
ಕೋಲಾರ, ೨೬ ಡಿಸೆಂಬರ್ (ಹಿ.ಸ) :
ಆ್ಯಂಕರ್ : ವಿದ್ಯುತ್ ಅವಘಡದಿಂದ ಆಗುವ ಪ್ರಾಣ ಹಾನಿ ತಪ್ಪಿಸಲು ಮುಂಜಾಗ್ರತೆ ಮತ್ತು ವಿನಾಕಾರಣ ವಿದ್ಯುತ್ ಪೋಲಾಗುವು ದನ್ನು ತಪ್ಪಿಸಲು ಜಾಗೃತಿವಹಿಸಿ ಪೋಷಕರಿಗೂ ಈ ಕುರಿತು ಅರಿವು ಮೂಡಿಸಿ ಎಂದು ಬೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರರಾದ ಬಿ.ಎನ್. ಶುಭಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೋಲಾರ ನಗರದ ಕಠಾರಿಪಾಳ್ಯದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ (ಬೆಸ್ಕಾಂ) ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ವಿದ್ಯುತ್ ಶಕ್ತಿಯ ಸುರಕ್ಷತೆ ಮತ್ತು ವಿದ್ಯುತ್ ಅಪಘಾತಗಳನ್ನು ತಡೆಗಟ್ಟುವ ಸಂಬಂಧ ಅರಿವು ಮೂಡಿಸಲು ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯುತ್ ಇಂದು ಅತಿ ಜೀವನಾವಶ್ಯಕ ವಾದ ಶಕ್ತಿಯ ಮೂಲವಾಗಿದೆ, ಕತ್ತಲು ಓಡಿಸಲು, ಅಡುಗೆ, ಬಿಸಿ ನೀರು, ಕೈಗಾರಿಕೆ ಗಳು ಸೇರಿದಂತೆ ಪ್ರತಿ ವಲಯದಲ್ಲೂ ವಿದ್ಯುತ್ ಅಗತ್ಯವಿದೆ, ವಿದ್ಯುತ್ ಶಕ್ತಿಯಿಲ್ಲದ ಜೀವನ ನೆನಪಿಸಿಕೊಳ್ಳಲು ಅಸಾಧ್ಯವಾದ ಪರಿಸ್ಥಿತಿಗೆ ಜನತೆ ಹೊಂದಿಕೊಂಡಿದ್ದಾರೆ ಎಂದರು.
ಈ ನಡುವೆ ವಿದ್ಯುತ್ ಬಳಕೆಯಲ್ಲಿನ ವ್ಯತ್ಯಾಸ, ಮುಂಜಾಗ್ರತೆ ವಹಿಸದಿರುವುದು, ನಿಯಮ ಬಾಹಿರ ಸಂಪರ್ಕ ಪಡೆಯುವುದು ಮತ್ತಿತರ ಕಾರಣಗಳಿಂದ ವಿದ್ಯುತ್ ಅವಘಡಗಳಾಗಿ ಸಾವು ನೋವುಗಳಾಗುವುದನ್ನು ಕಂಡಿದ್ದೇವೆ, ಕೇಳಿದ್ದೇವೆ, ಇಂತಹ ಘಟನೆಗಳನ್ನು ತಡೆದು, ವಿದ್ಯುತ್ ಅನ್ನು ಜೀವನ ಸ್ನೇಹಿ ಯಾಗಿ ಬಳಸಿಕೊಳ್ಳಲು ಮುಂಜಾಗ್ರತೆ ಅಗತ್ಯ ಎಂದರು.
ವಿದ್ಯುತ್ ತಂತಿಗಳಿಂದ ಅವಘಡ ಸಂಭವಿಸುವ ಆತಂಕವಿದ್ದರೆ, ಶಿಥಿಲ ಸಂಪರ್ಕಗಳು ಕಂಡು ಬಂದರೆ ಹತ್ತಿರದ ಬೆಸ್ಕಾಂ ಕಚೇರಿ ಅಥವಾ ಸಹಾಯವಾಣಿಗೆ ಕರೆ ಮಾಡಿ ತಿಳಿಸುವ ಅರಿವು ಅಗತ್ಯ ಎಂದು ತಿಳಿಸಿದರು.
ವಿದ್ಯುತ್ ಅವಘಡಗಳಿಂದಾಗುವ ಪ್ರಾಣ ಹಾನಿ ತಪ್ಪಿಸಲು, ವಿದ್ಯುತ್ ಶಾರ್ಟ್ ಸರ್ಕೀಟ್ನಿಂದ ಉಂಟಾಗುವ ಅನಾಹುತ, ಆಸ್ತಿ ನಷ್ಟ ತಪ್ಪಿಸಲು ಜನರು ಜಾಗೃತರಾಗುವುದು ಅತ್ಯಅಗತ್ಯ ಎಂದುಕಿವಿಮಾತು ಹೇಳಿದರು.
ಸಹಾಯಕ ನಿರ್ವಾಹಕ ಇಂಜಿನಿಯರ್ ಸಿ.ಬಸವರಾಜ್ ಮಾತನಾಡಿ, ಪವರ್ ಮ್ಯಾನ್ಗಳ ಸುರಕ್ಷತೆಗೆ ಅನುಗುಣವಾಗಿ ವಿದ್ಯುತ್ ಮಾರ್ಗಗಳು, ವಿದ್ಯುತ್ ಪರಿವರ್ತಕಗಳು, ವಿದ್ಯುತ್ ಉಪಸ್ಥಾವರಗಳು, ಬಹುಮಹಡಿ ಕಟ್ಟಡಗಳು ಸೇರಿದಂತೆ ಎಲ್ಲ ವಿದ್ಯುತ್ ಸ್ಥಾವರಗಳಲ್ಲೂ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ನಮ್ಮ ಜೀವದ ಜೊತೆಗೆ ನಮ್ಮ ಕುಟುಂಬವು ನಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಕೆಲಸದ ವೇಳೆ ಜೀವ ರಕ್ಷಕ ವಸ್ತುಗಳನ್ನು ಬಳಸುವಂತೆ ತಿಳಿಸಿದ ಅವರು, ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.
ಸಹಾಯಕ ನಿರ್ವಾಹಕ ಇಂಜಿನಿಯರ್ ಶ್ರೀನಿವಾಸ್ ಮಾತನಾಡಿ, ವಿದ್ಯುತ್ ಸುರಕ್ಷತೆಯ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳಿಗೆ ವಪ್ರಬಂಧ, ಭಾಷಣ ಸ್ಪರ್ಧೆಗಳನ್ನು ಹಮ್ಮಿಕೊಂಡು ಅರಿವು ನೀಡಲಾಗುತ್ತಿದೆ ಎಂದು ತಿಳಿಸಿ, ವಿದ್ಯಾರ್ಥಿಗಳು ವಿದ್ಯುತ್ ಅವಘಡಗಳಿಂದ ಪಾರಾಗುವ ಕುರಿತು ಅರಿವು ಪಡೆಯಿರಿ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ರಾಧಮ್ಮ ಹಾಜರಿದ್ದು, ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಶುಭ ಕೋರಿರು ಮತ್ತು ಇಲ್ಲಿ ಪಡೆದ ಮಾಹಿತಿಯನ್ನು ಸಮುದಾಯ, ಪೋಷಕರಿಗೂ ತಿಳಿಸಿ ಎಂದು ಸಲಹೆ ನೀಡಿದರು.
ಪ್ರಥಮ ಬಹುಮಾನ ೩ ಸಾವಿರ, ದ್ವಿತೀಯ ಬಹುಮಾನ ೨ ಸಾವಿರ ಹಾಗೂ ತೃತೀಯ ಬಹುಮಾನ ೧ ಸಾವಿರ ರೂಗಳನ್ನು ತಾಲ್ಲೂಕುವಾರ ಪ್ರತಿ ಸ್ಪರ್ಧೆಗು ಪ್ರತಿ ವರ್ಗಕ್ಕೂ ವಿತರಿಸಲಾಯಿತು.
ಪ್ರೌಢಶಾಲಾ ವಿಭಾಗದಿಂದ ಹೋಳೂರು ಸರ್ಕಾರಿ ಪ್ರೌಢಶಾಲೆಯ ಎಸ್.ಸಿಂಜನ ಪ್ರಥಮ, ಸೂಲೂರು ಸರ್ಕಾರಿ ಪ್ರೌಢಶಾಲೆಯ ಆರ್.ದೀಪಕ್ ದ್ವಿತೀಯ ಹಾಗೂ ಕೆಪಿಎಸ್ ನರಸಾಪುರದ ಎಂ.ವರ್ಷಿಣಿ ತೃತೀಯ ಸ್ಥಾನ ಪಡೆದುಕೊಂಡರು.
ಪ್ರಾಥಮಿಕ ವಿಭಾಗದಲ್ಲಿ ಕೆಪಿಎಸ್ ನರಸಾಪುರದ ತೇಜಸ್ ಪ್ರಥಮ, ಬಿ.ಕೆ.ಗೌತಮಿ ದ್ವಿತೀಯ, ಶಾಪೂರು ಶಾಲೆಯ ಎಲ್.ಎನ್.ಮಧುಪ್ರಿಯ ತೃತೀಯ ಸ್ಥಾನ ಪಡೆದರು.
ಪ್ರೌಢಶಾಲಾ ವಿಭಾಗದಲ್ಲಿ ಮುದುವಾಡಿ ಸರ್ಕಾರಿ ಪ್ರೌಢಶಾಲೆಯ ಷಾಜಿಯಾ ಪ್ರಥಮ, ಕೆಪಿಎಸ್ ನರಸಾಪುರದ ಕೀರ್ತನಾ ದ್ವಿತೀಯ ಮದನಹಳ್ಳಿ ಮೋರಾರ್ಜಿ ಶಾಲೆಯ ಲಕ್ಷ್ಮೀ ತೃತೀಯ ಸ್ಥಾನ ಪಡೆದರು.
ಪ್ರಾಥಮಿಕ ವಿಭಾಗದಲ್ಲಿ ಮದನಹಳ್ಳಿ ಮೊರಾರ್ಜಿಶಾಲೆಯ ದೀಕ್ಷಾ ಪ್ರಥಮ, ಕೆಪಿಎಸ್ ನರಸಾಪುರದ ವಿಷ್ಣುವರ್ಧನ್ ದ್ವಿತೀಯ ಹಗೂ ಸುಗಟೂರು ಸರ್ಕಾರಿ ಶಾಲೆಯ ಭಾವನ ತೃತೀಯ ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ಇಸಿಒಗಳಾದ ನಂಜುಂಡಗೌಡ, ಎಂ.ಎನ್.ರಾಧಾ, ಕೆ.ಶ್ರೀನಿವಾಸ್, ಸಿಆರ್ಪಿ ಕೆ.ಸಿ.ಮಂಜುನಾಥ್ ಸೇರಿದಂತೆ ಬೆಸ್ಕಾಂ ಎಲ್ಲಾ ಶಾಖಾಧಿಕಾರಿಗಳು ಹಾಜರಿದ್ದರು.
ಚಿತ್ರ ; ಕೋಲಾರದಲ್ಲಿ ವಿದ್ಯುತಶಕ್ತಿ ಸುರಕ್ಷತಾ ಕ್ರಮಗಳ ಕುರಿತ ಜಾಗೃತಿ ಕಾರ್ಯಕ್ರಮಕ್ಕೆ ಬೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರರಾದ ಬಿ.ಎನ್. ಶುಭಾರಿಂದ ಚಾಲನೆ ನೀಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್