
ಗದಗ, 28 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಉತ್ತರ ಕರ್ನಾಟಕದ ಪ್ರಖ್ಯಾತ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ಗದಗ ತಾಲೂಕಿನ ಬಿಂಕದಕಟ್ಟಿ ಮೃಗಾಲಯ ಇದೀಗ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದು ಆಗಿದೆ. ವೀಕೆಂಡ್, ಇಯರ್ ಎಂಡ್ ಹಾಗೂ ಸಾಲು ಸಾಲು ರಜೆಗಳ ಹಿನ್ನೆಲೆ ಮೃಗಾಲಯಕ್ಕೆ ಪ್ರವಾಸಿಗರ ದಂಡು ಹರಿದು ಬರುತ್ತಿದ್ದು, ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪ್ರಾಣಿ, ಪಕ್ಷಿಗಳ ವೀಕ್ಷಣೆಯಲ್ಲಿ ತಲ್ಲೀನರಾಗಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲೇ ಅತಿ ಹೆಚ್ಚು ಪ್ರಾಣಿ ಹಾಗೂ ಪಕ್ಷಿಗಳ ಸಂಗ್ರಹ ಹೊಂದಿರುವ ಮೃಗಾಲಯ ಎಂಬ ಹೆಗ್ಗಳಿಕೆಗೆ ಬಿಂಕದಕಟ್ಟಿ ಮೃಗಾಲಯ ಪಾತ್ರವಾಗಿದೆ. ಹೀಗಾಗಿ ರಾಜ್ಯದ ನಾನಾ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು, ಪ್ರಾಣಿ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ಮೃಗಾಲಯಕ್ಕೆ ಆಗಮಿಸಿ ಕಾಡು ಪ್ರಾಣಿಗಳ ಜೀವನ ಶೈಲಿಯನ್ನು ನೇರವಾಗಿ ವೀಕ್ಷಿಸುತ್ತಿದ್ದಾರೆ. ವಿಶೇಷವಾಗಿ ಶೈಕ್ಷಣಿಕ ಪ್ರವಾಸಕ್ಕೆ ಶಾಲಾ–ಕಾಲೇಜು ಮಕ್ಕಳ ತಂಡಗಳು ಆಗಮಿಸುತ್ತಿದ್ದು, ಮಕ್ಕಳಲ್ಲಿ ಪರಿಸರ ಜಾಗೃತಿ ಹಾಗೂ ಪ್ರಾಣಿ ಸಂರಕ್ಷಣೆಯ ಅರಿವು ಮೂಡಿಸುವಲ್ಲಿ ಮೃಗಾಲಯ ಪ್ರಮುಖ ಪಾತ್ರ ವಹಿಸುತ್ತಿದೆ.
ಬಿಂಕದಕಟ್ಟಿ ಮೃಗಾಲಯದಲ್ಲಿ ಒಟ್ಟು 475 ವಿವಿಧ ಜಾತಿಯ ಪ್ರಾಣಿ, ಪಕ್ಷಿಗಳು ಇದ್ದು, ನಾಲ್ಕು ಸಿಂಹಗಳು, ಎರಡು ಹುಲಿಗಳು, ಐದು ಚಿರತೆಗಳು ಸೇರಿದಂತೆ ಅಪರೂಪದ ಕಾಡು ಪ್ರಾಣಿಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ. ಇವುಗಳ ಜೊತೆಗೆ ವಿವಿಧ ಜಾತಿಯ ಜಿಂಕೆಗಳು, ಪಕ್ಷಿಗಳು, ಸರ್ಪಗಳು ಸೇರಿದಂತೆ ಹಲವಾರು ಪ್ರಾಣಿಗಳನ್ನು ನೋಡಲು ಪ್ರವಾಸಿಗರು ಕಾತರದಿಂದ ಸಾಲುಗಟ್ಟಿ ನಿಂತು ವೀಕ್ಷಣೆ ಮಾಡುತ್ತಿದ್ದಾರೆ. ಸಿಂಹ, ಹುಲಿ, ಚಿರತೆಗಳ ನಡವಳಿಕೆಯನ್ನು ನೇರವಾಗಿ ನೋಡಿದ ಮಕ್ಕಳು ಅಪಾರ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಮಾತ್ರವೇ ಸುಮಾರು 25 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿ ಪ್ರಾಣಿ–ಪಕ್ಷಿಗಳನ್ನು ವೀಕ್ಷಣೆ ಮಾಡಿದ್ದಾರೆ. ಇದೀಗ ವೀಕೆಂಡ್, ಇಯರ್ ಎಂಡ್ ಹಾಗೂ ಮುಂದುವರಿಯುವ ರಜೆಗಳ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಜನಸಂದಣಿ ಜೋರಾಗಿದೆ.
ಕುಟುಂಬ ಸಮೇತವಾಗಿ ಬಂದ ಪ್ರವಾಸಿಗರು ಸೆಲ್ಫಿ ಪಾಯಿಂಟ್‌ಗಳಲ್ಲಿ ಫೋಟೋ ತೆಗೆದುಕೊಳ್ಳುತ್ತಾ, ನೆನಪಿನ ಕ್ಷಣಗಳನ್ನು ಸಂಗ್ರಹಿಸಿಕೊಂಡು ಸಕ್ಕತ್ ಎಂಜಾಯ್ ಮಾಡುತ್ತಿದ್ದಾರೆ.
ಪ್ರವಾಸಿಗರ ಅನುಕೂಲಕ್ಕಾಗಿ ಮೃಗಾಲಯದ ಸಿಬ್ಬಂದಿ ಅಗತ್ಯ ವ್ಯವಸ್ಥೆಗಳನ್ನು ಕೈಗೊಂಡಿದ್ದು, ಸ್ವಚ್ಛತೆ, ಕುಡಿಯುವ ನೀರು, ಮಾರ್ಗದರ್ಶನ ಫಲಕಗಳು, ಭದ್ರತೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಪ್ರವಾಸಿಗರು ಸುಗಮವಾಗಿ ಪ್ರಾಣಿಗಳನ್ನು ವೀಕ್ಷಣೆ ಮಾಡುವಂತೆ ಸಿಬ್ಬಂದಿ ಸದಾ ಮಾರ್ಗದರ್ಶನ ನೀಡುತ್ತಿದ್ದಾರೆ.
ಬಳ್ಳಾರಿ, ರಾಯಚೂರು, ಕೊಪ್ಪಳ, ಬೀದರ್, ಧಾರವಾಡ, ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಹಾಗೂ ಪ್ರಾಣಿ ಪ್ರೇಮಿಗಳು ಬಿಂಕದಕಟ್ಟಿ ಮೃಗಾಲಯಕ್ಕೆ ಆಗಮಿಸುತ್ತಿದ್ದು, “ಉತ್ತರ ಕರ್ನಾಟಕದ ಹೆಮ್ಮೆ” ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಪರೂಪದ ಕಾಡು ಪ್ರಾಣಿಗಳನ್ನು ನೇರವಾಗಿ ನೋಡಿದ ಮಕ್ಕಳು ಸಂತಸದಿಂದ ಕಂಗೊಳಿಸುತ್ತಿದ್ದು, ಕುಟುಂಬ ಸಮೇತವಾಗಿ ಬಂದವರು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದಾರೆ.
ಗದಗ ಜಿಲ್ಲೆಯ ಬಿಂಕದಕಟ್ಟಿ ಮೃಗಾಲಯ ಈ ಸಮಯದಲ್ಲಿ ಪ್ರವಾಸಿಗರ ಹಾಟ್‌ಸ್ಪಾಟ್ ಆಗಿದ್ದು, ಪ್ರಾಣಿ–ಪಕ್ಷಿಗಳ ವೀಕ್ಷಣೆಯೊಂದಿಗೆ ಮನರಂಜನೆ, ಶಿಕ್ಷಣ ಮತ್ತು ಪರಿಸರ ಜಾಗೃತಿಯನ್ನು ಒದಗಿಸುವ ಕೇಂದ್ರವಾಗಿ ಹೊರಹೊಮ್ಮಿದೆ. ವೀಕೆಂಡ್ ಹಾಗೂ ಇಯರ್ ಎಂಡ್ ಸಂಭ್ರಮದ ನಡುವೆ ಮೃಗಾಲಯದಲ್ಲಿ ಕಂಡುಬರುವ ಜನಸಂದಣಿ ಗದಗ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ನೀಡುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / lalita MP