
ಕೋಲಾರ, ಅಕ್ಟೋಬರ್ ೨೮ (ಹಿ.ಸ.) :
ಆ್ಯಂಕರ್ : ಬಾಲ ಹಾಗೂ ಯುವ ಸಮುದಾಯ ಈ ದೇಶ ಕಟ್ಟಿ ಬೆಳೆಸಿದವರ ಮಾಹಿತಿಯನ್ನು ಸಮರ್ಪಕವಾಗಿ ಪಡೆಯುತ್ತಿಲ್ಲ. ಇದೇ ಸ್ಥಿತಿ ಮುನ್ನಡೆದರೆ ದೇಶಕ್ಕೆ ಅದು ಮಾರಕವಾಗಲಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಕಳವಳ ವ್ಯಕ್ತಪಡಿಸಿದರು.
ಕೋಲಾರ ತಾಲೂಕಿನ ನಡುಪಲ್ಲಿ ಗ್ರಾಮದಲ್ಲಿರುವ ಜ್ಞಾನಭೋದ ವಿದ್ಯಾ ಸಂಸ್ಥೆಯಲ್ಲಿ ಮಂಗಳವಾರ ಜವಾಹರ್ ಬಾಲ್ ಮಂಚ್ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಚಾಚಾಜಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ದೇಶದ ಐಕ್ಯತೆ, ರಾಷ್ಟ್ರಾ ಭಿಮಾನದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯ ಇರುವ ಜೊತೆಗೆ ಇದಕ್ಕೆ ನಿಜವಾಗಿಯೂ ಹೋರಾಡಿದ ವ್ಯಕ್ತಿಗಳನ್ನು ಪರಿಚಯಿಸುವ ಅಗತ್ಯ ಕೂಡ ಇದೆ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಿದ್ದ ಮಹಾತ್ಮ ಗಾಂಧಿ, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಸೇರಿ ಹಲವು ಹೋರಾಟಗಾರರ ಬಗ್ಗೆ ಮನವರಿಕೆ ಮಾಡಿಕೊಡುವ ಜೊತೆಗೆ, ಯುವ ಪ್ರಜೆಗಳಲ್ಲಿ ಹಿಂದಿನ ನೈಜ ಸ್ವಾತಂತ್ರ್ಯ ಹೋರಾಟದ ಹಾಗೂ ಹೋರಾಟಗಾರರ ಕುರಿತು ಸತ್ಯಾಂಶವನ್ನು ವಿವರಿಸುವ ಕಾರ್ಯ ಮಾಡಲು ಕಾಂಗ್ರೆಸ್ ಪಕ್ಷ ಜವಾಹರ್ ಬಾಲ್ ಮಂಚ್ ತಂಡದಿಂದ ಮುಂದಾಗಿದೆ ಎಂದು ತಿಳಿಸಿದರು.
ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಕ್ಷೇತ್ರವ್ಯಾಪ್ತಿ ಜವಾಹರ್ ಬಾಲ್ ಮಂಚ್ ಸಂಘಟನೆ ಆರಂಭವಾಗಿದೆ. ಮಕ್ಕಳಿಗಾಗಿಯೇ ಹಲವು ಕಾರ್ಯಕ್ರಮಗಳನ್ನೂ ಸಂಘಟಿಸಲಿರುವ ಮಂಚ್ ಪ್ರಬುದ್ಧ ವಯಸ್ಸಿನಲ್ಲೇ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ಕೆಲಸದೊಂದಿಗೆ, ದೇಶದ ಬಗ್ಗೆ ಪ್ರೀತಿ, ಸಹಬಾಳ್ವೆ, ಭ್ರಾತೃತ್ವ, ಬಾಂಧವ್ಯ ಸರ್ವ ಧರ್ಮಗಳನ್ನು ಇಷ್ಟಪಡುವ ಮನೋಭಾವನೆ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ ಎಂದು ಹೇಳಿದರು.
ಕೇರಳ ರಾಜ್ಯದಲ್ಲಿ ಮಂಚ್ ವೇದಿಕೆಯ ಬೆಳವಣಿಗೆಯನ್ನು ಕಂಡು ರಾಹುಲ್ ಗಾಂಧಿಯವರು ಇಡೀ ರಾಷ್ಟ್ರ ಸೇರಿದಂತೆ ಕರ್ನಾಟಕದಲ್ಲೂ ತಂಡವನ್ನು ಕಟ್ಟುವ ತೀರ್ಮಾನದ ಪರಿಣಾಮದಿಂದ ನಮ್ಮ ರಾಜ್ಯದಲ್ಲಿಯೂ ಮಂಚ್ ವೇದಿಕೆಯಿಂದ ದೇಶದ ಸ್ವಾಭಿಮಾನ, ದೇಶದ ಐಕ್ಯತೆ, ರಾಷ್ಟ್ರಾಭಿಮಾನದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ಕೊಂಡಾಡಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿ, ನವೆಂಬರ್ ೧೪ರಂದು ನೆಹರು ಅವರ ಹುಟ್ಟು ಹಬ್ಬದ ಪ್ರಯುಕ್ತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮಂಚ್ ವೇದಿಕೆಯಿಂದಲೂ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳೊಂದಿಗೆ ಅವರ ಪ್ರತಿಭೆಯನ್ನು ಅನಾವರಣ ಗೊಳಿಸಲಾಗುತ್ತಿದೆ ಎಂದರು.
ಜವಾಹರ್ ಬಾಲ್ ಮಂಚ್ ವೇದಿಕೆಯ ರಾಜ್ಯಾಧ್ಯಕ್ಷ ಎಚ್.ಕೆ.ಮೊಹಮ್ಮದ್ದೀನ್ ಮಾತನಾಡಿ, ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಶುಭ ಕೋರಿ, ಇಲ್ಲಿ ವಿಜೇತರಾದವರನ್ನು ರಾಜಮಟ್ಟಕ್ಕೆ ಕಳಿಸಲಾಗುವುದು. ಅಲ್ಲಿಯ ಜಯಶಾಲಿಗಳನ್ನು ರಾಷ್ಟ್ರಮಟ್ಟಕ್ಕೆ ಕಳಿಸಿ ಚಿನ್ನದ ಪದಕ ನೀಡುವ ಕಾರ್ಯಕ್ರಮವನ್ನು ಮುಂದಿನ ತಿಂಗಳು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದೆ ತಿಳಿಸಿದ ಅವರು, ನವಂಬರ್ ೧೪ರಂದು ಮಂಚ್ ವೇದಿಕೆ ವತಿಯಿಂದ ಬೆಂಗಳೂರಿನಲ್ಲಿ ನಡೆಯುವ ಮಕ್ಕಳ ದಿನಾಚರಣೆಯಲ್ಲಿ ಜಿಲ್ಲೆಯಿಂದ ಹೆಚ್ಚಿನ ಮಕ್ಕಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಯಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಎಸ್ಸಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಯದೇವ್, ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮ್ ಪ್ರಸಾದ್, ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತದ ಅಧ್ಯಕ್ಷ ಪಿ.ಬಿ.ಸಿ.ಮುದ್ದು ಗಂಗಾಧರ್, ಜವಾಹರ್ ಬಾಲ್ ಮಂಚ್ ಜಿಲ್ಲಾಧ್ಯಕ್ಷ ನವೀನ ಗೌಡ, ರಾಜ್ಯ ಸಂಚಾಲಕರಾದ ಸೋಮಶೇಖರ್, ನರೇಶ್ ಕುಮಾರ್, ಮಹಿಳಾ ಸಂಚಾಲಕಿ ಚಂದ್ರಕಲಾ, ನಗರಸಭೆ ಸದಸ್ಯ ಮುರುಳಿ ಗೌಡ, ಮುಖಂಡ ಮಾರ್ಜೆನಹಳ್ಳಿ ಬಾಬು, ಜ್ಞಾನಭೋದ ವಿದ್ಯಾ ಸಂಸ್ಥೆಯ ಆಡಳಿತ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಚಿತ್ರ : ಕೋಲಾರ ತಾಲೂಕಿನ ನಡುಪಲ್ಲಿ ಗ್ರಾಮದಲ್ಲಿರುವ ಜ್ಞಾನಭೋದ ವಿದ್ಯಾ ಸಂಸ್ಥೆಯಲ್ಲಿ ಮಂಗಳವಾರ ಜವಾಹರ್ ಬಾಲ್ ಮಂಚ್ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಚಾಚಾಜಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮಕ್ಕೆ ಸಚಿವ ಕೆ.ಎಚ್.ಮುನಿಯಪ್ಪ ಕರೆ ಚಾಲನೆ ನೀಡಿ ಮಾತನಾಡಿದರು,
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್