ಕೋಲಾರ, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವತಿಯಿಂದ ಕೊಡಮಾಡುವ ಡಾ.ಹೆಚ್. ನರಸಿಂಹಯ್ಯ ಪ್ರಶಸ್ತಿಗೆ ಮನ್ವಂತರ ಪತ್ರಿಕೆಯ ಸಂಪಾದಕ ಪಾ.ಶ್ರೀ ಅನಂತರಾಮ್ ಭಾಜನರಾಗಿದ್ದಾರೆ.
ವಿವಿಧ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ, ಹಲವು ಸಮಾಜ ಸೇವೆ ಕಾರ್ಯಗಳಲ್ಲಿ ಮಾಡುತ್ತಾ ಪ್ರಸ್ತುತ ಮನ್ವಂತರ ಪತ್ರಿಕೆ ಸಂಪಾದಕರೂ ಆಗಿರುವ ಪಾ.ಶ್ರೀ.ಅನಂತರಾಮ್ ಆಯ್ಕೆ ಆಗಿದ್ದಾರೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಕೋಲಾರ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಉತ್ತರ ಜಿಲ್ಲೆಯ ಬಾಗಲೂರು ವಿಜೆ ಇಂಟರ್ನ್ಯಾಷನಲ್ ಶಾಲಾ ಮೈದಾನ ಆವರಣದಲ್ಲಿ ಇದೇ ತಿಂಗಳು ೨೮ ಹಾಗೂ ೨೯ ರಂದು ನಡೆಯಲಿರುವ ರಾಜ್ಯ ಮಟ್ಟದ ೪ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಪುರಸ್ಕರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ರಾಷ್ಟ್ರ ಕವಿ ಕುವೆಂಪು ಅವರ ಹುಟ್ಟು ಹಬ್ಬದಂದು ಸಮ್ಮೇಳನ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟನೆ ನೆರವೇರಿಸಲಿದ್ದಾರೆ. ಸಚಿವರು ಸೇರಿ ಹಲವು ಗಣ್ಯ ವ್ಯಕ್ತಿಗಳು ಭಾಗಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಾಗಾರಗಳನ್ನು ಆಯೋಜಿಸಿ ಮಕ್ಕಳಲ್ಲಿ ಮೌಢ್ಯತೆ ಹೋಗಲಾಡಿಸಲು ಪರಿಷತ್ ಶ್ರಮಿಸುತ್ತಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಸುಮಾರು ೬೦ ಕೋಟಿ ರೂ ವೆಚ್ಚದಲ್ಲಿ ವಿಜ್ಞಾನ ಗ್ರಾಮ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ನಾಸಾದ ವಿಷಯಗಳನ್ನು ತೆಗೆದುಕೊಂಡು ಒಳಾಂಗಣದಲ್ಲಿ ೨ ಸಾವಿರ ಮಂದಿ ಕುಳಿತು ವೀಕ್ಷಿಸಬಹುದಾದ ಬೃಹತ್ ಆಡಿಟೋರಿಯಂ ಸಿದ್ಧವಾಗುತ್ತಿದೆ ಎಂದು ಲಕ್ಷ್ಮೀನಾರಾಯಣ ತಿಳಿಸಿದರು.
ಚಿತ್ರ: ಪಾ.ಶ್ರೀ ಅನಂತರಾಮ್
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್