ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 13,000 ಕೋಟಿ ಅನುದಾನ : ಸಿದ್ದರಾಮಯ್ಯ
ಕೊಪ್ಪಳ, 06 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇದೆ ಎನ್ನುವ ಪ್ರತಿ ಪಕ್ಷಗಳ ಟೀಕೆಯಲ್ಲಿ ಹುರಳಿಲ್ಲ, ಇದುವರೆಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 13,000 ಕೋಟಿ ಅನುದಾನ ನೀಡಿದೆ. ಇಂದು ಒಂದೇ ದಿನ 2 ಸಾವಿರ ಕೋಟಿ ರೂ
ಕೊಪ್ಪಳದಲ್ಲಿ ಅಭಿವೃದ್ಧಿ ಕ್ರಾಂತಿ


ಕೊಪ್ಪಳದಲ್ಲಿ ಅಭಿವೃದ್ಧಿ ಕ್ರಾಂತಿ


ಕೊಪ್ಪಳದಲ್ಲಿ ಅಭಿವೃದ್ಧಿ ಕ್ರಾಂತಿ


ಕೊಪ್ಪಳದಲ್ಲಿ ಅಭಿವೃದ್ಧಿ ಕ್ರಾಂತಿ


ಕೊಪ್ಪಳ, 06 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇದೆ ಎನ್ನುವ ಪ್ರತಿ ಪಕ್ಷಗಳ ಟೀಕೆಯಲ್ಲಿ ಹುರಳಿಲ್ಲ, ಇದುವರೆಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 13,000 ಕೋಟಿ ಅನುದಾನ ನೀಡಿದೆ. ಇಂದು ಒಂದೇ ದಿನ 2 ಸಾವಿರ ಕೋಟಿ ರೂ ಮೊತ್ತದ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಅಡಿಗಲ್ಲು ಸೇರಿದಂತೆ ಚಾಲನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆವತಿಯಿಂದ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ರೂ. 2000 ಕೋಟಿ ಮೊತ್ತದ ನಾನಾ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ/ ಶಂಕುಸ್ಥಾಪನೆ ನೆರವೇರಿಸಿ, ನಾನಾ ಇಲಾಖಾ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಅವರು, ಕೃಷ್ಣ ಮೇಲ್ದಂಡೆ ವಿಚಾರದಲ್ಲಿ ರೈತರಿಗೆ 80 ಸಾವಿರ ಕೋಟಿ ಪರಿಹಾರ ಕೊಡ್ತಾ ಇರುವುದೂ ಸಹ ನಮ್ಮ ಸರ್ಕಾರವೇ ಎಂದು ಹೇಳಿದರು.

ನುಡಿದಂತೆ ನಡೆದ ಯಾವುದಾದರೂ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ. ಪ್ರತಿ ಪಕ್ಷಗಳು ತಮ್ಮ ಅವಧಿಯಲ್ಲಿ ಬಡವರಿಗೆ ಒಂದೇ ಒಂದು ಮನೆ ಕೊಡಲಿಲ್ಲ. ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಇಂತವರು ನಮ್ಮನ್ನು ಟೀಕಿಸುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.

ಗ್ಯಾರಂಟಿ ಯೋಜನೆಗಳ ಮೂಲಕ ನಮ್ಮ ಸರ್ಕಾರ ಕಳೆದ ಎರಡು ವರ್ಷದಲ್ಲಿ ಒಂದು ಲಕ್ಷ ಕೋಟಿ ಹಣವನ್ನು ರಾಜ್ಯದ ಜನರ ಜೇಬಿಗೆ ಹಾಕಿದ್ದೇವೆ. ಇದರಿಂದ ರಾಜ್ಯದ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿ ರಾಜ್ಯದ ಜನರ ತಲಾ ಆದಾಯ ಹೆಚ್ಚಾಗಿ ರಾಜ್ಯದ ಆರ್ಥಿಕತೆ ಪ್ರಗತಿ ಕಂಡಿದೆ ಎಂದರು.

ತಲಾ ಆದಾಯದಲ್ಲಿ ಇಡೀ ದೇಶದಲ್ಲಿ ಕನ್ನಡಿಗರೇ ನಂಬರ್ ಒನ್. ಇದು ನಮ್ಮ ಸರ್ಕಾರದ ಆರ್ಥಿಕ ಸಾಧನೆ. ತೆರಿಗೆ ಪಾವತಿಯಲ್ಲಿ ರಾಜ್ಯ ಇಡೀ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ನಮ್ಮ ಯೋಜನೆಗಳು ಸರ್ವಧರ್ಮ ಹಾಗೂ ಸರ್ವಜಾತಿಗಳಿಗೂ ಸಹ ತಲುಪುತ್ತಿವೆ, ಇದು ನಮ್ಮ ಸರ್ಕಾರದ ಜಾತ್ಯತೀತ ಸಾಧನೆ ಎಂದರು.

ನಾವು ಎಲ್ಲ ಜಾತಿ, ಎಲ್ಲಾ ಧರ್ಮದವರ ಪ್ರಗತಿಗಾಗಿ ಯೋಜನೆ ರೂಪಿಸಿದೆವು. ಹೀಗಾಗಿ ಎಲ್ಲಾ ಜಾತಿಯ, ಎಲ್ಲಾ ಧರ್ಮದ ಜನರು ಸೇರಿ ರಾಜ್ಯದ ಆರ್ಥಿಕತೆಯನ್ನು ಪ್ರಗತಿಗೆ ಕೊಂಡೊಯ್ದರು ಎಂದು ಮೆಚ್ಚುಗೆ ಸೂಚಿಸಿದರು.

ಕೊಪ್ಪಳ ಜಿಲ್ಲೆಯೊಂದರಲ್ಲೇ 9 ಕೋಟಿ 22 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸಿ ಜಿಲ್ಲೆಗೆ 330 ಕೋಟಿ ಖರ್ಚಾಗಿದೆ. ಗೃಹ ಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 3,17,776 ಫಲಾನುಭವಿಗಳಿಗೆ 1,283 ಕೋಟಿ ವಿತರಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 2,75,903 ಫಲಾನುಭವಿಗಳಿಗೆ 290 ಕೋಟಿ ಕೊಟ್ಟಿದ್ದೇವೆ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ 1.96 ಕೋಟಿ ಜನರಿಗೆ 320 ಕೋಟಿ ಮೊತ್ತದ 39.097 ಮೆಟ್ರಿಕ್ ಟನ್ ದವಸಧಾನ್ಯಗಳನ್ನು ವಿತರಿಸಲಾಗಿದೆ ಎಂದು ವಿವರಿಸಿದ ಮುಖ್ಯಮಂತ್ರಿ ಬೊಕ್ಕಸ ಖಾಲಿ ಆಗಿದ್ದರೆ ಇಷ್ಟೊಂದು ಪ್ರಮಾಣದ ಹಣವನ್ನು ಜನರಿಗೆ ಕೊಡಲಾಗುತ್ತಿತ್ತಾ ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರ ಮನವಿಯಂತೆ ಮುಕ್ಕುಂಬಿ ಕೆರೆಗೆ ನೀರು ಹರಿಸಿದ್ದು ನಾವು. ಈಗ ಯಲಬುರ್ಗಾ ಕ್ಷೇತ್ರದ ಕೆರೆ ತುಂಬಿಸುವ ಯೋಜನೆಗೆ 650 ಕೋಟಿ ಹಣ ಕೊಡುತ್ತಿದ್ದೇವೆ ಎಂದು ಭರವಸೆ ನೀಡಿದರು.

ಕೊಪ್ಪಳದ ಋಣ ತೀರಿಸೋದು ಇನ್ನೂ ಬಾಕಿ ಇದೆ : ನಾನು ಕೊಪ್ಪಳಕ್ಕೆ ಕಾಲಿಟ್ಟಾಗಲೆಲ್ಲಾ ಮೈಸೂರಿಗೇ ಕಾಲಿಟ್ಟಷ್ಟು ಖುಷಿ ಆಗ್ತದೆ. ನಿಮ್ಮ ಪ್ರೀತಿಗೆ ಸದಾ ಋಣಿ. ರಾಜೀವ್ ಗಾಂಧಿ ಅವರ ಹತ್ಯೆ ಆಗದೇ ಹೋಗಿದ್ದರೆ ನಾನು ಕೊಪ್ಪಳ ಲೋಕ ಸಭಾ ಸದಸ್ಯ ಆಗಿರುತ್ತಿದ್ದೆ. ನಿಮ್ಮ ಪ್ರೀತಿಯ ಋಣ ನನ್ನ ಮೇಲಿದೆ. ಅರ್ಧ ಋಣ ತೀರಿಸಿದ್ದೇನೆ. ಉಳಿದ ಋಣವನ್ನೂ ತೀರಿಸ್ತೇನೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಅಂದಾಜು 2000 ಕೋಟಿ ರೂ.ಮೊತ್ತದ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಅಕ್ಟೋಬರ್ 6ರಂದು ಚಾಲನೆ ದೊರೆತದ್ದು ಕೊಪ್ಪಳ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳ ಜನತೆಗೆ ಸಾಕಷ್ಟು ಅನುಕೂಲವಾದ 371ಜೆ ಯೋಜನೆ ಜಾರಿಗೆ ಶ್ರಮಿಸಿದ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರ ಭಾವಚಿತ್ರವನ್ನು ಮತ್ತು ಕಡು ಬಡವರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ ಅನ್ನರಾಮಯ್ಯ ಎಂದೇ ಖ್ಯಾತಿ ಹೊಂದಿದ ಸಿದ್ದರಾಮಯ್ಯವರ ಭಾವಚಿತ್ರವನ್ನು ನಾವೆಲ್ಲರೂ ನಮ್ಮ ಮನೆಯಲ್ಲಿ ಹಾಕಬೇಕಿದೆ ಎಂದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದಲ್ಲಿ ಆರಂಭಿಸಿರುವ ಸಮೀಕ್ಷೆಯಿಂದ ಜನತೆಗೆ ಅನುಕೂಲವಾಗಲಿದೆ. ಈ ಸಮೀಕ್ಷೆಯ ಮೂಲಕ ಸಿದ್ದರಾಮಯ್ಯ ಅವರು ಜನರನ್ನು ಕೂಡಿಸುವ ಕಾರ್ಯ ಮಾಡುತ್ತಿದ್ದಾರೆ ಎಂದ ಸಚಿವರು, ಈ ಸಮೀಕ್ಷೆಯು ರಾಜ್ಯದಲ್ಲಿ ಈಗಾಗಲೇ ಶೆ.75ರಷ್ಟು ಪೂರ್ಣವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಶೆ.98 ಸಮೀಕ್ಷೆ ನಡೆದಿದೆ. ಯಲಬುರ್ಗಾ, ಕಾರಟಗಿ ಮತ್ತು ಕುಕನೂರ ತಾಲೂಕಿನಲ್ಲಿ ಈ ಸಮೀಕ್ಷೆಯು ಈಗಾಗಲೇ ಪೂರ್ಣವಾಗಿದೆ ಎಂದು ಅವರು ಹೇಳಿದರು.

ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಅವರು ಮಾತನಾಡಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನಿಯಮಿತವಾಗಿ ಬೇರೆ ಬೇರೆ ಜಿಲ್ಲೆಗಳಿಗೆ ಸಂಚರಿಸಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಿತ್ಯ ನಿರಂತರವಾಗಿ ನಡೆಯುತ್ತಿವೆ. ಬಳ್ಳಾರಿ ಜಿಲ್ಲೆಯಲ್ಲಿ ಅಂದಾಜು 1.900 ಕೋಟಿ ರೂ.ಮೊತ್ತದಲ್ಲಿ, ಮೈಸೂರು ಜಿಲ್ಲೆಯಲ್ಲಿ ಅಂದಾಜು 1,500 ಕೋಟಿ ರೂ. ಮೊತ್ತದ, ಕಲಬುರಗಿ ಜಿಲ್ಲೆಯಲ್ಲಿ 1,200 ಕೋಟಿ ರೂ. ಮೊತ್ತದಲ್ಲಿ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿಗಳು ಇತ್ತೀಚೆಗೆ ಚಾಲನೆ ನೀಡಿದ್ದಾರೆ. ಇದೀಗ ಕೊಪ್ಪಳ ಜಿಲ್ಲೆಯಲ್ಲಿ 2000 ಕೋಟಿ ರೂ. ಮೊತ್ತದಲ್ಲಿ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ಇದೇ ರೀತಿ ಎಲ್ಲ ಜಿಲ್ಲೆಗಳಲ್ಲು ಸಹ ನಾನಾ ಅಭಿವೃದ್ಧಿ ಕಾರ್ಯಗಳಾಗುತ್ತಿವೆ ಎಂದು ಸಚಿವರು ತಿಳಿಸಿದರು.

2026ರೊಳಗೆ 2.30 ಲಕ್ಷ ಮನೆಗಳು ಪೂರ್ಣ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಡುಬಡವರ ಬಗ್ಗೆ ಹೆಚ್ಚಿನ ಕಾಳಜಿಯಿದೆ. ಈ ಹಿಂದೆ ಮುಖ್ಯಮಂತ್ರಿಗಳಾದಾಗ 2.30 ಲಕ್ಷ ಮನೆಗಳನ್ನು ಕಡು ಬಡವರಿಗೆ ನೀಡಿದ್ದರು. ಇದೀಗ ನಾವು ಈಗಾಗಲೆ 36,780 ಮನೆಗಳನ್ನು ಕಟ್ಟಿ ಬಡವರಿಗೆ ನೀಡಿದ್ದೇವೆ. ಈಗ ಮತ್ತೆ 42,300 ಮನೆಗಳನ್ನು ಕಟ್ಟಿ ಬಡವರಿಗೆ ಕೊಡಲು ಕಾರ್ಯಪ್ರವೃತ್ತರಾಗಿದ್ದೇವೆ. 2026 ಮುಕ್ತಾಯದೊಳಗೆ ನಾವು 2.30 ಲಕ್ಷ ಮನೆಗಳನ್ನು ಪೂರ್ಣಗೊಳಿಸಿಕೊಡುತ್ತೇವೆ ಎಂದು ಸಚಿವರು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವ ವಿಜ್ಞಾನ ಇಲಾಖೆ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಮಾತನಾಡಿ, ರಾಜ್ಯದ ಪ್ರಗತಿ ಜೊತೆಗೆ ಜನರ ಆರ್ಥಿಕತೆಯನ್ನು ಸುಧಾರಿಸಲು ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಇದರಿಂದ ಸುಮಾರು ಒಂದು ಲಕ್ಷ ಕೋಟಿ ರೂ.ಗಳನ್ನು ರಾಜ್ಯದ ಜನರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಬಡವರ ಮಕ್ಕಳು ಡಾಕ್ಟರ್ ಆಗಬೇಕೆಂಬ ಉದ್ದೇಶದಿಂದ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜುಗಳಾಬೇಕೆಂದು ಸಿದ್ದರಾಮಯ್ಯನವರು 2013ರಲ್ಲಿ ನಿರ್ಧರಿಸಿದ್ದು, ಇಂದು ರಾಜ್ಯದಲ್ಲಿ ಒಟ್ಟು 22 ಸರ್ಕಾರಿ ಮೆಡಿಕಲ್ ಕಾಲೇಜುಗಳಿವೆ. ಇದರಿಂದಾಗಿ ಮತ್ತು 371ಜೆ ಜಾತಿಯಿಂದ ನಮ್ಮ ಭಾಗದ ಸುಮಾರು 9 ಸಾವಿರ ಬಡ, ಹಿಂದುಳಿದ ವರ್ಗದ ಜನರ ಮಕ್ಕಳು ವೈದ್ಯರಾಗಿದ್ದಾರೆ. ಇಂದು ಕೊಪ್ಪಳದಲ್ಲಿ 201 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾದ 450 ಬೆಡ್ ಬೋಧಕ ಆಸ್ಪತ್ರೆ ಉದ್ಘಾಟನೆ ಮಾಡಲಾಗಿದ್ದು, ಇದಕ್ಕೆ ಇನ್ನು 60 ಕೋಟಿ ರೂ.ಗಳ ವೆಚ್ಚದಲ್ಲಿ ಇತರೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಜನರಿಗೆ ಆರೋಗ್ಯ ಸೇವೆಗಳನ್ನು ನೀಡಲಾಗುವುದು ಎಂದರು.

