ಕೋಲಾರ, ಜನವರಿ ೨೨ (ಹಿ.ಸ.) :
ಆ್ಯಂಕರ್ : ನೆಲ ಸಂಸ್ಕೃತಿಯ ಜೀವ ತಾಣ ಆದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ಹಾಗೂ ಜೀವಪರ ಕಾಳಜಿಯ ಹಿರಿಯ ಹೋರಾಟಗಾರ ಕೆ.ಎಂ.ಕೊಮ್ಮಣ್ಣ (೬೫) ಇಂದು ಮದ್ಯಾಹ್ನ ನಿಧನರಾಗಿದ್ದಾರೆ.
ದಿ.ರಾಮಕೃಷ್ಣ ಹೆಗಡೆ ನೇತೃತ್ವದ ಕರ್ನಾಟಕ ಸರ್ಕಾರವನ್ನು ನಡುಗಿಸಿದ ಗೌರಿಬಿದನೂರಿನ ನಾಗಸಂದ್ರ ಭೂ ಹೋರಾಟದ ರುವಾರಿ ಕೆ.ಎಂ.ಕೊಮ್ಮಣ್ಣ ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಅಪ್ಪಟ ಹೋರಾಟಗಾರ. ನಾಲ್ಕು ದಶಕಗಳ ತಮ್ಮ ಸುದೀರ್ಘ ಹೋರಾಟದ ಬದುಕಿನ ಭಾಗವಾಗಿ ಆದಿಮ ಸಾಂಸ್ಕೃತಿಕ ಕೇಂದ್ರದ ಸದಸ್ಯರಾಗಿ ಕಳೆದ ೧೯ ವರ್ಷಗಳಿಂದ ಆದಿಮದ ಹುಟ್ಟು ಬೆಳವಣಿಗೆಯಲ್ಲಿ ತಮ್ಮದೇ ವಿಶಿಷ್ಟ ರೀತಿಯಲ್ಲಿ ಸ್ಪಟಿಕದಂತೆ ಕಾರ್ಯನಿರ್ವಹಿಸಿದ ಅವರು ಇಂದು ಅನಾರೋಗ್ಯ ನಿಮಿತ್ತ ಕೊನೆಯ ಉಸಿರೆಳೆದಿದ್ದಾರೆ.
ತಾಯಿ ಮನಸ್ಸಿನ ಸಹೃದಯಿ ಕೊಮ್ಮಣ್ಣನವರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಸಂಖ್ಯೆಯ ಬಂಧು ಬಳಗ ಮತ್ತು ಅಭಿಮಾನಿಗಳನ್ನು ಹೊಂದಿದ್ದಾರೆ.
ಇವರ ಪ್ರಾರ್ಥಿವ ಶರೀರವನ್ನು ಕೋಲಾರದ ಗೋಕುಲ ಕಾಲೇಜು ಹತ್ತಿರದ ಹೌಸಿಂಗ ಬೋರ್ಡ್ನ ಮನೆಯ ಹತ್ತಿರ ನಾಳೆ ದಿನಾಂಕ : ೨೩/೦೧/೨೦೨೫ ಬೆಳಿಗ್ಗೆ ೭ರಿಂದ ಮದ್ಯಾಹ್ನ ೧ ಗಂಟೆವರಿಗೆ ಅಂತಿಮ ದರ್ಶನಕ್ಕಾಗಿ ಇಡಲಾಗುತ್ತದೆ. ನಂತರ ಅವರು ತಮ್ಮ ದೇಹವನ್ನ ಬೆಂಗಳೂರು ಮೆಡಿಕಲ್ ಕಾಲೇಜಿಗೆ ದಾನ ಮಾಡಿದ್ದು, ಅಲ್ಲಿಗೆ ಕಳುಹಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಚಿತ್ರ: ಹಿರಿಯ ಹೋರಾಟಗಾರ ಕೆ.ಎಂ.ಕೊಮ್ಮಣ್ಣ
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್