ಹುಬ್ಬಳ್ಳಿ, 31 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಹಳೇ ಹುಬ್ಬಳ್ಳಿ ಘೋಡಕೆ ಪ್ಲಾಟ್ನಲ್ಲಿ ಇಬ್ಬರಿಗೆ ಮಾರಕಾಸ್ತ್ರದಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪಾದಿತನನ್ನು ಬಂಧಿಸಲು ತೆರಳಿದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಓರ್ವನ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆಯಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಅವಳಿ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಹುಬ್ಬಳ್ಳಿ ಘೋಡಕೆ ಪ್ಲಾಟ್ ನ ಮಜಬುಲ್ ಎಂಬಾತನೇ ಪೊಲೀಸರಿಂದ ಗುಂಡು ಹೊಡೆಸಿಕೊಂಡಾತ. ಕ್ಷುಲ್ಲಕ ಕಾರಣಕ್ಕಾಗಿ ಸೋಮವಾರ ರಾತ್ರಿ ಹಳೇ ಹುಬ್ಬಳ್ಳಿ ಆನಂದನಗರ ರಸ್ತೆ ಘೋಡಕೆ ಪ್ಲಾಟ್ ನ ತಬ್ಲಿಕ್ ಮಸೀದಿ ಬಳಿ ಅದೇ ಪ್ರದೇಶದ ಸಮೀರ ಶೇಖ್ (18) ಹಾಗೂ ಸಮೀರ್ ಚಿಕ್ಕಪ್ಪ ಜಾವೀದ್ ಶೇಖ್ (32) ಎಂಬುವರಿಗೆ ಮಾರಕಾಸ್ತ್ರದಿಂದ ಇರಿದು ಸಹಚರರೊಂದಿಗೆ ಮುಜಾಮಿತ್ ಆರೋಪಿ ಪರಾರಿಯಾಗಿದ್ದ, ಗಾಯಾಳುಗಳು ಕೆಎಂಸಿಆರ್ ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೆ ಒಳಗಾದ ಕುಟುಂಬಸ್ಥರಿಗೆ ತನ್ನ ಮೇಲೆ ದೂರು ನೀಡುತ್ತೀರಾ ಎಂದು ಆರೋಪಿ ಬೆದರಿಕೆ ಹಾಕಿದ್ದಾನೆ. ಹೆಣ್ಣು ಮಕ್ಕಳಿಗೂ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಗಾಯಗೊಂಡ ಕುಟುಂಬದವರಿಗೆ ಕರೆ ಮಾಡಿ ಪ್ರಾಣ ಬೆದರಿಕೆ ಹಾಕಿ ಆರೋಪಿ ಪರಾರಿಯಾಗಿದ್ದ. ಇಂದು ಬೆಳಿಗ್ಗೆ ಆರೋಪಿಯನ್ನು ಬಂಧನ ಮಾಡಲಾಗಿತ್ತು. ಇತರೆ ಆರೋಪಿಗಳನ್ನು ತೋರಿಸುತ್ತೇನೆಂದು ಹೋದ ಸಂದರ್ಭದಲ್ಲಿ ಇನ್ಸೆಕ್ಟರ್ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ. ಪೊಲೀಸ್ ಸಿಬ್ಬಂದಿ ಮೇಲೆ ಏಕಾಏಕಿ ಹಲ್ಲೆ ಮಾಡಿ ಓಡಿ ಹೋಗುವ ಸಂದರ್ಭದಲ್ಲಿ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ತಪ್ಪಿಸಿಕೊಂಡು ಓಡುವ ಸಂದರ್ಭದಲ್ಲಿ ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆಂದರು. ಆರೋಪಿ ಕಾಲಿಗೆ ಗುಂಡು ತಗುಲಿದ್ದು, ಗಾಯಗೊಂಡ ಆರೋಪಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa