
ಕೋಲಾರ, ೨೬ ಡಿಸೆಂಬರ್ (ಹಿ.ಸ) :
ಆ್ಯಂಕರ್ : ಸರ್ಕಾರಿ ಶಾಲೆಗಳಲ್ಲಿ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವು ದರಿಂದಲೇ ಇನ್ನು ವಿದ್ಯಾರ್ಥಿ, ಯುವಕರಲ್ಲಿ ಗುರುಹಿರಿಯರು, ತಂದೆ ತಾಯಿಯ ಕುರಿತು ಗೌರವ ಭಾವನೆ ಮತ್ತು ಸಂಸ್ಕಾರ ಉಳಿದಿದೆ ಎಂದು ನಿವೃತ್ತ ಶಿಕ್ಷಕ ನಾಗನಾಥ್ ಅಭಿಪ್ರಾಯಪಟ್ಟರು.
ಕೋಲಾರ ತಾಲೂಕಿನ ಕುರಗಲ್ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶಾಲೆಯ ೨೦೧೦-೧೧ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಮತ್ತು ಸ್ನೇಹಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ಹಿತವಚನ ನೀಡಿದ ಅವರು ತಂದೆ ತಾಯಿ ದುಡಿದು, ಕೂಲಿ ಮಾಡಿ ನಿಮ್ಮನ್ನು ಶಾಲೆಗೆ ಕಳುಹಿಸಿದ್ದಾರೆ, ನೀವು ಚೆನ್ನಾಗಿ ಓದುವ ಮೂಲಕ ಅವರ ಆಶಯಗಳನ್ನು ಈಡೇರಿಸುವ ಸಂಕಲ್ಪ ಮಾಡಿ, ಸಂಸ್ಕಾರ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಗುರುಹಿರಿಯರನ್ನು ಗೌರವಿಸುವ ಸಂಸ್ಕಾರ ಬೆಳೆಸಿಕೊಳ್ಳಿ, ವಿದ್ಯೆಗೆ ವಿನಯವೇ ಆಭರಣ ಎಂಬುದನ್ನು ಮರೆಯದಿರಿ ಸ್ಪರ್ಧಾತ್ಮಕ ಯುಗದಲ್ಲಿ ಯಾರಲ್ಲಿ ಶ್ರಮ,ಕನಸು, ಪ್ರಯತ್ನ ಇರುತ್ತದೆಯೋ ಅವರು ಮಾತ್ರ ಬೆಳೆಯುತ್ತಾರೆ, ಎಸ್ಸೆಸ್ಸೆಲ್ಸಿ ಟರ್ನಿಂಗ್ ಪಾಯಿಂಟ್ ಆಗಿದ್ದು, ಇಲ್ಲೇ ನಿಮ್ಮ ಮುಂದಿನ ಭವಿಷ್ಯದ ಹಾದಿ ನಿರ್ಧಾರವಾಗುತ್ತದೆ ಎಂದರು.
ಶಿಕ್ಷಕಿ ಸುಮ ಮಾತನಾಡಿ, ಪ್ರಪಂಚ ಇಂದು ಗ್ಲೋಬಲ್ ವಿಲೇಜ್ ಆಗಿದೆ. ಕಂಪ್ಯೂಟರ್ ಜ್ಞಾನವಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಂತಹವರನ್ನೇ ಅನಕ್ಷರಸ್ಥರೆಂದು ಪರಿಗಣಿಸುವ ಕಾಲ ಬರಲೂಬಹುದು ಎಂದು ತಿಳಿಸಿ, ಮಕ್ಕಳು ಇಂದಿನಿಂದಲೇ ಕಂಪ್ಯೂಟರ್ ಜ್ಞಾನ ಬೆಳೆಸಿಕೊಳ್ಳಿ ಎಂದು ತಿಳಿಸಿ, ೧೫ ವರ್ಷಗಳ ನಂತರ ಅಕ್ಷರ ಕಲಿಸಿದ ಗುರುಗಳನ್ನು ಸ್ಮರಿಸುತ್ತಿರುವುದು ನಮ್ಮ ಸಮಾಜದಲ್ಲಿ ಸಂಸ್ಕಾರ ಉಳಿದಿರುವುದಕ್ಕೆ ಸಾಕ್ಷಿ ಎಂದರು.
ಕಾರ್ಯಕ್ರಮದಲ್ಲಿ ವರ್ಗಾವಣೆ ಗೊಂಡಿರುವ ಶಿಕ್ಷಕರುಗಳಾದ ಪೆದ್ದಣ್ಣ, ಪ್ರಕಾಶ್, ಪದ್ಮಾವತಮ್ಮ, ಶ್ರೀಧರ್ ಹಾಗೂ ನಿವೃತ್ತ ರಾಗಿರುವ ನಾಗನಾಥ್ರವರನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು.
ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಹ ಶಿಕ್ಷಕರಾದ ಗಂಗಾಧರ ಮೂರ್ತಿ ಶಿವಕುಮಾರ್ ಕೆ, ಅಡುಗೆ ಸಿಬ್ಬಂದಿ ದಾಕ್ಷಾಯಿಣಿ,ಅಂಬಿಕಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಶಿವಕುಮಾರ್ ಮತ್ತಿತರರಿದ್ದು, ಇದೇ ಸಂದರ್ಭದಲ್ಲಿ ಶಿಕ್ಷಕರಿಂದ ಸಸಿ ನೆಡುವ ಕಾರ್ಯಕ್ರಮವನ್ನು ನೆರವೇರಿಸಿದರು. ಸುಮಾರು ೬೦ ಮಂದಿ ಹಳೆ ವಿದ್ಯಾರ್ಥಿಗಳು ಹಾಜರಿದ್ದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಚಿತ್ರ : ಕೋಲಾರ ತಾಲೂಕಿನ ಕುರಗಲ್ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶಾಲೆಯ ೨೦೧೦-೧೧ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಮತ್ತು ಸ್ನೇಹಮಿಲನ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ನಾಗನಾಥ್ ಪಾಲ್ಗೊಂಡು ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್