ಗದಗ, 06 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಘಟನೆ ನಡೆದಿದೆ. ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ದೇವರ ಶಿಬರಕಟ್ಟಿಯಲ್ಲಿದ್ದ ಪವಿತ್ರ ತ್ರಿಶೂಲವನ್ನು ದುಷ್ಕರ್ಮಿಗಳು ರಾತ್ರಿ ವೇಳೆ ಕಿತ್ತು ಹಾಕಿದ್ದಾರೆ.
ಮುಂಜಾನೆ ದೇವಸ್ಥಾನಕ್ಕೆ ಬಂದ ಭಕ್ತರು ತ್ರಿಶೂಲ ಕಾಣೆಯಾದ್ದನ್ನು ಗಮನಿಸಿ ಗ್ರಾಮದಲ್ಲಿ ಆತಂಕ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಗ್ರಾಮಸ್ಥರು ಬೆಟಗೇರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ದೇವರ ತ್ರಿಶೂಲವನ್ನು ಕಿತ್ತು ಹಾಕಿದವರ ಪತ್ತೆಗೆ ಪ್ರಯತ್ನ ಆರಂಭಿಸಿದ್ದಾರೆ. ಈ ನಡುವೆ ಗ್ರಾಮಸ್ಥರು “ದೇವರ ತ್ರಿಶೂಲ ಕಿತ್ತು ಹಾಕುವುದು ನಮ್ಮ ಧಾರ್ಮಿಕ ಭಾವನೆಗೆ ಅವಮಾನ. ಪೊಲೀಸರು ತಕ್ಷಣವೇ ದುಷ್ಕರ್ಮಿಗಳನ್ನು ಬಂಧಿಸಬೇಕು” ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP