
ಕೋಲಾರ, ೨೮ ಡಿಸೆಂಬರ್ (ಹಿ.ಸ) :
ಆ್ಯಂಕರ್ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಲ್ಯಾಣ ನಿಧಿ ಒಳ್ಳೆಯ ಆಲೋಚನೆಯೊಂದ ಕೂಡಿದೆ. ಅನುಮತಿ ಕೊಟ್ಟರೆ ಈ ನಿಧಿಗೆ ನಾನು ಕೂಡ ವೈಯಕ್ತಿಕವಾಗಿ ೨೧ ಲಕ್ಷ ಕೊಡುತ್ತೇನೆ. ಸಂಘದ ಅಭಿವೃದ್ಧಿ ಕೆಲಸಗಳಿಗೆ ಶಾಸಕರ ಅನುದಾನದಲ್ಲಿ ೫ ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ೫ ಲಕ್ಷ ಕೊಡುತ್ತೇವೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಭರವಸೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಭಾನುವಾರ ನಡೆದ ತಾಲ್ಲೂಕು ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಲ್ಲದೇ, ಕೋಲಾರ ತಾಲ್ಲೂಕು ಪತ್ರಕರ್ತರಿಗೆ ನಿವೇಶನಕ್ಕಾಗಿ ಕೋಲಾರ ನಗರ ಸುತ್ತಮುತ್ತ ಐದು ಎಕರೆ ಜಾಗ ಕೊಡಿಸುತ್ತೇನೆ. ಸರ್ಕಾರದಿಂದ ಕೊಡಿಸಲು ಸಾಧ್ಯವಾಗದಿದ್ದರೆ ನಾನೇ ಕೊಡಿಸುತ್ತೇನೆ ಎಂದು ತಿಳಿಸಿದರು.
ನಾನು ರಾಜಕಾರಣದಲ್ಲಿ ಬೆಳೆಯಲು ಕಾರಣ ಪತ್ರಕರ್ತರು. ಪತ್ರಕರ್ತರು ಜನರಲ್ಲಿ ತಿಳಿವಳಿಕೆ ಮೂಡಿಸುವವರು. ಯಾರೇ ಆದರೂ ಶಾಶ್ವತವಾಗಿ ಉಳಿಯುವ ಕೆಲಸ ಮಾಡಬೇಕು. ಹಾಗಲಕಾಯಿ ಕಹಿ ಆದರೆ ಆರೋಗ್ಯಕ್ಕೆ ಒಳ್ಳೆಯದು. ಕೆಲವರು ಮಾತು ಕಹಿ ಇರಬಹುದು. ಆ ಮಾತುಗಳ ಹಿಂದೆ ಒಳ್ಳೆಯ ಉದ್ದೇಶ ಇರುತ್ತದೆ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಚುನಾವಣಾ ಠೇವಣಿ ಹಣವನ್ನು ವಾಪಸ್ ಮಾಡಿದ ರಾಜ್ಯದ ಏಕೈಕ ಚುನಾವಣಾಧಿಕಾರಿ ಪಾ.ಶ್ರೀ ಅನಂತರಾಮು. ಪಾರದರ್ಶಕವಾಗಿ ಚುನಾವಣೆ ನಡೆಸಿದ್ದಾರೆ. ಗೆದ್ದವರು ಹಿಗ್ಗುವುದು ಬೇಡ. ಸೋತವರು ಕುಗ್ಗುವುದು ಬೇಡ ಎಂದರು.
ಈ ಬಾರಿ ರಾಜ್ಯ ವ್ಯಾಪಿ ಚುನಾವಣೆಯಿಂದ ಒಟ್ಟು ೫೪ ಲಕ್ಷ ಠೇವಣಿ ಬಂದಿದೆ. ಸಂಘದ ಚಟುವಟಿಕೆಗಳ ಬಗ್ಗೆ ಆಸಕ್ತಿ, ಉತ್ಸಾಹ ಇರುವುದು ಇದರಿಂದ ಗೊತ್ತಾಗುತ್ತದೆ. ಸಂಘ ಯಾವತ್ತೂ ನೈತಿಕತೆ ಬಿಟ್ಟುಕೊಟ್ಟಿಲ್ಲ. ಸಂಘ ಕಟ್ಟುವುದರ ಜೊತೆಜೊತೆಗೆ ಮನಸ್ಸು ಕಟ್ಟಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಿಂದ ಈಗ ಹೊರಗುಳಿದ ಪದಾಧಿಕಾರಿಗಳು ಮತ್ತೊಮ್ಮೆ ಗೈರಾದರೆ ಹುದ್ದೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಸಂಘದ ಹುದ್ದೆಗೆ ಬಂದವರಿಗೆ ಜವಾಬ್ದಾರಿ ಇದೆ. ತಮಗೆ ಸಂಘ ನಡೆಸಲು ಸಾಧ್ಯವಾಗದಿದ್ದರೆ ಹುದ್ದೆ ಬಿಟ್ಟು ಹೋಗಿ ಎಂದು ಹೇಳಿದರು. ಈ ಹಿಂದೆ ರಾಜ್ಯ ಸಂಘ ತಪ್ಪು ದಾರಿ ಇಟ್ಟಾಗ ಎಚ್ಚರಿಸಿರುವುದು ಕೋಲಾರ ಸಂಘ. ಕಳೆದ ಬಾರಿ ನಂಬರ್ ಒನ್ ಆಗಿ ಪ್ರಶಸ್ತಿ ಕೂಡ ಪಡೆದಿತ್ತು. ಅದನ್ನು ಉಳಿಸಿಕೊಳ್ಳಿ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ಪತ್ರಕರ್ತರಿಗೆ ನಾನು ಎಂಬ ಅಹಂ ಇರಬಾರದು. ದುರಂಹಕಾರ ತೋರಿಸಬೇಡಿ. ಇದು ಈ ಕಾರ್ಯಕ್ರಮಕ್ಕೆ ಬಾರದ ಪದಾಧಿಕಾರಿಗಳಿಗೆ ಎಚ್ಚರಿಕೆ ಕೂಡ ಎಂದರು.
ನಮ್ಮ ಬರವಣಿಗೆಯಿಂದ ಮಾತ್ರ ನಮ್ಮನ್ನು ಜನ ಗುರುತಿಸುತ್ತಾರೆ. ಸಂಘ ನಮ್ಮ ರಕ್ಷಣೆಗೆ ಇರುತ್ತದೆ. ಕಾರ್ಯಕ್ರಮಕ್ಕೆ ಯಾರು ಬಂದಿದ್ದಾರೆ, ಬಂದಿಲ್ಲ ಎಂಬುದು ಮುಖ್ಯ ಅಲ್ಲ. ಎಲ್ಲರಿಗಿಂತ ಪತ್ರಕರ್ತರ ಸಂಘ ಮುಖ್ಯ. ಇವತ್ತಿನ ದಿನಗಳಲ್ಲಿ ಪತ್ರಕರ್ತರು ಸಾರ್ವಜನಿಕರ ದೃಷ್ಟಿಯಲ್ಲಿ ಕಿತ್ತು ತಿನ್ನುವ ಪತ್ರಕರ್ತರು ಆಗಿ ಕಂಡು ಬರುತ್ತಿದ್ದಾರೆ, ನಾವು ಪ್ರೀತಿಯ ಪಾರಿವಾಳಗಳು ಆದಾಗ ಅವರು ನಮ್ಮಗೆ ಗೌರವ ಕೊಡುತ್ತಾರೆ. ನಮ್ಮ ಬರವಣಿಗೆ ನಮ್ಮನ್ನ ಗುರುತಿಸುವಂತೆ ಆಗಬೇಕು. ಸಾರ್ವಜನಿಕ ವಲಯದಲ್ಲಿ ಇರುವ ನಾವು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಾವು ಹೋಗಬೇಕು. ನಮ್ಮಲ್ಲಿ ಮನಸ್ಥಾಪಗಳು ಬಂದಾಗ ಕುಳಿತು ಚರ್ಚೆ ಮಾಡಿಕೊಂಡು ಸಂಘವನ್ನ ಮುನ್ನಡೆಸಿಕೊಂಡು ಹೋಗುವ ಗುಣ ನಮ್ಮಲ್ಲಿ ಬರಬೇಕು.ಅದು ಬಿಟ್ಟು ಸಂಘದ ಚಟುವಟಿಕೆಗಳಿಗೆ ಸಹಕಾರ ಕೊಡದಿದ್ದರೆ ಅಂತಹವರನ್ನು ದೂರವಿಟ್ಟು ಸಂಘದ ಕಾರ್ಯಕ್ರಮವನ್ನು ಮುನ್ನೆಡೆಸಿಕೊಂಡು ಹೋಗಬೇಕು ಎಂದು ಹೇಳಿದರು.
ದೇಶದಲ್ಲಿ ಸೈನಿಕರು ಹೇಗೆ ದೇಶವನ್ನ ಕಾಪಾಡಿಕೊಂಡು ಹೋಗುತ್ತಿದ್ದಾರೋ ಅದೇ ರೀತಿ ನಮ್ಮ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ರಾಜ್ಯದ ಪತ್ರಕರ್ತರ ಹಿತ ಕಾಯುತ್ತಿದ್ದಾರೆ ಎಂದ ಅವರು, ಮುಂದಿನ ಮೂರು ವರ್ಷದೊಳಗೆ ಪತ್ರಕರ್ತರ ಕಲ್ಯಾಣ ನಿಧಿಗೆ ಒಂದು ಕೋಟಿಯ ಗುರಿಯನ್ಮು ತಲುಪಿಸುವುದಾಗಿ ಭರವಸೆ ನೀಡಿದರು.
ಸಂಘದಲ್ಲಿ ೧ ಕೋಟಿ ಕಲ್ಯಾಣ ನಿಧಿ ಸ್ಥಾಪಿಸುವ ಗುರಿಯನ್ನು ತಲುಪಿಸುವ ಈಡೇರಿಸಲು ಪ್ರಯತ್ನಿಸುತ್ತೇವೆ. ನಂಬರ್ ಒನ್ ಸ್ಥಾನಕ್ಕೆ ತರಲು ಪ್ರಯತ್ನಿಸುತ್ತೇವೆ. ಜವಾಬ್ದಾರಿಯನ್ನು ದುರುಪಯೋಗ ಪಡಿಸಿಕೊಳ್ಳಲ್ಲ ಎಂದು ಭರವಸೆ ನೀಡಿದರು.
ಜಿಲ್ಲಾ ಚುನಾವಣಾಧಿಕಾರಿ ಪಾ.ಶ್ರೀ.ಅನಂತರಾಮು ಮಾತನಾಡಿ, ಅನ್ಯಾಯದ ಪರ ಮಾತನಾಡಬೇಕು, ನ್ಯಾಯದ ಪರ ನಿಲ್ಲಬೇಕು. ಗುಂಪು ಇರಬೇಕು ಆದರೆ ಗುಂಪುಗಾರಿಕೆ ಇರಬಾರದು. ತಂತ್ರ ಇರಬೇಕು, ಕುತಂತ್ರ ಇರಬಾರದು. ಜಾತಿ ಆಧಾರದ ಮೇಲೆ ಸಂಘ ಕಟ್ಟಬಾರದು. ಪ್ರಾಮಾಣಿಕವಾಗಿ ಜವಾಬ್ದಾರಿ ನಿಭಾಯಿಸಿ, ತಪ್ಪು ಮಾಡಿದರೆ ಪ್ರಶ್ನೆ ಮಾಡಿ, ಒಳ್ಳೆಯದನ್ನು ಶ್ಲಾಘಿಸಿ ಎಂದರು. ಚುನಾವಣೆಯಲ್ಲಿ ಬಂದಿದ್ದ ಠೇವಣಿಯನ್ನು ರಾಜ್ಯ ಪತ್ರಕರ್ತರ ಸಂಘಕ್ಕೆ ೨೫ ಸಾವಿರ ಹಾಗೂ ಜಿಲ್ಲಾ ಸಂಘಕ್ಕೆ ೨೫ ಸಾವಿರ ದೇಣಿಗೆ ನೀಡಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ಸಂಘಕ್ಕೆ ಹಿಂದೆ ಹಲವು ಬಾರಿ ಚುನಾವಣೆ ನಡೆದಿರಲಿಲ್ಲ. ಆದರೆ, ಈ ಬಾರಿ ಆಕಸ್ಮಿಕವಾಗಿ ಚುನಾವಣೆ ನಡೆದಿದೆ. ಕೇವಲ ಇಬ್ಬರು ಮೂವರಿಂದ ೨೬೦ ಮಂದಿಗೆ ತೊಂದರೆ ಆಗಬಾರದು. ಹೊರಗಡೆ ಇರುವ ಪದಾಧಿಕಾರಿಗಳು ಇನ್ನು ಮುಂದೆಯಾದರೂ ಒಗ್ಗಟ್ಟಿನಿಂದ ಇರಿ. ಇಲ್ಲದಿದ್ದರೆ ಸಮಾಜಕ್ಕೆ ಏನು ಸಂದೇಶ ನೀಡುವಿರಿ ಎಂದು ಪ್ರಶ್ನಿಸಿದರು.
ಹಲವು ಪತ್ರಕರ್ತರಿಗೆ ಮನೆಗಳು ಇಲ್ಲ. ಶಾಸಕರು ೧೦ ಎಕರೆ ಜಮೀನು ದೊರಕಿಸಿಕೊಟ್ಟರೆ ಸಹಾಯವಾಗುತ್ತದೆ ಎಂದು ಕೊತ್ತೂರು ಮಂಜುನಾಥ್ ಅವರಲ್ಲಿ ಮನವಿ ಮಾಡಿದರು.
ಸಂಘದ ಮಾಜಿ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಸಂಘದ ಯಾವುದೇ ಸ್ಥಾನ ಜವಾಬ್ದಾರಿಯೇ ಹೊರತು ಅಧಿಕಾರ ಅಲ್ಲ. ೨೫ ವರ್ಷಗಳ ಬಳಿಕ ಚುನಾವಣೆ ನಡೆದಿರುವುದು ದುರದೃಷ್ಟಕರ. ಯಾರ ಕುತಂತ್ರವೋ ಚುನಾವಣೆ ನಡೆಯಿತು. ಚುನಾವಣಾ ಚಟುವಟಿಕೆಗಳಲ್ಲಿ ರಾಜಕಾರಣಗಳನ್ನು ಬಳಸಿಕೊಳ್ಳುವುದು ಸರಿ ಅಲ್ಲ. ತಾಲ್ಲೂಕಿನ ಚುನಾವಣೆಯೊಂದರಲ್ಲಿ ಶಾಸಕರೊಬ್ನರು ಕರೆದು ಇಂಥವರೇ ಆಗಬೇಕು ಎಂದು ಹೇಳಿದ್ದು ಸರಿ ಅಲ್ಲ. ಬಂಗಾರಪೇಟೆಯಲ್ಲಿ ಅವಿರೋಧ ಆಯ್ಕೆ ಆಗಿದ್ದರೂ ಅದರ ಹಿಂದಿನ ಉದ್ದೇಶ ಸರಿ ಅಲ್ಲ ಎಂದು ತಿಳಿಸಿದರು.
ಪತ್ರಕರ್ತರ ಒಗ್ಗಟ್ಟು ಜೇನುಗೂಡಿನಂತಿರಬೇಕು. ಆದರೆ, ಒಗ್ಗಟ್ಟು ಕಾಣುತ್ತಿಲ್ಲ. ಕಾರ್ಯಕ್ರಮಕ್ಕೆ ಬಾರದೆ ಹೊರಗಡೆ ಇರುವ ಪದಾಧಿಕಾರಿಗಳು ಜವಾಬ್ದಾರಿಯಿಂದ ವರ್ತಿಸಬೇಕು. ಹೊರಗುಳಿದು ತಾವು ಏನೂ ಸಾಧನೆ ಮಾಡಲು ಆಗಲ್ಲ. ತಮಗೆ ವೋಟು ಹಾಕಿದವರಿಗೆ ಬೆಲೆ ಇಲ್ಲವೇ? ಪ್ರತಿಜ್ಞೆಗೆ ಬೆಲೆ ಇಲ್ಲವೇ? ಸಂಘದ ರಾಜ್ಯ ಅಧ್ಯಕ್ಷರಿಗೆ ಕ್ಷಮೆಯಾಚಿಸುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದರು. ಸಂಘದಲ್ಲಿ ಸರ್ವಾಧಿಕಾರಿ ಧೋರಣೆಗೂ ಅವಕಾಶ ಇರಬಾರದು. ಇದು ಚಂದ್ರಶೇಖರ್ ಅವರ ಒಬ್ಬರ ಸಂಘ ಅಲ್ಲ. ಎಲ್ಲರನ್ನೂ ಒಟ್ಟುಗೂಡಿಸಿ ಕರೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ವಾಸುದೇವ ಹೊಳ್ಳ ಮಾತನಾಡಿ, ಬಂಗಾರಪೇಟೆ ವಿದ್ಯಮಾನ ಮೊದಲೇ ಗೊತ್ತಿದ್ದರೆ ಚುನಾವಣೆ ನಡೆಸುತ್ತಿರಲಿಲ್ಲ. ಬಂಗಾರಪೇಟೆಯಲ್ಲಿ ಶಾಸಕರು, ಕೋಲಾರ ಸಂಘದ ಚುನಾವಣೆಯಲ್ಲಿ ಮಾಜಿ ಸಂಸದರ ಕೈವಾಡವಿರುವ ಮಾಹಿತಿ ಇದೆ ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಹರೀಶ್, ಮಾಲೂರು, ಶ್ರೀನಿವಾಸಪುರ, ಕೆಜಿಎಫ್, ಮುಳಬಾಗಿಲು, ಬಂಗಾರಪೇಟೆ, ಜಿಲ್ಲಾ ಸಂಘದ ಪದಾಧಿಕಾರಿಗಳು, ಸದಸ್ಯರು, ಪತ್ರಕರ್ತರು ಇದ್ದರು.
ಚಿತ್ರ : ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಭಾನುವಾರ ನಡೆದ ತಾಲ್ಲೂಕು ಪದಾಧಿಕಾರಿಗಳಿಗೆ ಶಾಸಕ ಕೊತ್ತೂರು ಮಂಜುನಾಥ್ ಪ್ರಮಾಣಪತ್ರ ವಿತರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್