

ನವದೆಹಲಿ, 26 ನವೆಂಬರ್ (ಹಿ.ಸ.)
ಆ್ಯಂಕರ್:
ಮೊದಲ ಬಾರಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಭಾರತೀಯ ಅಂತಾರಾಷ್ಟ್ರೀಯ ವ್ಯಾಪಾರ ಮೇಳ 2024–25ರಲ್ಲಿ ತನ್ನ ವಿಶೇಷ ಸಹಾಯ ಕೇಂದ್ರ ಸ್ಥಾಪಿಸಿದೆ. ನವೆಂಬರ್ 14 ರಿಂದ 27 ರವರೆಗೆ ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಮೇಳದ ಹಾಲ್ ಸಂಖ್ಯೆ 4ರಲ್ಲಿ ಸ್ಥಾಪಿಸಲಾದ ಈ ಇಪಿಎಫ್ಒ ಮಂಟಪವು ಇಪಿಎಫ್, ಪಿಂಚಣಿ, ಕೆವೈಸಿ ಹಾಗೂ ಡಿಜಿಟಲ್ ಜೀವನ್ ಪ್ರಮಾಣಪತ್ರಗಳಿಗೆ ಸಂಬಂಧಿಸಿದಂತೆ ನೇರವಾಗಿ ಸಮಸ್ಯೆಗಳನ್ನು ಪರಿಹರಿಸುವ ವಿಶಿಷ್ಟ ಕೇಂದ್ರವಾಗಿ ಹೊರಹೊಮ್ಮಿದೆ.
ಇಪಿಎಫ್ಒ ಪ್ರಾದೇಶಿಕ ಆಯುಕ್ತ ಅಲೋಕ್ ಯಾದವ್ ಅವರು ಹಿಂದೂಸ್ತಾನ್ ಸಮಾಚಾರಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಈ ಮಂಟಪದ ಮೂಲ ಉದ್ದೇಶ, ಸೌಲಭ್ಯಗಳು ಹಾಗೂ ಹೊಸ ಯೋಜನೆಗಳ ಬಗ್ಗೆ ವಿವರವಾಗಿ ಮಾತನಾಡಿದರು.
ಉದ್ಯೋಗಿಗಳಿಗೆ “ಒನ್–ಸ್ಟಾಪ್ ಸರ್ವಿಸ್ ಸೆಂಟರ್”
ಈ ಮಂಟಪದಲ್ಲಿ ಇಪಿಎಫ್ ಸದಸ್ಯರು ಹಾಗೂ ಉದ್ಯೋಗದಾತರು ಎದುರಿಸುವ ಯಾವುದೇ ರೀತಿಯ ತಾಂತ್ರಿಕ, ದಾಖಲೆ ಅಥವಾ ಪ್ರಮಾಣೀಕರಣ ಸಂಬಂಧಿತ ಸಮಸ್ಯೆಗಳಿಗೆ ತಕ್ಷಣದ ಪರಿಹಾರವನ್ನು ಒದಗಿಸಲು ಪ್ರತ್ಯೇಕ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಅಲೋಕ್ ಯಾದವ್ ಹೇಳಿದರು.
ಆನ್‌ಲೈನ್ ಮೂಲಕ ಕ್ಲೈಮ್ ಸಲ್ಲಿಕೆ ಮಾಡಲು ಸಾಧ್ಯವಾಗದ ಸದಸ್ಯರು ನೇರವಾಗಿ ಈ ಕೇಂದ್ರದಲ್ಲಿ ಕ್ಲೈಮ್ ಸಲ್ಲಿಸಬಹುದು. ನಮ್ಮ ಸಿಬ್ಬಂದಿಯವರು ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಡುತ್ತಾರೆ ಎಂದು ಯಾದವ್ ಹೇಳಿದರು.
ನವೆಂಬರ್ 1ರಂದು ಉದ್ಯೋಗಿಗಳ ದಾಖಲಾತಿ ಯೋಜನೆ 2025 ಅನ್ನು ಮರುಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದು, ಈ ಯೋಜನೆಯಡಿ 2017 ನಂತರ ಕೆಲಸ ಸೇರಿದವರು, 2017 ನಂತರ ಕೆಲಸ ತೊರೆದು ಹೋದವರು, ಅಥವಾ ಇಪಿಎಫ್ ದಾಖಲೆಗಳಲ್ಲಿ ವ್ಯತ್ಯಾಸ ಇರುವ ಉದ್ಯೋಗಿಗಳು ತಮ್ಮ ವಿವರಗಳನ್ನು ಮರುಪರಿಶೀಲಿಸಿಕೊಳ್ಳಲು ಹಾಗೂ ಸರಿಪಡಿಸಲು ಅವಕಾಶವನ್ನು ಪಡೆಯಬಹುದಾಗಿದ್ದು, ಉದ್ಯೋಗದಾತರೂ ಸಹ ಈ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ ಎಂದು ಯಾದವ್ ಹೇಳಿದರು.
ಒಂದು ಬಾರಿ ಡಿಜಿಟಲ್ ಜೀವನ ಪ್ರಮಾಣಪತ್ರ ಸಲ್ಲಿಸುವ ವಿಧಾನ ಕಲಿತರೆ, ಪಿಂಚಣಿದಾರರು ಮುಂದಿನ ವರ್ಷಗಳಲ್ಲಿ ಮನೆಯಲ್ಲಿಯೇ DLC ಸಲ್ಲಿಸಬಹುದು. ಕುಟುಂಬದ ಇತರೆ ಪಿಂಚಣಿದಾರರಿಗೂ ಸಹಾಯ ಮಾಡಬಹುದು ಎಂದು ಯಾದವ್ ಹೇಳಿದರು.
ಪ್ರತಿ ತಿಂಗಳ 27ರಂದು ದೇಶದ ಎಲ್ಲ ಜಿಲ್ಲೆಗಳಲ್ಲಿ ಇಪಿಎಫ್ಒ ಶಿಬಿರ ನಡೆಯುತ್ತಿದ್ದು, ಸಂಸ್ಥೆಯ ಸಮೀಪದ ಸಂಪರ್ಕಕ್ಕಾಗಿ ಎರಡು ವರ್ಷಗಳಿಂದ ಇಪಿಎಫ್ಒ “ನಿಧಿ ಆಪ್ಕೆ ಪಾಸ್” ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸುತ್ತಿದೆ ಎಂದು ತಿಳಿಸಿದ್ದು, ಈ ಮೇಳದಲ್ಲಿ 5,000ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಂಡಿದ್ದು, ಅವರಲ್ಲಿ ಹಲವರು ಇಪಿಎಫ್ ಯೋಜನೆಗಳ ಸದಸ್ಯರು. ಅವರಿಗೆ ನಮ್ಮ ಸೇವೆಯನ್ನು ತಲುಪಿಸುವ ಇದು ದೊಡ್ಡ ಅವಕಾಶ ಎಂದು ಯಾದವ್ ತಿಳಿಸಿದರು.
ಮಂಟಪದಲ್ಲಿರುವ ಪ್ರಮುಖ ಸೇವೆಗಳು:
ಆನ್‌ಲೈನ್ ಕ್ಲೈಮ್ ಸಲ್ಲಿಕೆ ಸಂಬಂಧಿತ ದೋಷಗಳ ಪರಿಹಾರ,
ಬ್ಯಾಂಕ್, ಆಧಾರ್, ಪ್ಯಾನ್ ಸೇರಿದಂತೆ ಕೆವೈಸಿ ನವೀಕರಣ ಮತ್ತು ತಿದ್ದುಪಡಿಗಳು, ಮುಖ ಗುರುತಿನ ಮೂಲಕ ಯುಎಎನ್ ಧೃಡಿಕರಣ, ಪಿಂಚಣಿದಾರರಿಗೆ ಡಿಜಿಟಲ್ ಜೀವನ್ ಪ್ರಮಾಣಪತ್ರ ಸಲ್ಲಿಕೆ, ಇಪಿಎಫ್ ಯೋಜನೆ ಮತ್ತು ಪಿಂಚಣಿ ಯೋಜನೆ ಕುರಿತು ಮಾರ್ಗದರ್ಶನ, ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್‌ಗಾರ್ ಯೋಜನೆ ಕುರಿತು ಮಾಹಿತಿ.
ಪಿಂಚಣಿದಾರರಿಗಾಗಿ ಮಂಟಪದಲ್ಲಿ ವಿಶೇಷ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಕೇಂದ್ರದಲ್ಲಿ ದೊರೆಯುವ ಸೌಲಭ್ಯಗಳು ಇಂತಿವೆ..
ಪಿಂಚಣಿ ವಿವರಗಳ ಪರಿಶೀಲನೆ, ಇಪಿಎಸ್-೯೫ ಸಂಬಂಧಿತ ಸ್ಪಷ್ಟನೆಗಳು, ಡಿಜಿಟಲ್ ಜೀವನ ಪ್ರಮಾಣಪತ್ರ ಸಲ್ಲಿಸುವ ಪ್ರಾಯೋಗಿಕ ಮಾರ್ಗದರ್ಶನ.
ಮೇಳದಲ್ಲಿ ಸಂದರ್ಶಕರ ಆಕರ್ಷಣೆಗೆ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸೇವೆಗಳನ್ನು ಮೌಲ್ಯಮಾಪನ ಮಾಡಲು QR ಕೋಡ್ ವ್ಯವಸ್ಥೆ ಬೀದಿ ನಾಟಕ ಮತ್ತು ಬೊಂಬೆಗಳ ಪ್ರದರ್ಶನ, ಸೆಲ್ಫಿ ಪಾಯಿಂಟ್ , ಮಕ್ಕಳಿಗಾಗಿ ಚಿತ್ರಕಲಾ ಕೇಂದ್ರ ಮತ್ತು ಉಡುಗೊರೆಗಳನ್ನು ನೀಡಲಾಗುತ್ತಿದೆ.
ಒಟ್ಟಾರೆ ಎಪಿಎಫ್‌ಒ ಮೊದಲ ಬಾರಿಗೆ ಅಂತಾರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ ಮಂಟಪವನ್ನು ಸ್ಥಾಪಿಸಿರುವುದು, ಸಂಸ್ಥೆಯ ಸೇವೆಗಳನ್ನು ಜನರಿಗೆ ಇನ್ನಷ್ಟು ಸಮೀಪಕ್ಕೆ ತರುವ ಮಹತ್ವದ ಹೆಜ್ಜೆ. ಆನ್‌ಲೈನ್ ಕ್ಲೈಮ್, KYC, UAN ಸೃಷ್ಟಿ, ಪಿಂಚಣಿ ಸಮಸ್ಯೆಗಳ ಪರಿಹಾರ—ಇವೆಲ್ಲವನ್ನು ಒಂದೇ ಸ್ಥಳದಲ್ಲಿ ಸಿಗುವಂತೆಯಾದ್ದರಿಂದ ಸಾವಿರಾರು ಇಪಿಎಫ್ ಸದಸ್ಯರು ಹಾಗೂ ಪಿಂಚಣಿದಾರರು ಇದರಿಂದ ನೇರ ಪ್ರಯೋಜನ ಪಡೆಯುತ್ತಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa