
ಗದಗ, 26 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಉಣಚಗೇರಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದ್ದ ಕೋಳಿ ಫಾರ್ಮ್ ವಿರುದ್ಧ ಗ್ರಾಮಸ್ಥರ ಅಸಹನೆ ಸ್ಫೋಟಗೊಂಡ ಘಟನೆ ನಡೆದಿದೆ.
ಕೋಳಿ ಫಾರ್ಮ್‌ನಿಂದ ಉಂಟಾಗುತ್ತಿದ್ದ ತೀವ್ರ ದುರ್ವಾಸನೆ, ಆರೋಗ್ಯ ಸಮಸ್ಯೆಗಳಿಂದ ಕಂಗೆಟ್ಟ ಗ್ರಾಮಸ್ಥರು ಕೊನೆಗೂ ನಿಯಂತ್ರಣ ಕಳೆದುಕೊಂಡು, ನೂರಾರು ಸಂಖ್ಯೆಯಲ್ಲಿ ಫಾರ್ಮ್‌ಗೆ ನುಗ್ಗಿ ಕೋಳಿ ಹಾಗೂ ಟ್ರೇಗಟ್ಟಲೆ ಮೊಟ್ಟೆಗಳನ್ನು ಹೊತ್ತೊಯ್ದಿದ್ದಾರೆ.
ಉಣಚಗೇರಿ ಗ್ರಾಮದ ಪಕ್ಕದಲ್ಲೇ ಕಳೆದ ಸುಮಾರು 15 ವರ್ಷಗಳಿಂದ ಕೋಳಿ ಫಾರ್ಮ್ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ನಿರಂತರವಾಗಿ ಹರಡುತ್ತಿದ್ದ ದುರ್ವಾಸನೆ ಗ್ರಾಮಸ್ಥರ ಬದುಕನ್ನು ದುಸ್ತರಗೊಳಿಸಿತ್ತು.
ದುರ್ವಾಸನೆಯ ಪರಿಣಾಮವಾಗಿ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಹಲವರಿಗೆ ಉಸಿರಾಟದ ತೊಂದರೆ, ಜ್ವರ, ತಲೆನೋವು ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದವು ಎಂಬ ಆರೋಪ ಕೇಳಿ ಬಂದಿದೆ.
ಈ ಸಮಸ್ಯೆ ಕುರಿತು ಗ್ರಾಮಸ್ಥರು ಹತ್ತಾರು ಬಾರಿ ತಹಶಿಲ್ದಾರರು, ಪುರಸಭೆ ಅಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಕೋಳಿ ಫಾರ್ಮ್ ಸ್ಥಳಾಂತರಗೊಳಿಸುವ ಬಗ್ಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿರಲಿಲ್ಲ. ಇದರಿಂದಾಗಿ ವರ್ಷಗಳಿಂದ ಶಾಂತವಾಗಿದ್ದ ಗ್ರಾಮಸ್ಥರ ಅಸಹನೆ ಕಟ್ಟೆ ಒಡೆದಂತಾಯಿತು.
ಏಕಾಏಕಿ ಮಕ್ಕಳು, ಮಹಿಳೆಯರು, ಯುವಕರು ಸೇರಿದಂತೆ ನೂರಾರು ಗ್ರಾಮಸ್ಥರು ಕೋಳಿ ಫಾರ್ಮ್ ಬಳಿ ಜಮಾವಣೆಗೊಂಡರು. “ನಾ ಮುಂದೆ, ತಾ ಮುಂದೆ” ಎನ್ನುವಂತೆ ಫಾರ್ಮ್‌ಗೆ ನುಗ್ಗಿದ ಜನರು ಕೈಯಲ್ಲಿ ಕೋಳಿ, ಟ್ರೇಗಳಲ್ಲಿ ಮೊಟ್ಟೆ ಹಿಡಿದುಕೊಂಡು ಹೊರಗೆ ಬರುತ್ತಿದ್ದ ದೃಶ್ಯಗಳು ಕಂಡುಬಂದವು. ಪುಗಸಟ್ಟೆ ಕೋಳಿ ಹಾಗೂ ಮೊಟ್ಟೆಗಳನ್ನು ಹೊತ್ತೊಯ್ಯುತ್ತಿದ್ದ ಗ್ರಾಮಸ್ಥರ ದೃಶ್ಯಗಳು ನೋಡಿದವರಿಗೆ ಅಚ್ಚರಿ ಮೂಡಿಸಿದವು.
ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು ಆಗಮಿಸಿದರೂ, ಜನರ ಸಂಖ್ಯೆಯ ಎದುರು ಏನೂ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಮುಖ ಪ್ರೇಕ್ಷಕರಂತೆ ನಿಂತು ನೋಡುತ್ತಿದ್ದರು. ಲಕ್ಷಾಂತರ ರೂಪಾಯಿ ಮೌಲ್ಯದ ಕೋಳಿ ಹಾಗೂ ಮೊಟ್ಟೆಗಳು ಗ್ರಾಮಸ್ಥರ ಕೈಗೆ ಸಿಕ್ಕಿದರೂ ಕೂಡಾ ತಕ್ಷಣದ ನಿಯಂತ್ರಣ ಸಾಧ್ಯವಾಗಲಿಲ್ಲ.
ಈ ವೇಳೆ ಕೋಳಿ ಫಾರ್ಮ್ ಮಾಲೀಕರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಹಾಗೂ ಸಂಘರ್ಷವೂ ನಡೆದಿದೆ. ಕೋಳಿ ಫಾರ್ಮ್‌ನಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಮತ್ತೆ ಅಧಿಕಾರಿಗಳ ಗಮನ ಸೆಳೆದ ಗ್ರಾಮಸ್ಥರು, ಫಾರ್ಮ್ ಸ್ಥಳಾಂತರಗೊಳಿಸುವಂತೆ ಒತ್ತಾಯಿಸಿದರು.
ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾದುದು ಅಧಿಕಾರಿಗಳ ನಿರ್ಲಕ್ಷ್ಯವೇ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಇಷ್ಟು ವರ್ಷಗಳ ಕಾಲ ಸಮಸ್ಯೆ ಸಹಿಸಿಕೊಂಡು ಬಂದಿದ್ದ ಜನರು ಇಂದು ತಾಳ್ಮೆ ಕಳೆದುಕೊಂಡಿದ್ದು, ಪರಿಸ್ಥಿತಿ ಕೈಮೀರುವ ಹಂತ ತಲುಪಿದೆ ಎನ್ನಲಾಗುತ್ತಿದೆ. ಘಟನೆಯ ಬಳಿಕ ಗಜೇಂದ್ರಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸುವ ಪ್ರಯತ್ನ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆಯಲಿದೆ, ಕೋಳಿ ಫಾರ್ಮ್ ಸ್ಥಳಾಂತರ ಕುರಿತು ಆಡಳಿತ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕಾದು ನೋಡಬೇಕಾಗಿದೆ.
“ಹುಚ್ಚನ ಮದುವೆಯಲ್ಲಿ ಊಂಡವನೇ ಜಾಣ” ಎನ್ನುವಂತೆ, ಅಧಿಕಾರಿಗಳ ನಿರ್ಲಕ್ಷ್ಯದ ನಡುವೆ ಗ್ರಾಮಸ್ಥರು ಕೋಳಿ ಹಾಗೂ ಮೊಟ್ಟೆ ಹೊತ್ತೊಯ್ದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಉಣಚಗೇರಿ ಗ್ರಾಮದಲ್ಲಿ ನಡೆದ ಈ ಘಟನೆ ಇದೀಗ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP