
ನವದೆಹಲಿ, 25 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸುಮಾರು ₹33,000 ಕೋಟಿ ಸಾರ್ವಜನಿಕ ಹಣವನ್ನು ಅದಾನಿ ಗ್ರೂಪ್ ಕಂಪನಿಗಳಲ್ಲಿ ಹೂಡಿಕೆ ಮಾಡಿದೆ ಎಂಬ ಆರೋಪದ ಹಿನ್ನೆಲೆ, ಕಾಂಗ್ರೆಸ್ ಪಕ್ಷ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿ ಕಾರಿದೆ. ಎಲ್‌ಐಸಿ ನಿಧಿಯ ದುರುಪಯೋಗ ನಡೆದಿದೆ ಎಂದು ಆರೋಪಿಸಿದ ಕಾಂಗ್ರೆಸ್, ಈ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸುವಂತೆ ಆಗ್ರಹಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಶನಿವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ಎಲ್‌ಐಸಿ 30 ಕೋಟಿ ಪಾಲಿಸಿದಾರರ ಶ್ರಮದ ಹಣವನ್ನು ಅದಾನಿ ಗ್ರೂಪ್‌ನ ಲಾಭಕ್ಕಾಗಿ ಬಳಸಿಕೊಂಡಿದೆ. ಇದು ನೇರವಾಗಿ ಸಾರ್ವಜನಿಕ ಹಿತಾಸಕ್ತಿಯ ವಿರುದ್ಧದ ಕ್ರಮ,” ಎಂದು ಆರೋಪಿಸಿದ್ದಾರೆ.
ಅವರು ಮಾಧ್ಯಮ ವರದಿಗಳು ಹಾಗೂ ಆಂತರಿಕ ದಾಖಲೆಗಳನ್ನು ಉಲ್ಲೇಖಿಸಿ, ಮೇ 2025 ರ ವೇಳೆಗೆ ಎಲ್‌ಐಸಿ ಅದಾನಿ ಗ್ರೂಪ್‌ನ ವಿವಿಧ ಕಂಪನಿಗಳಲ್ಲಿ ₹33,000 ಕೋಟಿ ಹೂಡಿಕೆ ಮಾಡಿದೆ ಎಂದು ಹೇಳಿದರು. “ಸೆಪ್ಟೆಂಬರ್ 21, 2024 ರಂದು ಅಮೆರಿಕಾದಲ್ಲಿ ಗೌತಮ್ ಅದಾನಿ ಮತ್ತು ಅವರ ಏಳು ಸಹಚರರ ವಿರುದ್ಧ ದೋಷಾರೋಪಣೆ ಮಾಡಿದ ನಂತರ, ಕೇವಲ ನಾಲ್ಕು ಗಂಟೆಗಳಲ್ಲಿ ಎಲ್‌ಐಸಿ ಸುಮಾರು ₹7,850 ಕೋಟಿ ನಷ್ಟ ಅನುಭವಿಸಿತು,” ಎಂದು ರಮೇಶ್ ಹೇಳಿದ್ದಾರೆ.
ಜೈರಾಮ್ ರಮೇಶ್ ಅವರು, “ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮೊದಲು ಈ ಹೂಡಿಕೆ ಹೇಗೆ ಮತ್ತು ಯಾರ ಒತ್ತಡದಲ್ಲಿ ನಡೆದಿದೆ ಎಂಬುದನ್ನು ತನಿಖೆ ಮಾಡಬೇಕು,” ಎಂದು ಹೇಳಿದರು. ಅವರು ಮತ್ತಷ್ಟು ಗಂಭೀರ ಆರೋಪ ಹೊರಿಸಿ, “ಅಮೆರಿಕ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ ಅದಾನಿಗೆ ನೀಡಿದ ಸಮನ್ಸ್ ಅವಧಿಯನ್ನು ವಿಸ್ತರಿಸಲು ಭಾರತ ಸರ್ಕಾರ ನಿರಾಕರಿಸಿದೆ,” ಎಂದು ಹೇಳಿದರು.
ವಿಮಾನ ನಿಲ್ದಾಣಗಳು, ಬಂದರುಗಳು ಮುಂತಾದ ಪ್ರಮುಖ ಸಂಪನ್ಮೂಲಗಳ ಪಕ್ಷಪಾತದ ಖಾಸಗೀಕರಣ, ರಾಜತಾಂತ್ರಿಕ ಮಾರ್ಗಗಳಿಂದ ಒಪ್ಪಂದಗಳ ವಹಿವಾಟು ಮತ್ತು ಶೆಲ್ ಕಂಪನಿಗಳ ಮೂಲಕ ಹಣ ವರ್ಗಾವಣೆ ಹಗರಣದ ಪ್ರಮುಖ ಅಂಶಗಳಾಗಿವೆ.
“ಸರ್ಕಾರ ಎಲ್‌ಐಸಿ ಪಾಲಿಸಿದಾರರ ಹಣವನ್ನು ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಬಳಕೆ ಮಾಡಿದೆ. ಈ ಹಗರಣದ ಹಿಂದೆ ಯಾರು ಎಂಬುದನ್ನು ಬಹಿರಂಗಪಡಿಸಲು ಜೆಪಿಸಿ ತನಿಖೆ ಮಾತ್ರ ಸೂಕ್ತ ಮಾರ್ಗ,” ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa