ಎಲೆಕ್ಟ್ರಿಕ್ ಕಾರುಗಳ ಮೇಲೆ ದಾಖಲೆಯ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್
ಎಲೆಕ್ಟ್ರಿಕ್ ಕಾರು ಮಾದರಿಗಳ ಮೇಲೆ ಸೆಪ್ಟೆಂಬರ್ ಅವಧಿಯ ರಿಯಾಯಿತಿಗಳ ಘೋಷಣೆ
Tata Motors announced discount on Nexon EV,


ಬೆಂಗಳೂರು, 06 ಸೆಪ್ಟೆಂಬರ್(ಹಿ.ಸ.) :

ಆ್ಯಂಕರ್ : ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪ್ರಮುಖ ಇವಿ ಕಾರುಗಳ ಖರೀದಿ ಮೇಲೆ ಸೆಪ್ಟೆಂಬರ್ ಅವಧಿಯ ಕೊಡುಗೆಗಳನ್ನು ಘೋಷಣೆ ಮಾಡಲಾಗಿದೆ. ಹೊಸ ಕೊಡುಗೆಗಳು ನೆಕ್ಸಾನ್ ಇವಿ, ಟಿಯಾಗೋ ಇವಿ ಮತ್ತು ಪಂಚ್ ಇವಿ ಕಾರುಗಳ ಮೇಲೆ ಲಭ್ಯವಿದ್ದು, ಹೊಸ ಕೊಡುಗೆಗಳಲ್ಲಿ ಗ್ರಾಹಕರು ನಗದು ರಿಯಾಯಿತಿ, ವಿನಿಮಯ ಕೊಡುಗೆ, ಕಾರ್ಪೊರೇಟ್ ಕೊಡುಗೆ ಗಳ ಜೊತೆ ಗ್ರೀನ್ ಬೋನಸ್ ಸಹ ಪಡೆಯಬಹುದಾಗಿದೆ.

ಭಾರತದಲ್ಲಿ ಸದ್ಯ ಎಲೆಕ್ಟ್ರಿಕ್ ಕಾರುಗಳೊಂದಿಗೆ ಹೊಸ ಸಂಚಲನಕ್ಕೆ ಕಾರಣವಾಗಿರುವ ಟಾಟಾ ಮೋಟಾರ್ಸ್ ಕಂಪನಿಯು ಭಾರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದೀಗ ಹೊಸ ಕೊಡುಗೆಗಳೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಹಾಗಾದರೆ ಟಾಟಾ ಮೋಟಾರ್ಸ್ ಕಂಪನಿಯು ಯಾವೆಲ್ಲಾ ಕಾರುಗಳ ಮೇಲೆ ಏನೆಲ್ಲಾ ಕೊಡುಗೆ ನೀಡುತ್ತಿದೆ ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ.

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ ಖರೀದಿ ಮೇಲೆ ಒಟ್ಟು ರೂ. 2.05 ಲಕ್ಷ ಮೌಲ್ಯದ ರಿಯಾಯಿತಿ ನೀಡುತ್ತಿದ್ದು, ಇದರಲ್ಲಿ ಗ್ರಾಹಕರು ರೂ. 25 ಸಾವಿರ ತನಕ ನಗದು ರಿಯಾಯಿತಿ ಪಡೆಯಬಹುದಾಗಿದೆ. ನೆಕ್ಸಾನ್ ಕಾರಿನ ಎಂಪವರ್ಡ್ ಪ್ಲಸ್ ಎಲ್ಆರ್ ಮತ್ತು ಕ್ರಿಯೆಟಿವ್ ಪ್ಲಸ್ ಎಂಆರ್ ಆವೃತ್ತಿಗಳ ಮೇಲೆ ಸೀಮಿತ ರಿಯಾಯಿತಿ ಗಳು ಲಭ್ಯವಿದ್ದು, ಇನ್ನುಳಿದ ಎಲ್ಲಾ ವೆರಿಯೆಂಟ್ ಗಳಿಗೂ ಗರಿಷ್ಠ ಪ್ರಮಾಣದ ರಿಯಾಯಿತಿ ಅನ್ವಯಿಸಲಿದೆ. ನೆಕ್ಸಾನ್ ಕಾರು ಸದ್ಯ ಎಕ್ಸ್ ಶೋರೂಂ ಪ್ರಕಾರ ರೂ. 14.49 ಲಕ್ಷದಿಂದ ರೂ. 19.49 ಲಕ್ಷ ಬೆಲೆ ಹೊಂದಿದೆ. ಹೊಸ ಇವಿ ಕಾರಿನಲ್ಲಿ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 30kWh ಮತ್ತು 40.5kWh ಬ್ಯಾಟರಿ ಆಯ್ಕೆಗಳನ್ನು ನೀಡಿದ್ದು, ಇವು ಪ್ರತಿ ಚಾರ್ಜ್ ಗೆ 325 ರಿಂದ 456 ಕಿ.ಮೀ ಮೈಲೇಜ್ ನೀಡುತ್ತವೆ.

ಟಿಯಾಗೋ ಎಲೆಕ್ಟ್ರಿಕ್

ಟಾಟಾ ಕಂಪನಿಯು ನೆಕ್ಸಾನ್ ಇವಿ ನಂತರ ಟಿಯಾಗೋ ಇವಿ ಹ್ಯಾಚ್ ಬ್ಯಾಕ್ ಕಾರಿನ ಮೇಲೂ ಅತ್ಯುತ್ತಮ ರಿಯಾಯಿತಿ ನೀಡುತ್ತಿದೆ. ಟಿಯಾಗೋ ಇವಿ ಖರೀದಿಯ ಒಟ್ಟು ರೂ. 65 ಸಾವಿರ ತನಕ ರಿಯಾಯಿತಿ ನೀಡಲಾಗುತ್ತಿದ್ದು, ಇದರಲ್ಲಿ ಗ್ರಾಹಕರು ಗ್ರೀನ್ ಬೋನಸ್ ಸಹ ಪಡೆಯಬಹುದಾಗಿದೆ. ಹಾಗೆಯೇ ಟಾಪ್ ಎಂಡ್ ಮಾದರಿಗಳ ಮೇಲೆ ಹೆಚ್ಚಿನ ರಿಯಾಯಿತಿ ನೀಡಲಾಗುತ್ತಿದ್ದು, ಇದು ಆಕರ್ಷಕ ಫೀಚರ್ಸ್ ಗಳೊಂದಿಗೆ ಉತ್ತಮ ಬೇಡಿಕೆ ಹೊಂದಿದೆ.

ಟಿಯಾಗೋ ಇವಿ ಕಾರು ಸದ್ಯ ಎಕ್ಸ್ ಶೋರೂಂ ಪ್ರಕಾರ ಸದ್ಯ ರೂ. 7.99 ಲಕ್ಷದಿಂದ ರೂ. 11.89 ಲಕ್ಷ ಬೆಲೆಯೊಂದಿಗೆ ಮಾರಾಟವಾಗುತ್ತಿದ್ದು, 19.2 kWh ಮತ್ತು 24kWh ಬ್ಯಾಟರಿ ಪ್ಯಾಕ್ ನೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 315 ಕಿ.ಮೀ ಮೈಲೇಜ್ ನೀಡುತ್ತದೆ.

ಪಂಚ್ ಎಲೆಕ್ಟ್ರಿಕ್

ಬಹುಬೇಡಿಕೆಯ ಪಂಚ್ ಎಲೆಕ್ಟ್ರಿಕ್ ಕಾರು ಖರೀದಿ ಮೇಲೆ ಟಾಟಾ ಕಂಪನಿ ರೂ. 10 ಸಾವಿರದಿಂದ ರೂ. 30 ಸಾವಿರದಷ್ಟು ಆಫರ್ ನೀಡುತ್ತಿದೆ. ಪಂಚ್ ಇವಿ ಕಾರು ವೆರಿಯೆಂಟ್ ಗಳೊಂದಿಗೆ ಲಭ್ಯವಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 10.99 ಲಕ್ಷದಿಂದ ರೂ. 15.49 ಲಕ್ಷ ಬೆಲೆ ಹೊಂದಿದೆ. ಇದರಲ್ಲಿ 35kWh ಮತ್ತು 25kWh ಬ್ಯಾಟರಿ ಆಯ್ಕೆಗಳಿದ್ದು, ಇವು ಪ್ರತಿ ಚಾರ್ಜ್ ಗೆ ಗರಿಷ್ಠ 421 ಕಿ.ಮೀ ಮೈಲೇಜ್ ನೀಡುತ್ತದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande