ಅಕ್ಟೋಬರ್ 1ರಿಂದ ಮೂರು ಪಿಪಿಎಫ್ ನಿಯಮ ಬದಲಾವಣೆ
ನವದೆಹಲಿ, 05 ಸೆಪ್ಟೆಂಬರ್(ಹಿ.ಸ.) : ಆ್ಯಂಕರ್ : ಸಣ್ಣ ಉಳಿತಾಯ ಯೋಜನೆಗಳ ನಿಯಮಗಳನ್ನು ಇನ್ನಷ್ಟು ಸರಿಪಡಿಸುವ ನಿಟ್ಟಿನಲ್ಲಿ ಹಣಕಾಸು ಸಚಿವಾಲಯವು ಕೆಲ ಯೋಜನೆಗಳ ನಿಯಮಗಳಲ್ಲಿ ಬದಲಾವಣೆ ತರಲು ಹೊರಟಿದೆ. ಎನ್​ಎಸ್​ಎಸ್, ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿನ ಕೆಲ ನಿಯಮಗಳನ್ನು ಬದಲಾಯಿಸಲಾಗ
PPF 3 rules change, from minor account to multiple a


ನವದೆಹಲಿ, 05 ಸೆಪ್ಟೆಂಬರ್(ಹಿ.ಸ.) :

ಆ್ಯಂಕರ್ : ಸಣ್ಣ ಉಳಿತಾಯ ಯೋಜನೆಗಳ ನಿಯಮಗಳನ್ನು ಇನ್ನಷ್ಟು ಸರಿಪಡಿಸುವ ನಿಟ್ಟಿನಲ್ಲಿ ಹಣಕಾಸು ಸಚಿವಾಲಯವು ಕೆಲ ಯೋಜನೆಗಳ ನಿಯಮಗಳಲ್ಲಿ ಬದಲಾವಣೆ ತರಲು ಹೊರಟಿದೆ. ಎನ್​ಎಸ್​ಎಸ್, ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿನ ಕೆಲ ನಿಯಮಗಳನ್ನು ಬದಲಾಯಿಸಲಾಗುತ್ತಿದೆ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್​ನಲ್ಲಿ ಮೂರು ಪ್ರಮುಖ ನಿಯಮಗಳನ್ನು ಬದಲಿಸಲಾಗಿದೆ. ಇತ್ತೀಚಿಗೆ ಹಣಕಾಸು ಸಚಿವಾಲಯ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಅಕ್ಟೋಬರ್ 1ರಿಂದ ಈ ಹೊಸ ನಿಯಮಗಳು ಚಾಲನೆಗೆ ಬರಲಿವೆ. ಪಿಪಿಎಫ್​ನಲ್ಲಿ ಆಗಲಿರುವ ಮೂರು ನಿಯಮಗಳ ಬದಲಾವಣೆ ಏನು ಎನ್ನುವ ವಿವರ ಮುಂದಿದೆ.

ಯಾವುದೇ ವಯಸ್ಸಿನವರು ಪಿಪಿಎಫ್ ಖಾತೆ ತೆರೆಯಬಹುದು. ಅಪ್ರಾಪ್ತರಾದರೆ ಅವರ ಹೆಸರಿನಲ್ಲಿ ಪಾಲಕರು ಖಾತೆ ತೆರೆಯಬಹುದು. ಈಗ ಒಂದು ಬದಲಾವಣೆ ಮಾಡಲಾಗಿದೆ. ಅಪ್ರಾಪ್ತರ ಹೆಸರಿನಲ್ಲಿ ಪಿಪಿಎಫ್ ಖಾತೆ ತೆರೆಯಬಹುದಾದರೂ ಅವರು ಪ್ರಾಪ್ತ ವಯಸ್ಸಿಗೆ ಬರುವವರೆಗೂ ಹೂಡಿಕೆ ಹಣಕ್ಕೆ ಶೇ. 7.1ರಷ್ಟು ಬಡ್ಡಿ ದಕ್ಕುವುದಿಲ್ಲ. ಉಳಿತಾಯ ಖಾತೆಗೆ ಸಿಗುವಷ್ಟೇ ಬಡ್ಡಿ ಮಾತ್ರ ಅದಕ್ಕೆ ಸಿಗುತ್ತದೆ.ಹಾಗೆಯೇ, ಪ್ರಾಪ್ತ ವಯಸ್ಸಿಗೆ ಬಂದ ನಂತರದಿಂದ ಪಿಪಿಎಫ್​ನ ಮೆಚ್ಯೂರಿಟಿ ಅವಧಿಯನ್ನು ಲೆಕ್ಕ ಹಾಕಲಾಗುತ್ತದೆ. ಅಂದರೆ 18 ವರ್ಷ ವಯಸ್ಸಾದ ನಂತರ 15 ವರ್ಷಕ್ಕೆ ಪಿಪಿಎಫ್ ಮೆಚ್ಯೂರ್ ಆಗುತ್ತದೆ. ಈ ಅವಧಿಯಲ್ಲಿ ಘೋಷಿತ ಬಡ್ಡಿದರ ನೀಡಲಾಗುತ್ತದೆ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸ್ಕೀಮ್​ನಲ್ಲಿ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದೇ ಖಾತೆ ಮಾತ್ರವೇ ರಚಿಸಬಹುದು. ಎರಡು ಖಾತೆ ತೆರೆದಿದ್ದರೆ, ಮೊದಲ ಖಾತೆಯನ್ನು ಪ್ರೈಮರಿ ಅಕೌಂಟ್ ಎಂದು ಪರಿಗಣಿಸಲಾಗುತ್ತದೆ. ಈ ಪ್ರಾಥಮಿಕ ಖಾತೆಗೆ ಮಾತ್ರವೇ ನಿಗದಿತ ಬಡ್ಡಿದರ ಸಿಗುತ್ತದೆ. ಎರಡನೇ ಖಾತೆಗೆ ಏನೂ ಸಿಗುವುದಿಲ್ಲ. ಎರಡನೇ ಖಾತೆಯಲ್ಲಿನ ಹಣವನ್ನು ಪ್ರೈಮರಿ ಖಾತೆಗೆ ವಿಲೀನ ಮಾಡಲಾಗುತ್ತದೆ. ಇದರಲ್ಲಿ ಒಂದೂವರೆ ಲಕ್ಷ ರೂಗಿಂತ ಹೆಚ್ಚು ಹಣ ಇದ್ದಲ್ಲಿ ಆ ಹೆಚ್ಚುವರಿ ಹಣವನ್ನು ಯಾವುದೇ ಬಡ್ಡಿ ಇಲ್ಲದೇ ಮರಳಿಸಲಾಗುತ್ತದೆ.

1968ರ ಪಿಪಿಎಫ್ ಸ್ಕೀಮ್ ಅಡಿಯಲ್ಲಿ ಫಾರ್ಮ್ ಎಚ್​ನಲ್ಲಿ ಖಾತೆದಾರರ ನಿವಾಸ ಸ್ಥಿತಿಯನ್ನು ಕೇಳಿರುವುದಿಲ್ಲ. ಎನ್​ಆರ್​ಐಗಳೂ ಖಾತೆ ತೆರೆಯಬಹುದಿತ್ತು. ಈಗ ಎನ್​ಆರ್​ಐಗಳು ಪಿಪಿಎಫ್ ಖಾತೆ ತೆರೆಯಲು ಅವಕಾಶ ಹೊಂದಿರುವುದಿಲ್ಲ. ಹಿಂದಿನ ಸ್ಕೀಮ್​ನಲ್ಲಿ ಖಾತೆ ಹೊಂದಿದವರಿಗೆ ಅದನ್ನು ಮುಂದುವರಿಸಲು ಈಗ ಅವಕಾಶ ಇರುವುದಿಲ್ಲ. ಹಾಗೂ ಅನಿವಾಸಿ ಭಾರತೀಯರು ಪಿಪಿಎಫ್ ಖಾತೆ ಹಿಂಪಡೆಯದೇ ಮುಂದುವರಿಸಬಹುದಾದರೂ ಬಡ್ಡಿದರ ಸಿಗುವುದಿಲ್ಲ. ಸೆಪ್ಟೆಂಬರ್ 30ರವರೆಗೂ ಸೇವಿಂಗ್ಸ್ ಅಕೌಂಟ್​ಗೆ ಸಿಗುವಷ್ಟೇ ಬಡ್ಡಿ ಮಾತ್ರ ಇದಕ್ಕೆ ಬರುತ್ತದೆ. ಅದಾದ ಮೇಲೆ ಶೂನ್ಯ ಬಡ್ಡಿ ಸಿಗುತ್ತದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande