
ಕೋಲಾರ, ಅಕ್ಟೋಬರ್ ೨೮ (ಹಿ.ಸ.) :
ಆ್ಯಂಕರ್ : ಕುರುಬ ಜನಾಂಗದ ಸಮುದಾಯ ಭವನಕ್ಕೆ ೨೫ ಲಕ್ಷ ಅನುದಾನವನ್ನು ನೀಡಲಾಗುತ್ತದೆ ಎಂದು ಮಾತು ಕೊಟ್ಟಿದ್ದೆ. ಆ ಮಾತಿನಂತೆ ೧೦ ಲಕ್ಷ ಈಗಾಗಲೇ ನೀಡಿದ್ದೇನೆ. ಇದೀಗ ೧೫ ಲಕ್ಷ ಹಣವನ್ನು ನೀಡುತ್ತೇನೆ ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ ಹೇಳಿದರು.
ಮುಳಬಾಗಿಲು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಭಕ್ತ ಕನಕದಾಸರ ಜಯಂತಿ ಅಂಗವಾಗಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕುರುಬ ಸಮುದಾಯದ ಸಮುದಾಯ ಭವನಕ್ಕೆ ನನ್ನ ಕಡೆಯಿಂದ ನೀಡುವ ಅನುದಾನವನ್ನು ನೀಡಿ ನನ್ನ ಮಾತನ್ನು ಉಳಿಸಿಕೊಳ್ಳುತ್ತೇನೆ. ಆದ್ದರಿಂದ ಸಮುದಾಯ ಭವನವನ್ನು ಗುಣಮಟ್ಟವಾಗಿ ನಿರ್ಮಾಣ ಮಾಡಬೇಕು ಎಂದು ಸೂಚಿಸಿದರು.
ನವೆಂಬರ್ ೮ರಂದು ಕನಕದಾಸರ ಜಯಂತಿ ಯನ್ನು ತಾಲೂಕು ಕಚೇರಿ ಮುಂಭಾಗದಲ್ಲಿ ಕನಕದಾಸರ ಪ್ರತಿಮೆಯ ಪಲ್ಲಕ್ಕಿಗೆ ಪೂಜೆ ಮಾಡುವ ಮೂಲಕ ಸರಳವಾಗಿ ಆಚರಣೆ ಮಾಡಿ. ಮುಖ್ಯಮಂತ್ರಿಗಳ ದಿನಾಂಕ ನಿಗದಿ ಆದ ನಂತರ ಡಿಸೆಂಬರ್ ಮೊದಲ ವಾರದಲ್ಲಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ ಎಂದರು.
ತಾಲೂಕಿನಲ್ಲಿ ನಡೆಯುವ ಎಲ್ಲಾ ಸಮುದಾಯಗಳ ಜಯಂತಿಗಳಿಗೆ ಸಮಾನವಾದ ಅವಕಾಶಗಳನ್ನು ನನ್ನ ಅವಧಿಯಲ್ಲಿ ಕಲ್ಪಿಸಿ ಕೊಡಲಾಗುತ್ತಿದೆ. ಅದೇ ರೀತಿ ಕುರುಬ ಜನಾಂಗದ ಸಮುದಾಯದವರಿಗೂ ಸಹ ಎಲ್ಲಾ ರೀತಿಯ ಸಹಕಾರ ಮತ್ತು ಪ್ರೋತ್ಸಾಹವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಕನಕ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್ ಆರ್ ವೆಂಕಟೇಶಪ್ಪ ಮಾತನಾಡಿ, ತಾಲೂಕಿನಲ್ಲಿ ಹಿಂದಿನ ಕಾಲದಿಂದಲೂ ಸಹ ಭಕ್ತ ಕನಕದಾಸರ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಸಮುದಾಯದ ಜನಾಂಗ ದವರು ಸಹ ಒಗ್ಗಟ್ಟಾಗಿ ಸೇರಿ ತಾಲೂಕಿನ ಎಲ್ಲಾ ಹಳ್ಳಿಗಳಿಂದಲೂ ಪಲ್ಲಕ್ಕಿಗಳನ್ನು ತಂದು ಕನಕ ಜಯಂತಿ ಕಾರ್ಯಕ್ರಮಕ್ಕೆ ಜನಾಂಗದವರು ಹೆಚ್ಚಿನ ಪ್ರಮಾಣದಲ್ಲಿ ಹಾಜರಾಗುವ ಸಂಪ್ರದಾಯವಿದೆ. ಇದೇ ರೀತಿ ಮುಂದಿನ ದಿನಗಳಲ್ಲಿ ಸಮುದಾಯದ ಜನಾಂಗದವರು ರೂಡಿಸಿಕೊಳ್ಳಲಿದ್ದಾರೆ ಎಂದರು.
ತಹಶೀಲ್ದಾರ್ ಗೀತಾ, ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಸುಬ್ರಮಣಿ, ಕಾರ್ಯ ದರ್ಶಿ ನಲ್ಲಾಂಡಹಳ್ಳಿ ರಮೇಶ್, ಮುಖಂಡರಾದ ಚೆನ್ನಾಪುರ ವೆಂಕಟೇಶ್ ಗೌಡ, ಸಂಗೊಂಡಹಳ್ಳಿ ರಾಜಣ್ಣ, ಮೋತಕಪಲ್ಲಿ ನಾರಾಯಣ ಸ್ವಾಮಿ, ಕೋಳಿ ನಾಗರಾಜ್ ಮತ್ತಿತರರು ಇದ್ದರು.
ಪೂರ್ವಭಾವಿ ಸಭೆಯಲ್ಲಿ ಶಾಸಕ ಸಮೃದ್ಧಿ ವಿ.ಮಂಜುನಾಥ್ ಮಾತನಾಡಿದರು. ಚಿತ್ರ : ಮುಳಬಾಗಿಲು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಭಕ್ತ ಕನಕದಾಸರ ಜಯಂತಿ ಅಂಗವಾಗಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಶಾಸಕ ಸಮೃದ್ಧಿ ವಿ.ಮಂಜುನಾಥ್ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್