ಡ್ರಗ್ಸ್ ಮಾಫಿಯಾ ವಿರುದ್ಧ ಸಂಸದ ಬಸವರಾಜ್ ಬೊಮ್ಮಾಯಿ ವಾಗ್ದಾಳಿ
ಗದಗ, 28 ಡಿಸೆಂಬರ್ (ಹಿ.ಸ.) : ಆ್ಯಂಕರ್ : “ಈ ಸರ್ಕಾರವೇ ಡ್ರಗ್ ಮಾಫಿಯಾ ಕಂಟ್ರೋಲ್ಡ್ ಸರ್ಕಾರವಾಗಿದೆ. ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ನಿಯಂತ್ರಿಸಲು ಸಂಪೂರ್ಣ ವಿಫಲವಾಗಿದೆ” ಎಂದು ಹಾವೇರಿ–ಗದಗ ಲೋಕ ಸಭಾ ಕ್ಷೇತ್ರದ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗದಗನಲ್ಲಿ ತೀವ್ರ ಆಕ್ರೋಶ
ಫೋಟೋ


ಗದಗ, 28 ಡಿಸೆಂಬರ್ (ಹಿ.ಸ.) :

ಆ್ಯಂಕರ್ : “ಈ ಸರ್ಕಾರವೇ ಡ್ರಗ್ ಮಾಫಿಯಾ ಕಂಟ್ರೋಲ್ಡ್ ಸರ್ಕಾರವಾಗಿದೆ. ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ನಿಯಂತ್ರಿಸಲು ಸಂಪೂರ್ಣ ವಿಫಲವಾಗಿದೆ” ಎಂದು ಹಾವೇರಿ–ಗದಗ ಲೋಕ ಸಭಾ ಕ್ಷೇತ್ರದ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗದಗನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಗದಗ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲೇ ಅತಿ ಹೆಚ್ಚು ಡ್ರಗ್ಸ್ ಬಳಕೆ ನಡೆಯುತ್ತಿದೆ. ಇದೇ ರೀತಿ ಮುಂದುವರೆದರೆ ಕರ್ನಾಟಕ ಮತ್ತೊಂದು ‘ಉಡ್ತಾ ಪಂಜಾಬ್’ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಉಡ್ತಾ ಪಂಜಾಬ್ ಅಲ್ಲ, ಮುಂದೆ ಉಡ್ತಾ ಕರ್ನಾಟಕವಾಗುವ ಭೀತಿ ಎದುರಾಗಿದೆ ಎಂದು ಎಚ್ಚರಿಕೆ ನೀಡಿದರು.

ಡ್ರಗ್ಸ್ ಮಾಫಿಯಾ ವಿರುದ್ಧ ಈ ಹಿಂದೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿತ್ತು. ಈಗಲೂ ಅಂತಹ ತಂಡಗಳ ಬಗ್ಗೆ ಮಾತನಾಡಲಾಗುತ್ತಿದೆ. ಆದರೆ ನೆಲಮಟ್ಟದಲ್ಲಿ ಯಾವುದೇ ಪರಿಣಾಮಕಾರಿ ಕ್ರಮಗಳು ಕಾಣಿಸುತ್ತಿಲ್ಲ. ಡ್ರಗ್ಸ್ ಪೆಡ್ಲರ್‌ಗಳಿಗೆ ಪೊಲೀಸರ ಭಯವೇ ಇಲ್ಲ. ಹಲವಾರು ಪ್ರಕರಣಗಳಲ್ಲಿ ಪೊಲೀಸರ ಕಾರ್ಯವೈಖರಿ ನೋಡಿದರೆ, ಆರೋಪಿಗಳಿಗೆ ಸುಲಭವಾಗಿ ಬೇಲ್ ಸಿಗುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದರು.

ಡ್ರಗ್ಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಠಿಣ ಕಾನೂನುಗಳಿವೆ. 1988ರಲ್ಲೇ ಜಾರಿಗೆ ಬಂದಿರುವ ಕಾನೂನು ಪ್ರಕಾರ ಕನಿಷ್ಠ ಒಂದು ವರ್ಷ ಬೇಲ್ ಸಿಗದಂತೆ ವ್ಯವಸ್ಥೆ ಇದೆ. ಆದರೆ ಆ ಕಾನೂನುಗಳನ್ನು ಸರಿಯಾಗಿ ಬಳಸುತ್ತಿಲ್ಲ. ಕಾನೂನು ಇದ್ದರೂ ಅದರ ಅನುಷ್ಠಾನ ಶೂನ್ಯವಾಗಿದೆ ಎಂದು ಬೊಮ್ಮಾಯಿ ಕಿಡಿಕಾರಿದರು.

ರಾಜ್ಯದ ಕಾನೂನು ಸುವ್ಯವಸ್ಥೆ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಉದಾಹರಣೆಯಾಗಿ, ಮಹಾರಾಷ್ಟ್ರ ರಾಜ್ಯದ ಪೊಲೀಸರು ಬಂದು ಕರ್ನಾಟಕದಲ್ಲಿ ಡ್ರಗ್ಸ್ ರೇಡ್ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ರಾಜ್ಯದ ಪೊಲೀಸ್ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ. ಅಲ್ಲದೆ, ಕೆಲ ಪೊಲೀಸ್ ಅಧಿಕಾರಿಗಳು ಡ್ರಗ್ಸ್ ಪೆಡ್ಲರ್‌ಗಳ ಜೊತೆ ಶಾಮೀಲಾಗಿದ್ದಾರೆ ಎಂಬ ಗಂಭೀರ ಸಂಶಯವೂ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಡ್ರಗ್ಸ್ ದಂಧೆ ಇಂದು ನಗರಗಳಲ್ಲಷ್ಟೇ ಅಲ್ಲ, ಎಲ್ಲಾ ಕಾಲೇಜುಗಳವರೆಗೂ ವ್ಯಾಪಿಸಿದೆ. ಹಾವೇರಿ ಜಿಲ್ಲೆಯವರೆಗೂ ಡ್ರಗ್ಸ್ ಮಾಫಿಯಾ ಜಾಲ ಹರಡಿದೆ. ಜಿಲ್ಲಾ ಕೇಂದ್ರಗಳಲ್ಲೂ ಡ್ರಗ್ಸ್ ಸುಲಭವಾಗಿ ಲಭ್ಯವಾಗುತ್ತಿದೆ. ಸರ್ಕಾರ ಇದನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು. ಡ್ರಗ್ಸ್ ದಂಧೆ ನಡೆಯುತ್ತಿರುವ ವ್ಯಾಪ್ತಿಯಲ್ಲಿರುವ ಎಲ್ಲಾ ಅಧಿಕಾರಿಗಳನ್ನು ಬದಲಾವಣೆ ಮಾಡಬೇಕು. ಹೊಸ ಹಾಗೂ ನಿಷ್ಠಾವಂತ ಅಧಿಕಾರಿಗಳನ್ನು ನೇಮಕ ಮಾಡಬೇಕು. ವಿಶೇಷ ಸ್ಕ್ವಾಡ್ ರಚಿಸಿ, ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ಎಲ್ಲರನ್ನು ಹಿಡಿದು ಕಠಿಣವಾಗಿ ಶಿಕ್ಷಿಸಬೇಕು ಎಂದು ಆಗ್ರಹಿಸಿದರು.

ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಕಾನೂನು ಬದಲಾವಣೆ ಮಾಡುವುದಕ್ಕಿಂತ ಮೊದಲು ಡ್ರಗ್ಸ್ ಮಾಫಿಯಾ ವಿರುದ್ಧ ಅತ್ಯಂತ ಕಠಿಣ ಕಾನೂನು ತರಬೇಕು. ರೈತರ ಗೊಬ್ಬರ, ಬೀಜ ಕಳ್ಳತನ ಮಾಡಿದರೂ ಬಿಗಿ ಕಾನೂನು ಇಲ್ಲ. ಡ್ರಗ್ಸ್ ಮಾಫಿಯಾ ಮಾಡಿದರೂ ಕಠಿಣ ಕಾನೂನು ಇಲ್ಲ. ಕಳ್ಳಭಟ್ಟಿ ನಡೆಸಿದರೂ ಬಿಗಿ ಕಾನೂನು ಇಲ್ಲ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದು ಕರ್ನಾಟಕ ರಾಜ್ಯ ಕಾನೂನು ಸುವ್ಯವಸ್ಥೆಯ ರಾಜ್ಯವಾಗಿಲ್ಲ, ಅನೈತಿಕ ಚಟುವಟಿಕೆಗಳಿಂದ ತುಂಬಿದ ರಾಜ್ಯವಾಗುತ್ತಿದೆ. ಸರ್ಕಾರ ತನ್ನ ಒಳಗಿನ ಕಚ್ಚಾಟದಲ್ಲೇ ಮುಳುಗಿದೆ. ಅದೇ ಕಾರಣಕ್ಕೆ ಡ್ರಗ್ಸ್ ಮಾಫಿಯಾದವರು ಯಾವುದೇ ಅಡಚಣೆ ಇಲ್ಲದೆ ತಮ್ಮ ಅಕ್ರಮ ಚಟುವಟಿಕೆಗಳನ್ನು ಮುಂದುವರೆಸುತ್ತಿದ್ದಾರೆ ಎಂದು ಬಸವರಾಜ್ ಬೊಮ್ಮಾಯಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಈ ಬಗ್ಗೆ ಸರ್ಕಾರ ತಕ್ಷಣ ಕಠಿಣ ನಿರ್ಧಾರ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಯುವ ಪೀಳಿಗೆ ಸಂಪೂರ್ಣವಾಗಿ ನಾಶವಾಗುವ ಭೀತಿ ಎದುರಾಗಿದೆ ಎಂದು ಎಚ್ಚರಿಸಿ, ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಂಸದರು ಆಗ್ರಹಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande