ವಿದ್ಯಾರ್ಥಿಗಳು ಸದ್ಗುಣ ಮತ್ತು ಕನ್ನಡ ಮೈಗೂಡಿಸಿಕೊಳ್ಳಿ
ಬಳ್ಳಾರಿ, 15 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಕಳೆದ ಇಪ್ಪತ್ತು ವರ್ಷಗಳಿಂದ ನನ್ನ ಹೃದಯದಲ್ಲಿ ಈ ಗ್ರಾಮ ಮತ್ತು ವಿದ್ಯಾರ್ಥಿಗಳನ್ನು ಪೂಜಿಸುತ್ತಿರುವುದು ಅತ್ಯಂತ ಪರಮಾನಂದ ತಂದಿದೆ. ಊರಿನ ಸಮಸ್ತ ಜನರ ಸಹಕಾರದಿಂದಲೇ ಇಲ್ಲಿ ಹೈಸ್ಕೂಲ್ ಬರಲು ಸಾಧ್ಯವಾಯಿತು. ವಿದ್ಯಾರ್ಥಿಗಳು ಕೆಟ್ಟ ಚಟಗಳನ್ನು ಬಿಟ್ಟ
Students should assimilate virtue and Kannada.


ಬಳ್ಳಾರಿ, 15 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಕಳೆದ ಇಪ್ಪತ್ತು ವರ್ಷಗಳಿಂದ ನನ್ನ ಹೃದಯದಲ್ಲಿ ಈ ಗ್ರಾಮ ಮತ್ತು ವಿದ್ಯಾರ್ಥಿಗಳನ್ನು ಪೂಜಿಸುತ್ತಿರುವುದು ಅತ್ಯಂತ ಪರಮಾನಂದ ತಂದಿದೆ. ಊರಿನ ಸಮಸ್ತ ಜನರ ಸಹಕಾರದಿಂದಲೇ ಇಲ್ಲಿ ಹೈಸ್ಕೂಲ್ ಬರಲು ಸಾಧ್ಯವಾಯಿತು. ವಿದ್ಯಾರ್ಥಿಗಳು ಕೆಟ್ಟ ಚಟಗಳನ್ನು ಬಿಟ್ಟು ಸದ್ಗುಣಗಳನ್ನು ಬೆಳೆಸಿಕೊಂಡು ಇಡೀ ಜಿಲ್ಲೆಗೆ ಕೀರ್ತಿ ತರಬೇಕು. ಪೋಷಕರು ತಮ್ಮ ಮಕ್ಕಳನ್ನು ಆಸ್ತಿಯನ್ನಾಗಿ ಮಾಡದೆ, ಸನ್ನಡೆತೆಯ ಸಂಪತ್ತನ್ನಾಗಿ ಮಾಡಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಗಂಗೇಶ್ ಕರೆ ನೀಡಿದರು.

ಅವರು ತಾಲೂಕಿನ ಹಿರೇಹಡ್ಲಿಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶಂಭುಲಿಂಗಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ತಂದೆ-ತಾಯಿ, ಶಿಕ್ಷಕರು ಮತ್ತು ಸಹಾಯ ಮಾಡಿದವರನ್ನು ಎಂದಿಗೂ ಮರೆಯಬಾರದು. ಇಂದು ಶಿಕ್ಷಣ ವ್ಯಾಪಾರೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳು ಬದುಕಿನ ನೈಜ ಮೌಲ್ಯಗಳನ್ನು ಕಲ್ಪಿಸುತ್ತಿವೆ. ಶಿಕ್ಷಕ ವೃತ್ತಿಗೆ ಎಂದಿಗೂ ನಿವೃತ್ತಿಯಿಲ್ಲ, ಅದಕ್ಕೆ ನಿರಂತರ ಗೌರವವಿದೆ ಎಂದರು.

ಉಪನ್ಯಾಸಕ ರಾಮು.ಕೆ ಮಾತನಾಡಿ, ಹೆತ್ತ ತಾಯಿ ಮತ್ತು ಹೊತ್ತ ನೆಲವನ್ನು ಎಂದಿಗೂ ಮರೆಯಬಾರದು. ಹಿರಿಯ ವಿದ್ಯಾರ್ಥಿಗಳ ಒಗ್ಗಟ್ಟಿನ ಫಲವಾದ ಕಾರ್ಯಕ್ರಮವಾಗಿದೆ. ಅಂದಿನ ಹಡ್ಲಿಗಿಗೂ ಇಂದಿನ ಹಡ್ಲಿಗೂ ಶಿಕ್ಷಣದಿಂದ ಬದಲಾವಣೆ ಸಾಧ್ಯ ಎಂದರು. ವಿದೇಯ ವಿನಯತೆ ವಿದ್ಯಾರ್ಥಿಗಳಲ್ಲಿ ಇದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಪ್ರಭುರಾಜ್ ಮತ್ತು ತಿಪ್ಪಮ್ಮ ಮಾತನಾಡಿದರು.

ವಿಶೇಷ ಆಹ್ವಾನಿತ ನಿವೃತ್ತ ಶಿಕ್ಷಕ ಕೆ.ಎಂ. ಮಹೇಶ್ವರಯ್ಯ, ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳ ನಡುವಿನ ಆತ್ಮೀಯ ಬಾಂಧವ್ಯವನ್ನು ಸ್ಮರಿಸಿ ಭಾವುಕರಾದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀನಿವಾಸ, ಕೊಟ್ರಪ್ಪ, ಚಂದ್ರಶೇಖರ್, ರಾಮಚಂದ್ರಪ್ಪ, ಹಾಲೇಶ್, ನಾಗಭೂಷಣ್, ನಾಗನಗೌಡ, ಅಬ್ದುಲ್ ಕಲಾಂ ತಮ್ಮ ಸೇವಾ ಅವಧಿಯ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡರು.

ಕಾರ್ಯಕ್ರಮವನ್ನು ಚಂದ್ರಶೇಖರ.ಸಿ ನಿರೂಪಿಸಿದರೆ, ಐರಾವತ ಮಣಿಗಿ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕರು, ಸಹ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande