ವಿಜಯಪುರ, 06 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜೀವನದ ಶ್ರೇಷ್ಠತೆ ಯೌವನದಲ್ಲಿರದೇ ವಯೋವೃದ್ದರ ಅನುಭವದಲ್ಲಿದ್ದು, ಹಿರಿಯ ಜೀವಿಗಳನ್ನು ಭವಿಷ್ಯದ ಮಾರ್ಗದರ್ಶಕರಂತೆ ಕಾಣಬೇಕಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲೆಯ ಹಿರಿಯ ನಾಗರಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಿರಿಯರ ಅನುಭವ, ತ್ಯಾಗ, ಪ್ರೀತಿ ಮತ್ತು ಮಾರ್ಗದರ್ಶನ ನಮ್ಮ ಸಮಾಜದ ಬಲವಾದ ಮೂಲಸ್ತಂತವಾಗಿದೆ ಎಂದರು.
ಹಳೆಯ ಮರದ ನೆರಳಿನಲ್ಲಿ ಹೊಸ ಬೀಜಗಳು ಎಂಬಂತೆ, ಹಿರಿಯರ ಅನುಭವನದ ನೆರಳಿಲ್ಲದೇ ಯುವಜನಾಂಗದ ಬೆಳೆವಣಿಗೆ ಅಸಾಧ್ಯ. ಅಲ್ಲದೇ ನಮ್ಮ ಭವಿಷ್ಯದ ದಾರಿದೀಪವೂ ಹೌದು. ಇಂದು ನಾವು ಹಿರಿಯರನ್ಮು ಗೌರವಿಸುವುದಷ್ಟೇ ಅಲ್ಲ, ಅವರೊಂದಿಗೆ ಸಂಪರ್ಕ ಸಾಧಿಸುವ, ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅವರ ಬದುಕಿಗೆ ಗೌರವ ನೀಡುವ ನಿಜವಾದ ಸಂಸ್ಕೃತಿಯನ್ನು ಬೆಳೆಸಬೇಕಾಗಿದೆ ಎಂದು ಹೇಳಿದರು.
ಸರ್ಕಾರ ಹಿರಿಯರ ಆರೈಕೆ, ಆರೋಗ್ಯ, ಪಿಂಚಣಿ ಹಾಗೂ ಸೌಲಭ್ಯಗಳಿಗಾಗಿ ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಅದು ಸಾಕಾಗುವುದಿಲ್ಲ. ನಮ್ಮ ಮನೆಗಳಲ್ಲಿ ಸಮಾಜದಲ್ಲಿ ಮತ್ತು ಹೃದಯಗಳಲ್ಲಿ ಗೌರವವನ್ನು ಬೆಳೆಸಿದಾಗ ಮಾತ್ರ ಅವರ ಬದುಕು ಅರ್ಥಪೂರ್ಣವಾಗುತ್ತದೆ. ಹಿರಿಯ ನಾಗರಿಕರ ದಿನಾಚರಣೆ ಆಚರಣೆಗೆ ಶೀಮಿತವಾಗದೇ ಪ್ರತಿದಿನದ ಜೀವನದ ಒಂದು ಸಂಸ್ಕೃತಿಯಾಗಿ ರೂಪಿಸುವ ಅಗತ್ಯವಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಮಾತನಾಡಿ ಹಳೆಯ ಬೇರು, ಹೊಸ ಚಿಗುರು ಎಂಬAತೆ ಒಂದು ಮರ ತನ್ನ ಹಳೆಯ ಬೇರುಗಳ ಆಧಾರದ ಮೂಲಕ ಹೊಸ ಚಿಗುರುಗಳನ್ನು ಬಿಟ್ಟು ಬೆಳೆದಾಗ ಮಾತ್ರ ಸೌಂದರ್ಯವನ್ನು ಪಡೆಯುತ್ತದೆ. ಅದೇ ರೀತಿ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರಗಳು ಮೂಲ ಬೇರಾಗಿದ್ದು, ಆಧುನಿಕತೆ ಹೊಸ ಚಿಗುರಾಗಬೇಕಿದೆ. ಸುಖ, ದುಃಖವನ್ನು ಅನುಭವಿಸಿದವರು ಹಿರಿಯ ನಾಗರಿಕರಾಗಿದ್ದು, ಅವರ ಮಾರ್ಗದರ್ಶನ ಇಂದಿನ ಯುವ ಪೀಳಿಗೆ ಅನುಸರಿಸುವ ಅಗತ್ಯವಿದೆ ಎಂದು ಹೇಳಿದರು.
ಉಪನ್ಯಾಸರಾಗಿ ಆಗಮಿಸಿದ ವೈದ್ಯಾಧಿಕಾರಿ ಸಚಿನ್ ದೇಸಾಯಿ ಅವರು ವಯಸ್ಸಿಗೆ ತಕ್ಕಂತೆ ಬರುವ ಕಾಯಿಲೆಗಳ ಬಗ್ಗೆ ವಿವರವಾಗಿ ತಿಳಿಸಿದರು. ಮುರುಗಾನಂದ ಸ್ವಾಮಿಗಳು ಆಶೀರ್ವಚನ ನೀಡಿದರು.
ಹಿರಿಯ ನಾಗರಿಕರಾದ ಸಿದ್ದಲಿಂಗಯ್ಯ ಗುಳೇದ, ಮಲ್ಲಿಕಾರ್ಜುನ ಯಾಳವಾರ, ಮಲ್ಲಪ್ಪ ಗಣಿಗೇರ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಕೆ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಗಿರಿಜಾ ಪಾಟೀಲ, ಪ್ರಭು ಹಳ್ಳೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande