
ರಾಯಚೂರು, 28 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2025-26ನೇ ಸಾಲಿನ ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಗಳ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ 50 ಸಾವಿರ ರೂ. ಸಹಾಯಧನಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸರ್ಕಾರದ ಆಯವ್ಯಯ ಭಾಷಣದ ಕಂಡಿಕೆ ಸಂಖ್ಯೆ 222 ರಲ್ಲಿ ಘೋಷಿಸಿರುವಂತೆ ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದವದರ ಸರಳ ವಿವಾಹಗಳ ವೆಚ್ಚಗಳಿಗಾಗಿ ನೀಡುವ ಕಾರ್ಯಕ್ರಮವನ್ನು ಷರತ್ತಿಗೊಳಪಟ್ಟು ಅನುಷ್ಠಾನಗೊಳಿಸಲು ಸರ್ಕಾರದ ಮಂಜೂರಾತಿ ನೀಡಿ ಆದೇಶಿಸಲಾದೆ.
ಷರತ್ತುಗಳು: ಅರ್ಜಿ ಸಲ್ಲಿಸುವ ವಧು-ವರರು ಕಾರ್ನಾಟಕ ರಾಜ್ಯಕ್ಕೆ ಸೇರಿದ ಅಲ್ಪಸಂಖ್ಯಾತರ ಸಮುದಾಯಗಳಿಗೆ (ಮುಸ್ಲಿಂ, ಕ್ರಿಶ್ಚಿಯನ್,ಜೈನ್,ಬೌದ್ದ, ಸಿಖ್ ಮತ್ತು ಪಾರ್ಸಿ) ಸೇರಿದವರಾಗಿರಬೇಕು. ಸಾಮೂಹಿಕ ವಿವಾಹಗಳಲ್ಲಿ ಕನಿಷ್ಠ 05 ಜೋಡಿಗಳು ಭಾಗವಹಿಸಿರತಕ್ಕದ್ದು. ಜಿಲ್ಲಾ ನೋಂದಣಿ/ವಕ್ಫ್ ಬೋರ್ಡ್ ಕಚೇರಿಗಳಲ್ಲಿ ಸಾಮೂಹಿಕ ವಿವಾಹಗಳ ಆಯೋಜಕರೆಂದು ನೋಂದಣಿಯಾಗಿರುವ ಖಾಸಗಿ ಟ್ರಸ್ಟ್‍ಗಳು, ದೇವಸ್ಥಾನದ ಟ್ರಸ್ಟ್‍ಗಳು, ಸಂಘಗಳು, ಸೊಸೈಟಿಗಳು ವಕ್ಫ್‍ಸಂಸ್ಥೆಗಳು ಮತ್ತು ಖಾಸಗಿ ವ್ಯಕ್ತಿಗಳು ನಡೆಸುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ಈ ಸೌಲಭ್ಯ ಪಡೆಯುವ ವಧುವಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 42 ವರ್ಷಗಳು, ವರನಿಗೆ ಕನಿಷ್ಠ 21 ವರ್ಷದಿಂದ ಗರಿಷ್ಠ 45ವರ್ಷ ವಯಸ್ಸು ಆಗಿರತಕ್ಕದ್ದು. ಈ ಯೋಜನೆಯಡಿ ಸಹಾಯಧನ ಪಡೆಯಯಲು ವಧು-ವರರ ವಾರ್ಷಿಕ ಆದಾಯವು 2.50 ಲಕ್ಷರೂ.ಗಳು ಮತ್ತು ಒಟ್ಟಾರೆಯಾಗಿ 5.00 ಲಕ್ಷ ರೂ.ಗಳನ್ನು ಮೀರತಕ್ಕದ್ದಲ್ಲ. ಈ ಸೌಲಭ್ಯವನ್ನು ಜೀವನದಲ್ಲಿ ಒಮ್ಮೆ ಮಾತ್ರ ಪಡೆಯಬಹುದಾಗಿದೆ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಯೋಜನೆಯ ಸೌಲಭ್ಯ ನೀಡತಕ್ಕದ್ದು.
ವರನಿಗೆ ಈಗಾಗಲೇ ಜೀವಂತ ಪತ್ನಿಯಿದ್ದಲ್ಲಿ ಅಥವಾ ವಧುವಿಗೆ ಜೀವಂತ ಪತಿ ಇದ್ದಲ್ಲಿ ಈ ಯೋಜನೆಯು ಅನ್ವಯಿಸುವುದಿಲ್ಲ. ಸದರಿ ಸಾಮೂಹಿಕ ವಿವಾಹವು ಇತರೆ ಜಿಲ್ಲೆಗಳಲ್ಲಿ ನಡೆದಿದ್ದಲ್ಲಿ ಸಂಬಂಧಪಟ್ಟ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆರವರು ದೃಡೀಕರಿಸುವುದು. ವಧು-ವರರು ಕನಿಷ್ಠ ಎಳು ದಿನ ಮುಂಚಿತವಾಗಿ ವಾಸ್ತವ್ಯವಿರುವ ಜಿಲ್ಲೆಯಲ್ಲಿಯೇ ಅರ್ಜಿ ಸಲ್ಲಿಸತಕ್ಕದ್ದು.
ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‍ಲೈನ್‍ನಲ್ಲಿ ನಡೆಸಲಾಗುತ್ತಿದ್ದು, ಅದಾಗ್ಯೂ ಕೆಲವು ಸ್ವಯಂ ಸೇವೆ ಸಂಸ್ಥೆಗಳು ಮತ್ತು ಅರ್ಜಿದಾರರು ತಾಂತ್ರಿಕ ಕಾರಣಗಳಿಂದ ಆನ್‍ಲೈನ್ ಅರ್ಜಿಯನ್ನು ಸಲ್ಲಿಸಲು ತೊಂದರೆ ಉಂಟಾದಲ್ಲಿ ಅಂತಹ ಸಂದರ್ಭದಲ್ಲಿ ಮಾತ್ರ ಅನುಮೋದಿತ ಆಫ್‍ಲೈನ್ ಅರ್ಜಿ ನಮೂನೆಗಳನ್ನು ಜಿಲ್ಲಾ ಅಥವಾ ತಾಲ್ಲೂಕು ಕಚೇರಿಯಿಂದ ಪಡೆದು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮಾಹಿತಿ ಕೇಂದ್ರಗಳಾದ ರಾಯಚೂರು: 9731028420, ದೇವದುರ್ಗ: 9148233616, ಲಿಂಗಸುಗೂರು: 9886447863, ಮಾನವಿ: 887334758 ಹಾಗೂ ಸಿಂಧನೂರು: 8217621732ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್