ಜಾನಪದ ಕಲಾವಿದ ಅಂದ್ರಹಳ್ಳಿ ನಂಜೇಮರಿಯಪ್ಪ ನಿಧನ
ಜಾನಪದ ಕಲಾವಿದ ಅಂದ್ರಹಳ್ಳಿ ನಂಜೇಮರಿಯಪ್ಪ ನಿಧನ
ಚಿತ್ರ : ಅಂದ್ರಹಳ್ಳಿ ನಂಜೇಮರಿಯಪ್ಪ


ಕೋಲಾರ, ಡಿ.೨೯ (ಹಿ.ಸ) :

ಆ್ಯಂಕರ್ : ಹಿರಿಯ ಜಾನಪದ ಕಲಾವಿದರೂ ಬೇಡಜಂಗಮ ಸಮಾಜ ಸಂಸ್ಥೆಯ ಗೌರವಾಧ್ಯಕ್ಷರಾದ ಅಂದ್ರಹಳ್ಳಿ ನಂಜೇಮರಿಯಪ್ಪ (೮೫) ಅವರು ವಯೋ ಸಹಜವಾಗಿ ಶಿವೈಕ್ಯರಾದರು.

ಕೋಲಾರ ತಾಲ್ಲೂಕು, ವೇಮಗಲ್ ಹೋಬಳಿಯ ಅಂದ್ರಹಳ್ಳಿ ಗ್ರಾಮದ ನಂಜೇಮರಿಯಪ್ಪ ಅವರು ಹರಿಕಥೆ, ಕರಡಿ ಸಮ್ಮೇಳನ ಜಾನಪದ ಕಲಾವಿದರಾಗಿದ್ದು, ಬೇಡಜಂಗಮ ಸಮಾಜ ಸಂಸ್ಥೆಯ ಗೌರವಾಧ್ಯಕ್ಷರಾಗಿ, ಅಂದ್ರಹಳ್ಳಿ ಶ್ರೀ ಬಸವೇಶ್ವರ ಸ್ವಾಮಿ ಮುಜರಾಯಿ ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಹರಿಕಥೆ ಮತ್ತು ಕರಡಿ ಸಮ್ಮೇಳನದ ಜಾನಪದ ಕಲಾವಿದರಾಗಿ ಸುಮಾರು ಆರು ದಶಕಗಳ ಕಾಲ ಉತ್ತಮ ಸೇವೆ ಸಲ್ಲಿಸಿರುವ ಅಂದ್ರಹಳ್ಳಿ ನಂಜೇಮರಿಯಪ್ಪ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಗಡಿಭಾಗಗಳಲ್ಲಿ ವೀರಶೈವ ಸಮುದಾಯದವರು ನಡೆಸುವ ಹಾಗೂ ಹುಟ್ಟಿನಿಂದ ಸಾವಿನವರೆವಿಗೂ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ಹಿರಿಯ ಜಾನಪದ ಕಲಾವಿಧರಾದ ಅಂದ್ರಹಳ್ಳಿ ನಂಜೇಮರಿಯಪ್ಪ ಅವರಿಗೆ ರಾಜ್ಯ ಸರ್ಕಾರವು ಕಲಾವಿದರ ಹಾಗೂ ಮುಜರಾಯಿ ಅರ್ಚಕರ ಗೌರವ ಮಾಸಾಶನವನ್ನು ಸಹ ಮಂಜೂರಿಸಿದೆ. ತಮ್ಮ ಸೇವಾವಧಿಯಲ್ಲಿ ವಿವಿಧ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ನಂಜೇಮರಿಯಪ್ಪ ಅವರು ಹಲವಾರು ಸಂಘ, ಸಂಸ್ಥೆಗಳ ಸನ್ಮಾನ ಗೌರವಗಳಿಗೆ ಭಾಜನರಾಗಿದ್ದರು.

ತಮ್ಮ ೮೫ನೇ ವಯಸ್ಸಿನಲ್ಲೂ ಉತ್ತಮ ಆರೋಗ್ಯದಿಂದ ಸಹಜವಾಗಿಯೇ ಓಡಾಡಿಕೊಂಡು ಇರುತ್ತಿದ್ದ ಅಂದ್ರಹಳ್ಳಿ ನಂಜೇಮರಿಯಪ್ಪ ಅವರು

ಭಾನುವಾರದಂದು ಬೆಳಿಗ್ಗೆ ವಿಪರೀತ ಚಳಿಯಿಂದಾಗಿ ಹಠಾತ್ತನೆ ಉಸಿರಾಟದ ತೊಂದರೆಯಾಗಿ ಕೊನೆಯುಸಿರೆಳೆದರು. ದಿವಂಗತರಿಗೆ ಏಳು ಜನ ಗಂಡು ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಅಂದ್ರಹಳ್ಳಿ ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ಅಪಾರ ಜನಸ್ತೋಮದ ಮಧ್ಯೆ ಹರಗುರು ಚರಣರ ಸಮ್ಮುಖದಲ್ಲಿ ನಡೆಯಿತು.

ಚಿತ್ರ : ಅಂದ್ರಹಳ್ಳಿ ನಂಜೇಮರಿಯಪ್ಪ

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande