ಗದಗ, 06 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕು ಹಲವು ಗ್ರಾಮೀಣ ಭಾಗಗಳಿಂದ ಪ್ರತಿದಿನ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಶಿರಹಟ್ಟಿ ಪಟ್ಟಣಕ್ಕೆ ಬರುತ್ತಿದ್ದಾರೆ. ಆದರೆ, ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ಈ ವಿದ್ಯಾರ್ಥಿಗಳ ಶಿಕ್ಷಣವೇ ಅಪಾಯಕಾರಿ ಆಗುತ್ತಿದೆ. ಬಸ್‌ಗಳ ಕೊರತೆ ಹಾಗೂ ಅತಿಯಾದ ಪ್ರಯಾಣಿಕರ ರಶ್‌ನಿಂದಾಗಿ ಅನೇಕ ವಿದ್ಯಾರ್ಥಿಗಳು ಬಸ್ ಬಾಗಿಲಲ್ಲಿ ನಿಂತು ಪ್ರಯಾಣ ಮಾಡುತ್ತಿದ್ದಾರೆ. ಕೆಲವರು ಬಸ್ಸಿನ ಮೆಟ್ಟಿಲು ಹಿಡಿದು, ಕೆಲವರು ಬಾಗಿಲು ಹತ್ತಿರ ನಿಂತು ಕಾಲೇಜು ಸೇರುತ್ತಿದ್ದಾರೆ.
ಬೆಳಿಗ್ಗೆ 8 ರಿಂದ 9ರ ಹೊತ್ತಿಗೆ ಗ್ರಾಮೀಣ ಭಾಗಗಳಿಂದ ಶಿರಹಟ್ಟಿ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು. ಆದರೆ ಆ ಸಮಯಕ್ಕೆ ಬಸ್‌ಗಳು ಲಭ್ಯವಿಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಬಸ್ ಬರುವ ಸಮಯದಲ್ಲಿ ಅದು ತುಂಬಿ ಬರುತ್ತದೆ. ಸ್ಥಳ ಸಿಗದೆ ವಿದ್ಯಾರ್ಥಿಗಳು ಬಾಗಿಲಲ್ಲಿ ನಿಂತೇ ಪ್ರಯಾಣಿಸುತ್ತಿದ್ದಾರೆ. ಬೆಳಗ್ಗೆ ಕಾಲೇಜಿಗೆ ತಡವಾಗಿ ತಲುಪುವುದು, ಪಾಠ ತಪ್ಪಿಸಿಕೊಳ್ಳುವುದು, ಸಂಜೆ ಮನೆ ಸೇರುವುದಕ್ಕೆ ತಡವಾಗುವುದು ಇವರ ದಿನಚರಿಯಾಗಿದೆ.
ಪ್ರತಿಭಟನೆಗೂ ಮುಂದಾದ ವಿದ್ಯಾರ್ಥಿಗಳು
ಇತ್ತೀಚೆಗೆ ಶಿರಹಟ್ಟಿ–ಲಕ್ಷ್ಮೇಶ್ವರ ಮಾರ್ಗದ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು. “ಸಮರ್ಪಕ ಬಸ್ ವ್ಯವಸ್ಥೆ ಮಾಡಬೇಕು, ಇಲ್ಲವಾದರೆ ನಮ್ಮ ಶಿಕ್ಷಣವೇ ಅಡಚಣೆಯಾಗುತ್ತದೆ” ಎಂದು ವಿದ್ಯಾರ್ಥಿಗಳು ಸಾರಿಗೆ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಆಗ ತಾತ್ಕಾಲಿಕವಾಗಿ ಒಂದು ಬಸ್ ಕಳುಹಿಸಿದರೂ ಅದು ಕೂಡಾ ತುಂಬಿ ಬರುತ್ತಿತ್ತು. “ದಿನಾಲೂ ಈ ತರದ ಸಮಸ್ಯೆ ಎದುರಿಸುತ್ತಿದ್ದೇವೆ. ಬಸ್ ಕೊರತೆ ನಿವಾರಣೆಯಾಗಬೇಕು” ಎಂದು ವಿದ್ಯಾರ್ಥಿಗಳ ಮನವಿ.
ಶಕ್ತಿ ಯೋಜನೆಯ ಪರಿಣಾಮ
ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವ ‘ಶಕ್ತಿ ಯೋಜನೆ’ ಜಾರಿಯಾದ ಬಳಿಕ, ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕಷ್ಟ ಹೆಚ್ಚಾಗಿದೆ. ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಬಸ್‌ಗಳಲ್ಲಿ ಅತಿಯಾದ ರಶ್ ಉಂಟಾಗಿದ್ದು, ವಿದ್ಯಾರ್ಥಿಗಳು ಬಸ್ ಬಾಗಿಲಲ್ಲಿ ನಿಂತು ಪ್ರಯಾಣಿಸುವಂತಾಗಿದೆ. ಕೆಲವರು “ಅಪಘಾತ ಸಂಭವಿಸಿದರೆ ಯಾರ ಹೊಣೆ?” ಎಂಬ ಪ್ರಶ್ನೆ ಎತ್ತುತ್ತಿದ್ದಾರೆ.
ಪರೀಕ್ಷಾ ಸಮಯದಲ್ಲಿ ಹೆಚ್ಚಿದ ಸಂಕಷ್ಟ
ಈ ದಿನಗಳಲ್ಲಿ ಕಾಲೇಜುಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಆದರೆ ಬಸ್‌ಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಯಕ್ಕೆ ತಲುಪಲಾಗದೇ ತೀವ್ರ ಆತಂಕದಲ್ಲಿದ್ದಾರೆ. ಕೆಲವು ವಿದ್ಯಾರ್ಥಿಗಳು ಪರೀಕ್ಷೆಗೆ ತಡವಾಗಿ ತಲುಪಿರುವ ಘಟನೆಗಳೂ ವರದಿಯಾಗಿದೆ. “ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದ್ಯಾವಂತರಾಗಬೇಕು ಎಂದು ಸರ್ಕಾರ ಹೇಳುತ್ತದೆ, ಆದರೆ ಕನಿಷ್ಠ ಬಸ್ ಸೌಲಭ್ಯವನ್ನೂ ಕೊಡಲಾಗುತ್ತಿಲ್ಲ” ಎಂದು ವಿದ್ಯಾರ್ಥಿನಿಯೊಬ್ಬಳ ಆಕ್ರೋಶ.
ಸ್ಥಳೀಯರ ಆಗ್ರಹ
ಸ್ಥಳೀಯರು ಸಹ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ್ದಾರೆ. ಶಿರಹಟ್ಟಿ–ಗದಗ ಹಾಗೂ ಲಕ್ಷ್ಮೇಶ್ವರ–ಗದಗ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಬಿಡುವಂತೆ ಸಾರಿಗೆ ಇಲಾಖೆಗೆ ಆಗ್ರಹಿಸಿದ್ದಾರೆ. ಕೆಲ ಗ್ರಾಮಗಳಿಂದ ಬೆಳಿಗ್ಗೆ ಶಿರಹಟ್ಟಿಗೆ ಬಸ್ ಒಂದೇ ಇದ್ದು, ಅದು ಕೂಡಾ ವಿಳಂಬವಾಗಿ ಬರುತ್ತದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಸಾರಿಗೆ ಇಲಾಖೆ ಕ್ರಮಕ್ಕೆ ಒತ್ತಾಯ
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸುರಕ್ಷಿತವಾಗಿ ಸಂಚಾರ ಮಾಡುವಂತಾಗಲು ಸಾರಿಗೆ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ. ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ, ಕಾಲೇಜು ಸಮಯಕ್ಕೆ ಅನುಗುಣವಾಗಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸುವಂತೆ ಪೋಷಕರು ಹಾಗೂ ಶಿಕ್ಷಕರೂ ಆಗ್ರಹಿಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP