ಬಳ್ಳಾರಿ, 21 ಜುಲೈ (ಹಿ.ಸ.) :
ಆ್ಯಂಕರ್ : ಹನ್ನೆರಡನೆ ಶತಮಾನದ ವಚನ ಯುಗದ ಜನಸಾಮಾನ್ಯರಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತಿದವರು ಶಿವಶರಣ ಹಡಪದ ಅಪ್ಪಣ್ಣ ಎಂದು ಕಿಷ್ಕಿಂದ ವಿಶ್ವ ವಿದ್ಯಾಲಯದ ಭೌತವಿಜ್ಞಾನ ವಿಭಾಗದ ಪ್ರಾಧ್ಯಾಪಕ, ಡೀನ್ ಪ್ರೊ.ಎಸ್.ಮಂಜುನಾಥ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಏರ್ಪಡಿಸಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಹಡಪದ ಅಪ್ಪಣ್ಣನವರು ಪ್ರಸ್ತುತ ದಿನಮಾನಗಳ ಮನುಷ್ಯರ ಮನೋಭಾವನೆಯನ್ನು ಅಂದೇ ತಮ್ಮ ವಚನಗಳ ಮೂಲಕ ಸಾಬೀತು ಪಡಿಸಿದ್ದಾರೆ.
ಹಡಪದ ಅಪ್ಪಣ್ಣ ಅವರು ಯುವ ಕವಿಗಳ ಸ್ಪೂರ್ತಿ ಆಗಿದ್ದು, ಜೀವನದ ಬಗ್ಗೆ ಅರಿವು ಮೂಡಿಸುವ ಅವರ ವಚನಗಳೆ ನಿದರ್ಶನವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಜಂಗಮರ ಹೊಸಳ್ಳಿಯ ಪುರವರ್ಗ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮಿಜಿ ಅವರು, ಶಿವಶರಣ ಅಪ್ಪಣ್ಣ ಅವರು ಕಾಯ, ವಾಚ, ಮನಸ್ಸಿನಿಂದ ಭಕ್ತಿಪೂರ್ವಕವಾಗಿ ನ್ಯಾಯ ಹಾಗೂ ಧರ್ಮದ ಗೌರವ ಸಂಪಾದನೆ ಮಾಡಿದರು ಎಂದು ಹೇಳಿದರು.
ಶಿವಶರಣ ಹಡಪದ ಅಪ್ಪಣ್ಣನವರಂತೆ ಮನುಷ್ಯರು ಮಾನವೀಯ ಗುಣ, ನೀತಿ ಮೌಲ್ಯಗಳನ್ನು ಅಳವಡಿಸಿಕೊಂಡು ಮಾದರಿ ಜೀವನ ನಡೆಸಬೇಕು ಎಂದು ಹೇಳಿದರು.
ಈ ವೇಳೆ ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಕೆ.ವಸಂತ್‍ಕುಮಾರ್ ಅವರ ತಂಡದಿಂದ ವಚನ ಸಂಗೀತ ಆಯೋಜಿಸಲಾಗಿತ್ತು.
ಮೆರವಣಿಗೆ : ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರದೊಂದಿಗೆ ನಗರದ ಹೆಚ್.ಆರ್.ಗವಿಯಪ್ಪ ವೃತ್ತದಿಂದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ಭವ್ಯ ಮೆರವಣಿಗೆ ಜರುಗಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜಿಲ್ಲಾ ಹಡಪದ ಅಪ್ಪಣ್ಣ ಸೇವಾ ಸಂಘದ ಜಿಲ್ಲಾಧ್ಯಕ್ಷ ಹೆಚ್.ರುದ್ರಪ್ಪ, ಸಮಾಜದ ಮುಖಂಡರಾದ ಸಿ.ಕೊಟ್ರೇಶ, ಹೆಚ್.ತಿಪ್ಪೇಸ್ವಾಮಿ ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ, ಸವಿತಾ ಸಮಾಜದ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್ / ಮನೋಹರ ಯಡವಟ್ಟಿ