
ಕೋಲಾರ, ಡಿ.೨೯ (ಹಿ.ಸ) :
ಆ್ಯಂಕರ್ : ನಾವೆಲ್ಲರೂ ಸರ್ವ ಜನಾಂಗದ ಶಾಂತಿ ತೋಟ ಕಟ್ಟುವ ದಿಕ್ಕಿನಡೆಗೆ ನಡೆದರೆ, ವಿಶ್ವ ಮಾನವ ಕುವೆಂಪು ಅವರ ಜನ್ಮದಿನ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಎಸ್.ಎಂ ಮಂಗಳ ಅವರು ಅಭಿಪ್ರಾಯಪಟ್ಟರು.
ಕೋಲಾರ ನಗರದ ಟಿ ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಕುವೆಂಪು ಕನ್ನಡ ಕಲಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರಕವಿ ಕುವೆಂಪು ಬಾಲ್ಯದಿಂದ ಒಬ್ಬ ಕವಿಯಾಗಿ ಬೆಳೆದು ಬಂದರು. ಅವರ ಕವಿತೆಗಳಲ್ಲಿ ಸಮಾಜದಲ್ಲಿ ಶಾಂತಿ-ಸೌಹಾರ್ದತೆ ನಲೆಸಬೇಕು ಎಂಬ ಸಂದೇಶವಿದೆ. ಅದರಲ್ಲಿ ಪ್ರಮುಖವಾಗಿ ನೋಡುವುದಾರೆ, ಸಿಲುಕದಿರಿ ಮತವೆಂಬ ಮೋಹದ ಜ್ಞಾನಕ್ಕೆ, ಮತಿಯಿಂದ ದುಡಿಯಿರೈ ಲೋಕದ ಹಿತಕ್ಕೆ ಎನ್ನುವ ಕವಿತೆ ಸಾಲುಗಳು ಇಂದಿನ ಕಲುಷಿತ ಸಮಾಜಕ್ಕೆ ಹೇಳಿ ಮಾಡಿಸಿದಂತಿದೆ. ಇಂಥ ಅನೇಕ ಕವಿತೆಗಳನ್ನು ಕುವೆಂಪು ಅವರು ರಚಿಸಿದ್ದಾರೆ. ಅವರ ಕವಿತೆಗಳನ್ನು ಜೀವನ ಅಳವಡಿಸಿಕೊಂಡರೆ ನಿಜವಾಗಿ ದೇಶ ಸರ್ವಜನಾಂಗದ ಶಾಂತಿ ತೋಟವಾಗುತ್ತದೆ ಎಂದು ತಿಳಿಸಿದರು.
ಕುವೆಂಪು ಅವರ ಕವಿತೆ, ನಾಟಕಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವರ ತಮ್ಮ ಸಾಹಿತ್ಯ ಕೃಷಿಯಲ್ಲಿ ಸರ್ವ ಜನಾಂಗದವರು, ಒಂದೆ ಎಂಬಂತೆ ಜೀವಿಸಬೇಕು ಎಂಬ ಆಸೆಯ ಹೊಂದಿದ್ದರು ಎನ್ನುವದಕ್ಕೆ ಓ ನನ್ನ ಚೇತನ, ಆಗೂ ನೀ ಅನಿಕೇತನ ಕವಿತೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಕುವೆಂಪು ಅವರು ಕನ್ನಡಕ್ಕೆ ಕಿರೀಟ ಇದ್ದಂತೆ. ಅವರು ರಚಿಸಿದ ಹಲವಾರು ಕೃತಿಗಳು ಇಂದು ಆದರ್ಶ ಮೌಲ್ಯಗಳನ್ನು ಹೊಂದಿವೆ. ಅವರು ಸಾಹಿತ್ಯ ಕ್ಷೇತ್ರದಲ್ಲಿ ಯಾರು ಮಾಡದಂತ ಸಾಧನೆ ಮಾಡಿದ್ದಾರೆ. ಆ ಕಾರಣಕ್ಕಾಗಿ ರಾಜ್ಯ ಸರ್ಕಾರ ಅವರ ಜನ್ಮ ದಿನವನ್ನು ವಿಶ್ವ ಮಾನವ ದಿನವೆಂದು ಆಚರಣೆ ಮಾಡುತ್ತಿದೆ. ಅವರ ಆದರ್ಶಗಳನ್ನು ಎಲ್ಲರೂ ಅವಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಜರಾಯಿ ತಹಶೀಲ್ದಾರ್ ಶ್ರೀನಿವಾಸರೆಡ್ಡಿ, ಒಕ್ಕಲಿಗರ ಸಂಘದ ಗೌರವಾಧ್ಯಕ್ಷರಾದ ಬೀಸಪ್ಪಗೌಡ, ಜಿಲ್ಲಾಧ್ಯಕ್ಷ ಕೆ.ವಿ ಶಂಕರಪ್ಪ, ನಿರ್ದೇಶಕರಾದ ಡಿ.ಕೆ.ರಮೇಶ್, ಮುಖಂಡರಾದ ನಾರಾಯಣಸ್ವಾಮಿ, ರಮೇಶ್,ಲೋಕೇಶ್, ಕೃಷ್ಣೇಗೌಡ, ಹನೀಫ್, ವರಲಕ್ಷ್ಮಿ ಅವರು ಕುವೆಂಪು ಅವರ ಕುರಿತು ಉಪನ್ಯಾಸ ನೀಡಿದರು.
ಚಿತ್ರ : ಕೋಲಾರ ನಗರದ ಟಿ ಚನ್ನಯ್ಯ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಕುವೆಂಪು ಕನ್ನಡ ಕಲಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಎಸ್.ಎಂ ಮಂಗಳ ಉದ್ಘಾಟಿಸಿ ಮಾತನಾಡಿದರು.ಕೃಷ್ಣ ಸಂಧಾನ ನಾಟಕ ಪ್ರದರ್ಶನ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್