ಪ್ರತಿ ಎರಡು ಜಿಲ್ಲೆಗಳಲ್ಲಿ ಒಂದು ಸೂಪರ್ ಸ್ಪೇμÁಲಿಟಿ ಆಸ್ಪತ್ರೆಯ ನಿರ್ಮಾಣ ಮಾಡಬೇಕೆಂದು ಇಂದು ಕೊಪ್ಪಳದಲ್ಲಿ ಸೂಪರ್ ಸ್ಪೇμÁಲಿಟಿ ಆಸ್ಪತ್ರೆಗಾಗಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. 120 ಕೋಟಿ ರೂ. ವೆಚ್ಚದಲ್ಲಿ ತಳಕಲನಲ್ಲಿ ಬಹು ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆಗೆ ಅಡಿಗಲ್ಲು ಹಾಕಲಾಗಿದ್ದು, ಇದರಿಂದ ಈ ಭಾಗದ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನ ತರಬೇತಿ ಪಡೆದುಕೊಳ್ಳುವರು. ಯುವ ನಿಧಿ ಯೋಜನೆಯಡಿ 2 ಲಕ್ಷ 90 ಸಾವಿರ ನಿರುದ್ಯೋಗಿ ವಿದ್ಯಾವಂತರು ನೋಂದಾಯಿಸಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ 10 ಸಾವಿರಕ್ಕೂ ಅಧಿಕ ನಿರುದ್ಯೋಗಿ ವಿದ್ಯಾವಂತರು ನೋಂದಾಯಿಸಿದ್ದು, ಇದಕ್ಕಾಗಿ 21 ಕೋಟಿ ರೂ.ಗಳನ್ನು ನಮ್ಮ ಇಲಾಖೆಯಿಂದ ಖರ್ಚು ಮಾಡಲಾಗಿದೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಆಗಿರುವ ಯಲಬುರ್ಗಾ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಮಾತನಾಡಿ, ಸಿದ್ಧರಾಮಯ್ಯನವರು ಈ ರಾಷ್ಟ್ರಕಂಡ ಜನಪರ ಹಾಗೂ ಜನಪ್ರಿಯ ಮುಖ್ಯಮಂತ್ರಿಯಾಗಿದ್ದಾರೆ. ಅವರ ಆಡಳಿತದ ಶಿಸ್ತು ಇತರರಿಗೆ ಮಾದರಿಯಾಗಿದೆ ಎಂದು ಅವರು ಮುಖ್ಯಮಂತ್ರಿಗಳ ಆಡಳಿತದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅತ್ಯಂತ ಆರ್ಥಿಕ ಶಿಸ್ತಿನಿಂದ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದಾರೆ. ಶಕ್ತಿ ಯೋಜನೆಯಡಿ ರಾಜ್ಯದಲ್ಲಿ

3 ಕೋಟಿ ಮಹಿಳೆಯರಿಗೆ ಶಕ್ತಿ ಯೋಜನೆಯಿಂದ ಅನುಕೂಲವಾಗಿದೆ. ಇದುವರೆಗೆ 559 ಕೋಟಿ ಮಹಿಳೆಯರು ಉಚಿತವಾಗಿ ಸಂಚರಿಸಿರುವುದು ಗೋಲ್ಡನ್ ರೆಕಾರ್ಡ ಆಗಿದೆ. 1.24 ಕೋಟಿಗು ಹೆಚ್ಚು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 2000 ರೂ. ಸಹಾಯಧನ ತಲುಪುತ್ತಿದೆ. 4.57 ಲಕ್ಷ ಜನರಿಗೆ ಅನ್ನಭಾಗ್ಯ ಯೋಜನೆಯಡಿ ಪಡಿತರ ಕೊಡುತ್ತಿದ್ದೇವೆ. ರಾಜ್ಯದ 1.68 ಕೋಟಿ ಮನೆಗಳಿಗೆ ಗೃಹಜ್ಯೋತಿ ಮತ್ತು ಯುವನಿಧಿ ಯೋಜನೆಗಳ ಅನುಕೂಲತೆ ದೊರೆಯುತ್ತಿದೆ. ಈ ರೀತಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ಮುಖ್ಯಮಂತ್ರಿಗಳು 83 ಸಾವಿರ ಕೋಟಿ ರೂ ಹಣವನ್ನು ನಾನಾ ಅಭಿವೃದ್ದಿ ಕಾರ್ಯಗಳಿಗೆ ನೀಡಿದ್ದಾರೆ. ರಾಜ್ಯದಲ್ಲಿನ 36 ಲಕ್ಷ ರೈತರಿಗೆ ಪಂಪಸೇಟ್ ಹಾಗೂ ಇನ್ನಿತರ ಸೌಕರ್ಯ ಒದಗಿಸಲಾಗಿದೆ. ಇದೇ ರೀತಿ ಸಾಕಷ್ಟು ಯೋಜನೆ ಜಾರಿ ಮಾಡಿದ್ದೇವೆ. ರಾಜ್ಯ ಸರ್ಕಾರವು ವಾರ್ಷಿಕವಾಗಿ ಜನರಿಗೆ ಸಾವಿರಾರು ಕೋಟಿ ರೂ.ಗಳನ್ನು ವ್ಯಯಿಸುತ್ತಿದೆ ಎಂದು ಅವರು ತಿಳಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಜೇವರ್ಗಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ. ಅಜಯ್ ಧರ್ಮಸಿಂಗ್ ಮಾತನಾಡಿ. ಕೊಪ್ಪಳ ಜಿಲ್ಲೆಯು ಐತಿಹಾಸಿಕ ನಗರವಾಗಿದ್ದು. ಇದು ಭತ್ತದ ಕಣಜ. ಆಟಿಕೆಯ ಪ್ರಪಂಚ. ಜೈನರ ಕಾಶಿ. ವಿಜಯನಗರ ಸಾಮ್ರಾಜ್ಯದಲ್ಲಿ ಶ್ರೀಮಂತವಾದ ಊರಾಗಿತ್ತು. ಈ ಬೃಹತ್ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನಗೆ ತುಂಭಾ ಸಂತೋಷವಾಗುತ್ತಿದೆ. ನಮ್ಮ ಸರ್ಕಾರ ಬಡವರು. ದೀನ ದಲಿತರು. ಹಿಂದುಳಿದವರು. ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಪರವಾಗಿ ಕೆಲಸ ಮಾಡುತ್ತಿದೆ. ಕಳೆದ 10 ದಿನಗಳಲ್ಲಿ ನಮ್ಮ ಭಾಗದಲ್ಲಿ ಮಳೆಯ ಪ್ರವಾಹದಿಂದಾಗಿ 10 ಲಕ್ಷ 50 ಸಾವಿರ ಬೆಳೆ ಹಾನಿಯಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಈಗಾಗಲೇ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಶೇ. 75 ರಿಂದ 80 ಪ್ರತಿಶತ ಬೆಳೆಹಾನಿ ನಮ್ಮ ಭಾಗದಲ್ಲಿ ಆಗಿದೆ. ಗ್ಯಾರಂಟಿ ಯೋಜನೆಗಳಲ್ಲಿ ದಾಸೋಹ ತತ್ವ ಸಿದ್ದಾಂತಗಳ ಪರಿ ಕಲ್ಪನೆ ಇದೆ. ಅನ್ನಭಾಗ್ಯ. ಶಕ್ತಿ ಮತ್ತು ಗೃಹ ಲಕ್ಷೀ ಯೋಜನೆಗಳಿಂದ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದರೆ. ಯುವ ನಿಧಿ ಯೋಜನೆಯಲ್ಲಿ ಕಾಯಕ ತತ್ವ ಇದೆ. ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದ್ದು ಈ ಭಾಗದ ಅಭಿವೃದ್ಧಿಗೆ ಪ್ರತಿವರ್ಷ 5 ಸಾವಿರ ಕೋಟಿ ರೂ ಅನುದಾನವನ್ನು ನೀಡಲಾಗುತ್ತಿದೆ ಎಂದರು.

ಈ ಭಾಗದಲ್ಲಿ 371 ಜೆ. ಜಾರಿಯಾಗಿ 11 ವರ್ಷದಲ್ಲಿ ಕಾಲಿಟ್ಟಿದ್ದೆ. ಇದರ ತಿದ್ದುಪಡಿಗೆ ಮಲ್ಲಿಕಾರ್ಜುನ ಖರ್ಗೆಯವರು ಹಾಗೂ ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿ. ಧರ್ಮಸಿಂಗ್ ಅವರ ಶ್ರಮದಿಂದ ಅಂದಿನ ಯುಪಿಎ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಶ್ರೀಮತಿ ಸೋನಿಯಾ ಗಾಂಧಿ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಇದನ್ನು ಜಾರಿಗೆ ತರಲಾಯಿತು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಅಕ್ಷರ ಆವಿಷ್ಕಾರ ಸೇರಿದಂತೆ ಇತರೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಭಾಗದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಕೊಪ್ಪಳದಲ್ಲಿ ನಡೆಯುತ್ತಿರುವ ಈ ಬಹುದೊಡ್ಡ ಸಮಾವೇಶ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಕಾರ್ಯಕ್ರಮ ಆಗಿದೆ. 2013 ರಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಪ್ಪಳ ವೈದ್ಯಕೀಯ ಕಾಲೇಜಿಗೆ 135 ಕೋಟಿ ಅನುದಾನವನ್ನು ನೀಡಿ ಅಂದು ಅಡಿಗಲ್ಲು ಹಾಕಿದ್ದರು ಇಂದು ಉದ್ಘಾಟನೆ ಮಾಡಿರುವುದು ವಿಶೇಷವಾಗಿದೆ. ಈ ಹಿಂದೆ ಜನರು ಹುಬ್ಬಳ್ಳಿ ಮತ್ತು ಬಳ್ಳಾರಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದರು ಈ ಆಸ್ಪತ್ರೆಯಿಂದ ನಮ್ಮ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. 450 ಬೆಡ್ಡಿನ ಸೂಪರ ಸ್ಪೇಶಾಲಿಟಿ ಆಸ್ಪತ್ರೆ ಉದ್ಘಾಟನೆ ನೆರವೇರಿಸಿದ್ದಾರೆ ಎಂದರು.

1,048 ಕೋಟಿ ಅನುದಾನವನ್ನು ಏತ ನೀರಾವರಿಗೆ ನೀಡಿರುವುದರಿಂದ 77 ಸಾವಿರ ಏಕರೆ ಜಮೀನಿಗೆ ನೀರಾವರಿಯಾಗಿದೆ. ಪಂಚ ಗ್ಯಾರಂಟಿ ಯೋಜನೆ ನೀಡುವ ಮೂಲಕ ದೇಶದಲ್ಲಿ ಯಾರು ಮಾಡದಂತಹ ಕೆಲಸವನ್ನು ಸಿದ್ದರಾಮಯ್ಯನವರು ಮಾಡಿದ್ದಾರೆ. ಕೊಪ್ಪಳ ಜಿಲ್ಲೆಗೆ 12 ವರ್ಷಗಳಲ್ಲಿ 10 ಸಾವಿರ ಕೋಟಿ ಅನುದಾನವನ್ನು ನೀಡುವ ಮೂಲಕ ಕೊಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ಆರೋಗ್ಯ. ನೀರಾವರಿ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರತಿವರ್ಷ 5 ಸಾವಿರ ಕೋಟಿ ಅನುದಾನವನ್ನು ನೀಡುವ ಮೂಲಕ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೂ ಒತ್ತು ನೀಡುತ್ತಿದ್ದಾರೆ. ಕೊಪ್ಪಳ ಜಿಲ್ಲೆಗೆ ವಿಮಾನ ನಿಲ್ದಾಣವಾಗಬೇಕು ಮತ್ತು ಕೊಪ್ಪಳ ವಿಶ್ವವಿದ್ಯಾಲಯ ಅಭಿವೃದ್ಧಿಯಾಗಬೇಕಿದೆ ಎಂದು ಅವರು ಹೇಳಿದರು.

ಶುಭ ಸಂದೇಶ ವಾಚನ : ರಾಜ್ಯ ಸಭೆಯ ಪ್ರತಿ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಶುಭ ಸಂದೇಶವನ್ನು ಕಾರ್ಯಕ್ರಮದಲ್ಲಿ ಓದಿ ಹೇಳಲಾಯಿತು.

ಪ್ರಗತಿ ಪುಸ್ತಕ ಲೋಕಾರ್ಪಣೆ: ಕೊಪ್ಪಳ ಜಿಲ್ಲೆಯ ಸರ್ವ ರೀತಿಯ ಯೋಜನೆಗಳ ಕಾರ್ಯಕ್ರಮಗಳ ಪ್ರಗತಿ ಮಾಹಿತಿಯ ಪುಸ್ತಕವನ್ನು ಇದೆ ವೇಳೆ ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಿದರು.

ಸನ್ಮಾನ : ಕಾರಟಗಿ ಹಾಗೂ ಕನಕಗಿರಿ ತಾಲ್ಲೂಕುಗಳ ಪ್ರಜಾಸೌಧ ನಿರ್ಮಾಣಕ್ಕೆ ಜಮೀನು ದಾನ ಮಾಡಿದ ದಾನಿಗಳಾದ ಕೆ.ಸುಂಕಪ್ಪ ಮತ್ತು ಶಮ್ಸ್ ತಬ್ರೇಜ್ ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸವಲತ್ತುಗಳ ವಿತರಣೆ: ಪಶು ಇಲಾಖೆಯಿಂದ ಕುರಿಗಾರರ ಸಂಘದ ಸದಸ್ಯರಿಗೆ ಗುರುತಿನ ಚೀಟಿ, ಕಾರ್ಮಿಕ ಪರಿಹಾರ ನಿಧಿ, ಪ್ರವಾಸಿ ಟ್ಯಾಕ್ಸಿ ಸೇರಿದಂತೆ ಸರ್ಕಾರದ ಇತರೆ ಸವಲತ್ತುಗಳನ್ನು ಮುಖ್ಯಮಂತ್ರಿಗಳು ಫಲಾನುಭವಿಗಳಿಗೆ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ, ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾದ ಕೆ.ರಾಜಶೇಖರ ಬಸವರಾಜ್ ಹಿಟ್ನಾಳ, ಸಿಂಧನೂರು ಶಾಸಕರಾದ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಅನ್ನದಾನಗೌಡ ಪಾಟೀಲ್ ಬಯ್ಯಾಪುರ, ಮುನಿರಾಬಾದ ತುಂಗಭದ್ರ ಯೋಜನೆಯ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹಸನ್ ಸಾಬ್ ನಬಿಸಾಬ ದೋಟಿಹಾಳ, ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಮದ್ ಪಟೇಲ್ ಎಸ್.ಎಮ್. ಪಟೇಲ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ. ಶ್ರೀನಿವಾಸ್ ಗುಪ್ತಾ, ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುμÁ್ಠನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್, ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ಮಾಜಿ ಸಂಸದರಾದ ಕರಡಿ ಸಂಗಣ್ಣ, ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಮೊಹಸಿನ್, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವ ವಿಜ್ಞಾನ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಮನೋಜ್ ಕುಮಾರ್ ಮೀನಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ತುಳಸಿ ಮದ್ದಿನೇನಿ, ವಸತಿ ಇಲಾಖೆ ಸರ್ಕಾರದ ಕಾರ್ಯದರ್ಶಿಗಳು, ಕೃಷ್ಣಭಾಗ್ಯ ಜಲನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಬಾಗಲಕೋಟೆಯ ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಆಯುಕ್ತರು ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಕೆ.ಪಿ ಮೋಹನರಾಜ್, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಝಹಿರಾ ನಸೀಮ್, ಬಳ್ಳಾರಿ ವಲಯದ ಪೋಲೀಸ್ ಮಹಾನಿರೀಕ್ಷಕರಾದ ವರ್ತಿಕ ಕಟಿಯಾರ್, ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ಧಿ ಹಾಗೂ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಸೇರಿದಂತೆ ಜಿಲ್ಲಾ ಮಟ್ಟದ ಇಲಾಖೆಗಳ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande