅಲಂಕರಿಸಿದ ಸಾರೋಟದಲ್ಲಿ ಚೆನ್ನಬಸವ ಶ್ರೀಗಳು ಆಗಮಿಸುತ್ತಿದ್ದಂತೆ, ಸಾವಿರಾರು ಭಕ್ತರು ಪುಷ್ಪಾರ್ಚನೆ ಸಲ್ಲಿಸಿ ಭಕ್ತಿ ಭಾವದಿಂದ ಸ್ವಾಗತಿಸಿದರು. ಮನೆಗಳ ಮುಂದೆ ರಂಗೋಲಿ ಹಾಕಿ, ಆರತಿ ಬೆಳಗಿ ಶ್ರೀಗಳನ್ನು ಬರಮಾಡಿಕೊಳ್ಳುವ ಮೂಲಕ ಗ್ರಾಮವೇ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಾಗನಿ ಶ್ರೀಗಳು, ಮಾರನಬಸರಿ ಗ್ರಾಮವು ಸರ್ವಜನಾಂಗದವರು ಏಕತೆ, ಸಹೋದರತೆಯಿಂದ ಬದುಕುತ್ತಿರುವ ಮಾದರಿ ಗ್ರಾಮವಾಗಿದೆ. ಇಂತಹ ಗ್ರಾಮದಲ್ಲಿ ಸರ್ವಧರ್ಮ ಸಮನ್ವಯ ಪೀಠ ಇನ್ನಷ್ಟು ಬಲವಾಗಿ ಬೆಳೆಯಬೇಕು. 12ನೇ ಶತಮಾನದಲ್ಲಿ ಬಸವಣ್ಣನವರು ಸಾರಿದ ಕಾಯಕವೇ ಕೈಲಾಸ ಎಂಬ ತತ್ವವೇ ಈ ಗ್ರಾಮಕ್ಕೂ ದಾರಿ ದೀಪವಾಗಿದೆ ಎಂದು ಹೇಳಿದರು.

ಚೆನ್ನಬಸವ ಶ್ರೀಗಳು ಬಸವ ತತ್ವಗಳ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡವರು. ಎಲ್ಲ ಧರ್ಮ, ಜಾತಿಯ ಜನರೊಂದಿಗೆ ಬೆರೆತು ಬದುಕುವ ಮನೋಭಾವವನ್ನು ಹೊಂದಿದ್ದಾರೆ. ಅವರ ನೇತೃತ್ವದಲ್ಲಿ ಈ ಪೀಠ ಇನ್ನಷ್ಟು ಎತ್ತರಕ್ಕೆ ಬೆಳೆದು ಸಮಾಜಕ್ಕೆ ಬೆಳಕು ಹರಿಸಲಿದೆ ಎಂದು ಆಶೀರ್ವದಿಸಿದರು.

ಹಜರತ್ ಸುಲೇಮಾನ ತಾವಲಿ ದರ್ಗಾದ ಅಜ್ಜನವರು ಮಾತನಾಡಿ, ಸರ್ವಧರ್ಮ ಸಮನ್ವಯ ಪೀಠವು ಗ್ರಾಮಕ್ಕೆ ಗೌರವ ಮತ್ತು ಕೀರ್ತಿಯನ್ನು ತಂದಿದೆ. ಮಾರನಬಸರಿ ಗ್ರಾಮ ಮುಂದಿನ ದಿನಗಳಲ್ಲಿ ಸುಕ್ಷೇತ್ರವಾಗಿ ಗುರುತಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪುರಪ್ರವೇಶಕ್ಕೆ ಮುನ್ನ ಕೊಪ್ಪದ ಕ್ರಾಸ್ ರಸ್ತೆಯಲ್ಲಿನ ಕಾಳಿಕಾದೇವಿಗೆ ಚೆನ್ನಬಸವ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು. ನಂತರ ಪುರಪ್ರವೇಶ ಕಾರ್ಯಕ್ರಮ ಆರಂಭಗೊಂಡಿತು. ಸಾವಿರಾರು ಭಕ್ತರ ಸಂಗಮದಲ್ಲಿ ನಡೆದ ಸಾರೋಟ ಮೆರವಣಿಗೆ ಗ್ರಾಮದೊಳಗೆ ಪ್ರವೇಶಿಸುತ್ತಿದ್ದಂತೆ ಎರಡು ಜೆಸಿಬಿ ಯಂತ್ರಗಳ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು.

ಐದು ದಿನಗಳ ಕಾಲ ನಡೆದ ಕಲ್ಯಾಣ ದರ್ಶನ ಹಾಗೂ ಪ್ರವಚನ ಕಾರ್ಯಕ್ರಮಗಳು ಪುರಪ್ರವೇಶಕ್ಕೆ ಮತ್ತಷ್ಟು ಮೆರುಗು ನೀಡಿದವು.

ಕಾರ್ಯಕ್ರಮದಲ್ಲಿ ಕೆಂಪಿನ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಕುಂದಗೋಳದ ಬಸವಣ್ಣ ಅಜ್ಜನವರು, ಚಿಕೇನಕೊಪ್ಪದ ರಾಂತವೀರ ಶರಣರು, ಅಭಿನವ ಪಂಚಾಕ್ಷರ ಶಿವಾಚಾರ್ಯರು, ಡಾ. ಶಿವಕುಮಾರ ಶ್ರೀಗಳು, ಶ್ರೀ ಗಂಗಾಧರ ದೇವರು ಸೇರಿದಂತೆ ಹಲವಾರು ಮಠಾಧೀಶರು ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಪೀಠದ ಉಪಾಧ್ಯಕ್ಷರು, ಸದಸ್ಯರು, ಗ್ರಾಮದ ಮುಖಂಡರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರು ಪುರಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಭವ್ಯತೆ ನೀಡಿದರು.

ಒಟ್ಟಾರೆ, ಚೆನ್ನಬಸವ ಶ್ರೀಗಳ ನೇಮಕ ಹಾಗೂ ಪುರಪ್ರವೇಶವು ಮಾರನಬಸರಿ ಗ್ರಾಮದ ಸರ್ವಧರ್ಮ ಸಮನ್ವಯ ಪರಂಪರೆಗೆ ಹೊಸ ಚೈತನ್ಯ ನೀಡಿತು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande