
ಕೋಲಾರ, ೨೬ ಡಿಸೆಂಬರ್ (ಹಿ.ಸ) :
ಆ್ಯಂಕರ್ : ಶ್ರೀನಿವಾಸಪುರ ಪಟ್ಟಣದ ಎಂ.ಜಿ. ರಸ್ತೆಯಲ್ಲಿ ನಿಯಮಬಾಹಿರವಾಗಿ ನಡೆಯುತ್ತಿರುವ ಅವರೇಕಾಯಿ ವಹಿವಾಟನ್ನು ಕೂಡಲೇ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ವರ್ಗಾಯಿಸಬೇಕೆಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಯುವ ರಾಜ್ಯಾಧ್ಯಕ್ಷ ಸುಬ್ರಮಣಿ.ಟಿ ಆಗ್ರಹಿಸಿದ್ದಾರೆ.
ಕೋಲಾರ ಜಿಲ್ಲಾಧಿಕಾರಿ ರವಿ ರವರನ್ನು ಭೇಟಿ ಮಾಡಿದ ವೇದಿಕೆಯ ಪದಾಧಿಕಾರಿಗಳು, ಈ ಕುರಿತು ಮನವಿ ಪತ್ರ ಸಲ್ಲಿಸಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು.
ಎಂ.ಜಿ. ರಸ್ತೆಯು ಸದಾ ವಾಹನ ಸಂಚಾರ, ಆಂಬುಲೆನ್ಸ್ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳ ಓಡಾಟದಿಂದ ಕೂಡಿರುತ್ತದೆ. ರಸ್ತೆಯಲ್ಲೇ ವಹಿವಾಟು ನಡೆಸುವುದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಬಗ್ಗೆ ಈಗಾಗಲೇ ತಾಲ್ಲೂಕು ಆಡಳಿತ ಮತ್ತು ಎಪಿಎಂಸಿ ಅಧಿಕಾರಿಗಳಿಗೆ ಹಲವು ವರ್ಷಗಳಿಂದ ಹಲವು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಗಳು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಅನಧಿಕೃತ ವಹಿವಾಟನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸುವಂತೆ ಕ್ರಮ ಕೈಗೊಳ್ಳಬೇಕು. ಜನನಿಬಿಡ ರಸ್ತೆಯಲ್ಲಿ ವಹಿವಾಟು ನಡೆಸುತ್ತಿರುವುದರಿಂದ ತುರ್ತು ಚಿಕಿತ್ಸೆಗೆ ಹೋಗುವ ಆಂಬುಲೆನ್ಸ್ಗಳಿಗೂ ಅಡ್ಡಿಯಾಗುತ್ತಿದೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸುಬ್ರಮಣಿ.ಟಿ, ಯುವ ರಾಜ್ಯಾಧ್ಯಕ್ಷರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ತಾಲ್ಲೂಕು ಅಧ್ಯಕ್ಷ ಶ್ರೀನಾಥ್ ಆರ್.ವಿ., ಪದಾಧಿಕಾರಿಗಳಾದ ಸುರೇಶ್ ನಾಯಕ್, ರಾಮಾಂಜಿ, ಮುನಿರಾಜುಸೇರಿದಂತೆ ಸಂಘಟನೆಯ ಇತರ ಮುಖಂಡರು ಉಪಸ್ಥಿತರಿದ್ದರು.
ಚಿತ್ರ : ಅವರೇಕಾಯಿ ವಹಿವಾಟು ಎಪಿಎಂಸಿಗೆ ವರ್ಗಾಯಿಸಲು ಆಗ್ರಹಿಸಿ ಶ್ರೀನಿವಾಸಪುರ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಯುವ ರಾಜ್ಯಾಧ್ಯಕ್ಷ ಸುಬ್ರಮಣಿ.ಟಿ ರವರು ಕೋಲಾರ ಜಿಲ್ಲಾಧಿಕಾರಿ ರವಿರವರಿಗೆ ಮನವಿ ಸಲ್ಲಿಸಿದರು.
.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್