
ಕೋಲಾರ, ೩೦ ಡಿಸೆಂಬರ್ (ಹಿ.ಸ) :
ಆ್ಯಂಕರ್ : ಅಲ್ಪಸಂಖ್ಯಾತರ ಸಮುದಾಯಕ್ಕಾಗಿ ಜಾರಿಗೊಳಿಸಲಾಗಿರುವ ಪ್ರಧಾನಮಂತ್ರಿ ೧೫ ಅಂಶದ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮುದಾಯದ ಶಿಕ್ಷಣ ಸಂಸ್ಥೆಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಾದ ಮೂಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ವಿವಿಧ ಇಲಾಖೆಗಳಡಿ ಅಲ್ಪಸಂಖ್ಯಾತರಿಗಾಗಿ ಇರುವ ಆರ್ಥಿಕ ಮತ್ತು ಭೌತಿಕ ಪ್ರಗತಿಯನ್ನು ಕೂಡಲೇ ಸಾಧಿಸುವಂತೆ ನಿರ್ದೇಶನ ನೀಡಿದರು.
ಶೈಕ್ಷಣಿಕ ಸೌಲಭ್ಯ ಕಲ್ಪಿಸುವುದು, ತಂತ್ರಜ್ಞಾನ ತರಬೇತಿ ಮೂಲಕ ಕೌಶಲ್ಯ ಕಾರ್ಯಕ್ರಮ ತಲುಪಿಸುವುದು, ಆರ್ಥಿಕ ಚಟುವಟಿಕೆ ಬಲಪಡಿಸಲು ಸಾಲ ಸೌಲಭ್ಯ ಕಲ್ಪಿಸುವುದು. ನಾಗರಿಕ ಸೇವೆಗಳ ಬಗ್ಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಅಲ್ಪಸಂಖ್ಯಾತರ ಜೀವನ ಮಟ್ಟ ಸುಧಾರಿಸಲು ವಸತಿ ಯೋಜನೆ ಕಲ್ಪಿಸುವುದು, ಸರಳ ವಿವಾಹ ಯೋಜನೆ ಹೀಗೆ ಹಲವು ಕಾರ್ಯಕ್ರಮಗಳನ್ನು ಅಲ್ಪಸಂಖ್ಯಾತರಿಗೆ ತಲುಪಿಸುವಂತೆ ನಿರ್ದೇಶನ ನೀಡಿದರು.
ಸರ್ಕಾರವು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸರ್ಕಾರವು ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರುತಿದ್ದು ಅಧಿಕಾರಿಗಳು ಅದನ್ನು ಸಂಬAಧಪಟ್ಟ ಸಮುದಾಯದ ಜನರಿಗೆ ತಲುಪಿಸುವ ಕೆಲಸವನ್ನು ಮಾಡಬೇಕಾಗಿದೆ. ಈ ಕುರಿತು ಸಮಿತಿಯನ್ನು ರಚಿಸಿದ್ದು ಅವರೊಂದಿಗೂ ಜೊತೆಗೂಡಿ ಅಧಿಕಾರಿಗಳು ಯೋಜನೆಗಳನ್ನು ಅನುಷ್ಠಾನ ಗೊಳಿಸಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ ಮಾಹಿತಿ ನೀಡಿ ೧೯೭ ಅಂಗನವಾಡಿ ಕೇಂದ್ರಗಳಿದ್ದು ಇಲಾಖೆಯಿಂದ ಪೂರಕ ಪೌಷ್ಠಿಕ ಆಹಾರ ಕಲ್ಪಿಸುವುದು ಸೇರಿದಂತೆ ಭಾಗ್ಯಲಕ್ಷ್ಮಿ, ಗೃಹಲಕ್ಷ್ಮಿ,ಪ್ರಧಾನಮಂತ್ರಿ ಅವರ ಮಾತೃವಂದನಾ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಮಾತನಾಡಿ ಇಲಾಖೆಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ, ಹನಿ ನೀರಾವರಿ ಯೋಜನೆ, ಜೇನು ಸಾಕಾಣಿಕೆ, ಅನುಷ್ಠಾನ ಸಹಾಯಧನ ಹೀಗೆ ಹಲವು ಯೋಜನೆ ತಲುಪಿಸಲಾಗುತ್ತಿದೆ ಎಂದರು.
ಅಲ್ಪಸ0ಖ್ಯಾತರ ಅಭಿವೃದ್ಧಿ ನಿಗಮದ ಅಧಿಕಾರಿ ಶಿರಿನ್ ತಾಜ್ ಮಾಹಿತಿ ನೀಡಿ ಶ್ರಮಶಕ್ತಿ, ಸ್ವಾವಲಂಭಿ ಸಾರಥಿ, ವೃತ್ತಿ ಪ್ರೋತ್ಸಾಹ, ಅರಿವು, ವಿದೇಶಿ ವಿದ್ಯಾಭ್ಯಾಸ, ನೇರಸಾಲ ಯೋಜನೆ, ಉನ್ನತ ಶಿಕ್ಷಣಕ್ಕೆ ಸಾಲ ಯೋಜನೆ ಹೀಗೆ ಹಲವು ಯೋಜನೆ ತಲುಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ ೩ ಮುರಾರ್ಜಿ ದೇಸಾಯಿ ವಸತಿ ಶಾಲೆಗಳು , ೮ ಮೌಲನಾ ಆಜಾದ್ ವಸತಿ ಶಾಲೆಗಳ ಅಭಿವೃದ್ಧಿ ಸಂಬ0ಧಿಸಿದ0ತೆ ಮಾತನಾಡಿ ವಿದ್ಯಾರ್ಥಿಗಳ ದಾಖಲಾತಿಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಉರ್ದು ಶಾಲೆಗಳಲ್ಲಿನ ಅವ್ಯವಸ್ಥೆಗಳನ್ನು ಸುಧಾರಿಸುವಂತೆ ಜಿಲ್ಲಾಧಿಕಾರಿಗಳು ಡಿಡಿಪಿಐ ಅವರಿಗೆ ಸೂಚನೆ ನೀಡಿದರು. ಇಲಾಖೆಯ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರ ಇಲ್ಲವಾ ಎಂಬುದನ್ನು ಸಮಿತಿಯ ಸದಸ್ಯರು ಗಮನವಹಿಸಬೇಕು ಎಂದು ತಿಳಿಸಿದರು.
ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ೫.೫ ಕೋಟಿ ರೂಪಾಯಿ ಕಾಮಗಾರಿ ನಡೆಯುತ್ತಿದ್ದು ಶೀಘ್ರದಲ್ಲಿಯೇ ಪೂರ್ಣಗೊಳಿಸಿ ಹಸ್ಥಾಂತರ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಸ್ಥಳೀಯ ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯಧನ ನೀಡಲಾಗಿದೆ, ಶಸ್ತ್ರ ಚಿಕಿತ್ಸೆಗೆ ಸಹಾಯಧನ, ವೈದ್ಯಕೀಯ ಧನ,ಲಘು ವಾಹನ ಚಾಲನಾ ತರಬೇತಿ, ಇತರೆ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಅಲ್ಪಸಂಖ್ಯಾತರಿಗೆ ಮೀಸಲು ಇಟ್ಟಿರುವಂತಹ ಅನುದಾನವನ್ನು ಅವರಿಗೆ ಮಾತ್ರ ಪೂರ್ಣ ಬಳಕೆಯಲ್ಲಿ ಬಳಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನಾ ಕಾರ್ಯಕ್ರಮದಡಿ ೧೫ ಜನರಿಗೆ ಸಾಲ ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು
ವಕ್ಫ್ ಮಂಡಳಿ ಕಚೇರಿಯನ್ನು ಕೋಲಾರ ನಗರದ ಕ್ಲಾಕ್ ಟವರ್ ಬಳಿಗೆ ಸ್ಥಳಾಂತರ ಮಾಡಬೇಕು ಎಂದು ಸಮಿತಿಯ ಸದಸ್ಯರು ಮನವಿ ಮಾಡಿದಾಗ ಜಿಲ್ಲಾಧಿಕಾರಿಗಳು ಶೀಘ್ರದಲ್ಲಿಯೇ ತಮ್ಮ ವಕ್ಫ್ ಮಂಡಳಿತ ಕಚೇರಿಯನ್ನು ನವೀಕರಣಗೊಳಿಸಿ ಅಲ್ಪ ಸಂಖ್ಯಾತರ ಮಾಹಿತಿ ಕೇಂದ್ರವನ್ನು ಅಲ್ಲೇ ಪ್ರಾರಂಭ ಮಾಡುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ, ಮೈಲಾರಪ್ಪ, ಸಮಿತಿಯ ಸದಸ್ಯರಾದ ಶಪೀಕ್ ಅಹಮ್ಮದ್, ಇನಾಯತ್ ಉಲ್ಲಾ ಷರೀಫ್, ಇಂದಿರಾಮತಿ, ಶಭೀರ್ ಅಹ್ಮದ್, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಚಿತ್ರ : ಕೋಲಾರ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಅಧಿಕಾರಿಗಳ ಸಭೆ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್