ಕೋಲಾರ, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಗೋಲ್ಡ್ಫೀಲ್ಡ್ ಕ್ರೆಡಿಟ್ ಕೋ-ಆಪರೇಟೀವ್ ಸಹಕಾರ ಸಂಘದ ೨೦೨೪-೨೯ನೇ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಕೆ.ಬಿ.ಗೋಪಾಲಕೃಷ್ಣ ಪುನರಾಯ್ಕೆಯಾಗಿದ್ದು, ಬಡ್ಡಿಮಾಫಿಯಾದಿಂದ ರೈತರ ರಕ್ಷಣೆ ಹಾಗೂ ಸೊಸೈಟಿ ವಹಿವಾಟು ೧೦ ಕೋಟಿ ತಲುಪಿಸುವ ಗುರಿಯೊಂದಿಗೆ ಕೆಲಸ ಮಾಡುವುದಾಗಿ ಘೋಷಿಸಿದರು.
ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗೋಪಾಲಕೃಷ್ಣ, ಉಪಾಧ್ಯಕ್ಷರಾಗಿ ಎನ್.ರಂಗಯ್ಯ ನಾಮಪತ್ರ ಸಲ್ಲಿಸಿದ್ದು, ಅವರ ವಿರುದ್ದ ಯಾರೂ ಕಣಕ್ಕಿಳಿಯದ ಕಾರಣ ಚುನಾವಣಾಧಿಕಾರಿ ಪ್ರದೀಪ್ ಅವರಿಬ್ಬರು ಅವಿರೋಧ ಆಯ್ಕೆಯಾಗಿರವುದಾಗಿ ಪ್ರಕಟಿಸಿದರು.
ಪುನರಾಯ್ಕೆ ನಂತರ ಮಾತನಾಡಿದ ಗೋಪಾಲಕೃಷ್ಣ, ಕೇವಲ ೨೦ ಲಕ್ಷದಿಂದ ಆರಂಭವಾದ ಸೊಸೈಟಿ ಇದೀಗ ೫ ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿದೆ, ಮುಂದಿನ ಐದು ವರ್ಷಗಳಲ್ಲಿ ಇದನ್ನು ೧೦ ಕೋಟಿಗೂ ಮೀರಿ ಬೆಳೆಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಸಂಘದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ಸಂಸ್ಥೆಯ ಹಣ ಬಳಸದೇ ತಮ್ಮ ಕೈಯಿಂದ ಖರ್ಚು ಮಾಡುತ್ತಿರುವುದಾಗಿ ತಿಳಿಸಿದ ಅವರು, ಎಲ್ಲಾ ನಿರ್ದೇಶಕರು ತಮ್ಮ ಮೇಲೆ ನಂಬಿಕೆಯಿಟ್ಟು ಪುನರಾಯ್ಕೆ ಮಾಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು.
ಸಾಲ ಪಡೆದವರು ಸಕಾಲಕ್ಕೆ ಸಾಲ ಮರುಪಾವತಿಸಬೇಕು, ಈ ವಿಷಯದಲ್ಲಿ ನಿಷ್ಟೂರದಿಂದ ನಡೆದುಕೊಳ್ಳುವ ಅಗತ್ಯವಿದೆ, ಮತ್ತಷ್ಟು ಮಂದಿಗೆ ಸಾಲ ನೀಡಬೇಕಾದಲ್ಲಿ ಸಾಲ ಮರುಪಾವತಿ ಅತಿ ಮಹತ್ವ ಪಡೆದುಕೊಂಡಿದೆ ಎಂದ ಅವರು, ಸಾಲ ಮರುಪಾವತಿಯಲ್ಲಿ ನಿರ್ದೇಶಕರು ಸಹಕಾರ ನೀಡಬೇಕು ಎಂದರು.
ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಎನ್.ರಂಗಯ್ಯ ಮಾತನಾಡಿ, ಸೊಸೈಟಿ ಸಾಲ ಮರುಪಾವತಿಯಲ್ಲಿ ಶೇ.೧೦೦ ಸಾಧನೆ ಮಾಡಿದೆ, ಈ ಕಾರ್ಯದಲ್ಲಿ ಎಲ್ಲಾ ನಿರ್ದೇಶಕರ ಸಹಕಾರವೂ ಸಿಕ್ಕಿದೆ, ಅಧ್ಯಕ್ಷರು ಎಲ್ಲರ ಸಲಹೆ,ಸೂಚನೆಗೆ ಮನ್ನಣೆ ನೀಡಿ ಸೊಸೈಟಿಯನ್ನು ಮುನ್ನಡೆಸಿದ್ದಾರೆ ಎಂದು ತಿಳಿಸಿದರು.
ನಿರ್ದೇಶಕ ಎಸ್.ಎಂ.ನಾರಾಯಣಸ್ವಾಮಿ, ಸೊಸೈಟಿಯನ್ನು ಮಗುವಾಗಿ ಬೆಳೆಸಿದ್ದೇವೆ, ಅದೇ ರೀತಿ ಮುಂದುವರೆಯೋಣ ಎಲ್ಲರ ಸಹಕಾರದಿಂದ ಜಿಲ್ಲೆಯ ಒಂದು ಅತ್ಯುತ್ತಮ ಸಹಕಾರ ಸಂಘವಾಗಿಸೋಣ ಎಂದು ತಿಳಿಸಿದರು.
ನಿರ್ದೇಶಕ ಎಂ.ಲೋಕೇಶ್ ಮೂರ್ತಿ, ಸಂಸ್ಥೆಯನ್ನು ಉಳಿಸಿ,ಬೆಳೆಸಿ, ಪೋಷಿಸಿಕೊಂಡು ಹೋಗೋಣ, ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡುವುದು ಬೇಡ, ಇಲ್ಲಿ ಯಾರೊಬ್ಬರ ಸ್ವಾರ್ಥಕ್ಕೂ ಅವಕಾಶವಿಲ್ಲ, ಸೊಸೈಟಿಯನ್ನು ರೈತಪರವಾಗಿಸೋಣ ಎಂದರು.
ನೂತನ ನಿರ್ದೇಶಕರಾದ ನಿಕಟಪೂರ್ವ ಉಪಾಧ್ಯಕ್ಷ ವಿ.ಶ್ರೀರಾಮ್, ನಿರ್ದೇಶಕರಾದ ಸಿ.ನಾಗರಾಜ, ಬಿ.ಕೆ.ಎ.ಸುಬ್ಬಾರೆಡ್ಡಿ, ವೈ.ಎನ್.ವೆಂಕಟರವಣಪ್ಪ, ಡಿ.ನಾಗರಾಜಪ್ಪ, ಎಸ್.ವಿ.ನಾರಾಯಣರೆಡ್ಡಿ, ಹೆಚ್.ಎನ್.ನಾಗೇಶ್, ಎ.ಎಸ್.ನಂಜುಂಡಗೌಡ, ಲೋಕೇಶಮೂರ್ತಿ, ಎಸ್.ವಿ.ನಾರಾಯಣರೆಡ್ಡಿ, ಬಿ.ಜಿ.ಶ್ರೀದೇವಿಗೋವಿಂದರಾಜು, ಎಂ.ವರಲಕ್ಷ್ಮಿ ರವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮೂರಾಂಡಹಳ್ಳಿ ಡಾ.ಗೋಪಾಲಪ್ಪ, ಸಂಘದ ಸಿಇಒ ಎಸ್.ಶಶಿಕಲಾ, ಮೇಲ್ವಿಚಾರಕರಾದ ವಿ.ನಾರಾಯಣಸ್ವಾಮಿ, ವೆಂಕಟರಾಮೇಗೌಡ ಮತ್ತಿತರರಿದ್ದರು.
ಚಿತ್ರ: ಕೋಲಾರದ ಗೋಲ್ಡ್ಫೀಲ್ಡ್ ಕ್ರೆಡಿಟ್ ಕೋ-ಆಪರೇಟೀವ್ ಸೊಸೈಟಿಯ ೨೦೨೪-೨೯ನೇ ೫ವರ್ಷಗಳ ಅವಧಿಯ ಅಧ್ಯಕ್ಷರಾಗಿ ಕೆ.ಬಿ.ಗೋಪಾಲಕೃಷ್ಣ ಪುನರಾಯ್ಕೆಯಾಗಿದ್ದು, ಎಲ್ಲಾ ನಿರ್ದೇಶಕರು ಅಭಿನಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್