ಭಾರತ–ಅಫ್ಘಾನಿಸ್ತಾನ ವಿದೇಶಾಂಗ ಸಚಿವರ ಮಾತುಕತೆ
ನವದೆಹಲಿ, 10 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಭಾರತ–ಅಫ್ಘಾನಿಸ್ತಾನ ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ. ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಹಾಗೂ ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ನಡುವೆ ಇಂದು ನವದೆಹಲಿಯಲ್ಲಿ ನಡೆದ ಮಾತುಕತೆಯಲ್ಲಿ ಭಾರತವು ಕಾಬೂಲ್‌ನಲ್ಲಿ
Meeting


ನವದೆಹಲಿ, 10 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಭಾರತ–ಅಫ್ಘಾನಿಸ್ತಾನ ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ. ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಹಾಗೂ ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ನಡುವೆ ಇಂದು ನವದೆಹಲಿಯಲ್ಲಿ ನಡೆದ ಮಾತುಕತೆಯಲ್ಲಿ ಭಾರತವು ಕಾಬೂಲ್‌ನಲ್ಲಿರುವ ತನ್ನ ಕಾರ್ಯಾಚರಣೆಯನ್ನು ರಾಯಭಾರ ಕಚೇರಿಯ ಸ್ಥಾನಮಾನಕ್ಕೆ ಮೇಲ್ದರ್ಜೆಗೇರಿಸುವುದಾಗಿ ಹೇಳಿದರು.

ಅಫ್ಘಾನಿಸ್ತಾನದಲ್ಲಿನ ಭಾರತದ ಹೂಡಿಕೆ, ಸಹಕಾರ ಹಾಗೂ ಮಾನವೀಯ ಕಾರ್ಯಚಟುವಟಿಕೆಗಳ ಪುನರುಜ್ಜೀವನಕ್ಕೆ ಇದು ಪ್ರಮುಖ ಹಂತವೆಂದು ಡಾ. ಜೈಶಂಕರ್ ಹೇಳಿದರು.

“ಭಾರತವು ಅಫ್ಘಾನಿಸ್ತಾನದ ಆಪ್ತ ನೆರೆಯ ಮತ್ತು ಜನರ ಹಿತೈಷಿಯಾಗಿದೆ. ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ನಮ್ಮ ಪಾಲುದಾರಿಕೆ ಮುಂದುವರಿಯಲಿದೆ,” ಎಂದು ಅವರು ಪುನರುಚ್ಚರಿಸಿದರು.

ಜೈಶಂಕರ್ ಅವರು ಅಫ್ಘಾನ್ ನಿರಾಶ್ರಿತರ ಪುನರ್ವಸತಿಗೆ ಸಹಾಯ ನೀಡುವ ಭಾರತದ ಬದ್ಧತೆಯನ್ನು ವ್ಯಕ್ತಪಡಿಸಿದರು. “ಅವರ ಘನತೆಯ ಜೀವನಕ್ಕಾಗಿ ಭಾರತವು ವಸತಿ ನಿರ್ಮಿಸಲಿದೆ ಮತ್ತು ಅಗತ್ಯ ವಸ್ತುಗಳನ್ನು ಒದಗಿಸಲಿದೆ,” ಎಂದು ಹೇಳಿದರು.

ಭಯೋತ್ಪಾದನೆ ಮತ್ತು ಅಸ್ಥಿರತೆ ಎರಡೂ ದೇಶಗಳ ಸಾಮಾನ್ಯ ಸವಾಲುಗಳಾಗಿದ್ದು, ಅದನ್ನು ಎದುರಿಸಲು ಸಂಯೋಜಿತ ಪ್ರಯತ್ನ ಅಗತ್ಯವಿದೆ ಎಂದು ಸಚಿವರು ಹೇಳಿದರು.

ಆರೋಗ್ಯ ಕ್ಷೇತ್ರದಲ್ಲಿ ಸಹಕಾರ ವಿಸ್ತರಣೆಗಾಗಿ ಭಾರತವು ಆರು ಹೊಸ ಯೋಜನೆಗಳನ್ನು ಘೋಷಿಸಿದೆ. ಇದರಲ್ಲಿ 20 ಆಂಬ್ಯುಲೆನ್ಸ್‌ಗಳು, MRI ಮತ್ತು CT ಸ್ಕ್ಯಾನ್ ಯಂತ್ರಗಳು, ಲಸಿಕೆಗಳು ಹಾಗೂ ಕ್ಯಾನ್ಸರ್ ಔಷಧಿಗಳ ವಿತರಣೆಯು ಸೇರಿದೆ. ಅಲ್ಲದೆ ವ್ಯಸನಮುಕ್ತಿ ಸಾಮಗ್ರಿಗಳನ್ನು UNODC ಮೂಲಕ ಒದಗಿಸಲು ಭಾರತ ಸಿದ್ಧವಾಗಿದೆ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಸಹಕಾರ ವಿಸ್ತರಿಸಲು ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಅಫ್ಘಾನ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಹಾಗೂ ವೈದ್ಯಕೀಯ, ವ್ಯವಹಾರ ಮತ್ತು ವಿದ್ಯಾರ್ಥಿ ವಿಭಾಗಗಳಲ್ಲಿ ಹೆಚ್ಚು ವೀಸಾಗಳನ್ನು ನೀಡುವ ಕುರಿತು ಜೈಶಂಕರ್ ಪ್ರಸ್ತಾಪಿಸಿದರು.

ಭಾರತದ ಆಹಾರ ಸಹಾಯ ಮತ್ತು ಭೂಕಂಪ ದುರಂತದ ಸಮಯದಲ್ಲಿ ನೀಡಿದ ತುರ್ತು ನೆರವು ಕುರಿತಾಗಿ ಅವರು ನೆನಪಿಸಿದರು. ಕ್ರೀಡೆಗಳ ಮೂಲಕ ಜನರ ನಡುವಿನ ಸ್ನೇಹವನ್ನು ವೃದ್ಧಿಸಲು ಕ್ರಿಕೆಟ್ ಸಹಕಾರವನ್ನು ಉಲ್ಲೇಖಿಸಿ, ಅಫ್ಘಾನ್ ತಂಡದ ಪ್ರಗತಿಯನ್ನು ಶ್ಲಾಘಿಸಿದರು.

ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಮಾತನಾಡಿ “ಭಾರತ ನಮ್ಮ ಆಪ್ತ ಸ್ನೇಹಿತ. ನಾವು ಪರಸ್ಪರ ಗೌರವ ಮತ್ತು ವ್ಯಾಪಾರದ ಆಧಾರದ ಮೇಲೆ ಸಂಪರ್ಕ ವಿಸ್ತರಿಸಲು ಬಯಸುತ್ತೇವೆ,” ಎಂದು ಹೇಳಿದರು. “ತಾಲಿಬಾನ್ ಭಾರತ ವಿರೋಧಿ ನಿಲುವು ಎಂದಿಗೂ ತೆಗೆದುಕೊಂಡಿಲ್ಲ. ನಮ್ಮ ಭೂಮಿಯನ್ನು ಇತರರ ವಿರುದ್ಧ ಬಳಸಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ,” ಎಂದು ಅವರು ಭರವಸೆ ನೀಡಿದರು.

ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಾರತ–ಅಫ್ಘಾನಿಸ್ತಾನ ನಡುವಿನ ಇದು ಮೊದಲ ಉನ್ನತ ಮಟ್ಟದ ವಿದೇಶಾಂಗ ಮಾತುಕತೆಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande