
ಗದಗ, 15 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:- ಗ್ರಾಮದಲ್ಲೇ ಕೆಲಸ ಸಿಗಲಿ, ಕೂಲಿಗಾಗಿ ದೂರದ ಊರುಗಳಿಗೆ ಅಲೆಯುವ ಪರಿಸ್ಥಿತಿ ತಪ್ಪಲಿ ಎಂಬ ಉದ್ದೇಶದಿಂದ ರೋಣ ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಫಾರ್ಮ್ ನಂ.6 ಉದ್ಯೋಗ ಬೇಡಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ವಿಬಿ-ಜಿ ರಾಮ್ (ಜಿ) ಯೋಜನೆಯಡಿ ಉದ್ಯೋಗ ಪಡೆಯಲು ಇಚ್ಛಿಸುವ ಗ್ರಾಮೀಣ ಕುಟುಂಬಗಳು ತಮ್ಮ ಗ್ರಾಮ ಪಂಚಾಯಿತಿಗೆ ತೆರಳಿ ಫಾರ್ಮ್ ನಂ.6 ಮೂಲಕ ಕೆಲಸದ ಬೇಡಿಕೆ ಸಲ್ಲಿಸಬಹುದಾಗಿದೆ.
ಹೊಸ ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗದ ಅವಕಾಶ ಕಲ್ಪಿಸುವ ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ, ಅರ್ಹ ಫಲಾನುಭವಿಗಳನ್ನು ಗುರುತಿಸಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಈ ಅಭಿಯಾನ ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಉದ್ಯೋಗದ ಅಗತ್ಯವಿರುವ ಕುಟುಂಬಗಳು ತಪ್ಪದೇ ಅರ್ಜಿ ಸಲ್ಲಿಸುವಂತೆ ತಾಲೂಕು ಪಂಚಾಯಿತಿಯಿಂದ ಸೂಚಿಸಲಾಗಿದೆ.
ಫಾರ್ಮ್ ನಂ.6 ಮೂಲಕ ಅರ್ಜಿ ಸಲ್ಲಿಸಿದ ಬಳಿಕ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅರ್ಜಿಯನ್ನು ಪರಿಶೀಲಿಸಿ, ಅರ್ಹ ಕುಟುಂಬಗಳ ವಿವರಗಳನ್ನು ದಾಖಲಿಸಿಕೊಳ್ಳಲಿದ್ದಾರೆ. ಬಳಿಕ ಲಭ್ಯವಿರುವ ಕಾಮಗಾರಿಗಳ ಆಧಾರದ ಮೇಲೆ ಉದ್ಯೋಗ ನೀಡುವ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ಕೆಲಸದ ಅವಶ್ಯಕತೆ ಇರುವವರು ಕೇವಲ ಉದ್ಯೋಗ ಚೀಟಿ ಹೊಂದಿರುವುದಷ್ಟೇ ಅಲ್ಲದೆ, ಕೆಲಸದ ಬೇಡಿಕೆಯನ್ನೂ ಅಧಿಕೃತವಾಗಿ ಸಲ್ಲಿಸುವುದು ಅಗತ್ಯವಾಗಿದೆ.
ಈ ಹಿಂದೆ ನರೇಗಾ ಯೋಜನೆಯಡಿ ಜಾಬ್ಕಾರ್ಡ್ ಹೊಂದಿದ್ದ ಕುಟುಂಬಗಳಿಗೂ ಹೊಸ ಯೋಜನೆಯಡಿ ಉದ್ಯೋಗ ಪಡೆಯಲು ಅವಕಾಶವಿದೆ. ಈ-ಕೆವೈಸಿ ಪೂರ್ಣಗೊಂಡಿರುವ ಹಳೆಯ ಉದ್ಯೋಗ ಚೀಟಿಗಳನ್ನು ಆರಂಭಿಕ ಹಂತದಲ್ಲಿ ಮಾನ್ಯಗೊಳಿಸಲಾಗಿದ್ದು, ಅವುಗಳ ಆಧಾರದಲ್ಲಿ ಅರ್ಹ ಕಾರ್ಮಿಕರಿಗೆ ಕೆಲಸ ಕಲ್ಪಿಸುವ ಪ್ರಕ್ರಿಯೆ ನಡೆಯಲಿದೆ. ಹೊಸದಾಗಿ ಉದ್ಯೋಗ ಬಯಸುವ ಕುಟುಂಬಗಳಿಗೂ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ.
ಗ್ರಾಮ ಪಂಚಾಯಿತಿಗಳಲ್ಲಿ ಕುಟುಂಬಗಳ ನೋಂದಣಿ, ಫಾರ್ಮ್ ನಂ.6 ಸ್ವೀಕಾರ, ದಾಖಲೆಗಳ ಪರಿಶೀಲನೆ ಹಾಗೂ ಉದ್ಯೋಗ ಒದಗಿಸುವ ಪ್ರಕ್ರಿಯೆ ಸಮರ್ಪಕವಾಗಿ ನಡೆಯುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಲಾಗಿದೆ. ಯಾವುದೇ ಅರ್ಹ ಕುಟುಂಬವೂ ಉದ್ಯೋಗದ ಅವಕಾಶದಿಂದ ವಂಚಿತವಾಗದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾಹಿತಿ ನೀಡುವ ಹಾಗೂ ಅರ್ಜಿಗಳನ್ನು ಸ್ವೀಕರಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ.
ಯೋಜನೆಯಡಿ ದಿನಕ್ಕೆ ₹382 ಕೂಲಿ ನಿಗದಿಯಾಗಿದ್ದು, ಅರ್ಹ ಗ್ರಾಮೀಣ ಕುಟುಂಬಗಳಿಗೆ ವರ್ಷದಲ್ಲಿ 125 ದಿನಗಳವರೆಗೆ ಉದ್ಯೋಗದ ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಜಲಸಂರಕ್ಷಣೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಹಾಗೂ ಹವಾಮಾನಕ್ಕೆ ಸಂಬಂಧಿಸಿದ ವಿವಿಧ ಕಾಮಗಾರಿಗಳಲ್ಲಿ ಸ್ಥಳೀಯ ಕಾರ್ಮಿಕರಿಗೆ ಕೆಲಸ ನೀಡಲು ಅವಕಾಶವಿದೆ.
ಕೃಷಿ ಕೆಲಸ ಲಭ್ಯವಿಲ್ಲದ ಅವಧಿಯಲ್ಲಿ ಗ್ರಾಮದಲ್ಲಿಯೇ ಉದ್ಯೋಗ ಸಿಗುವುದರಿಂದ ಗ್ರಾಮೀಣ ಕುಟುಂಬಗಳ ಆದಾಯಕ್ಕೆ ನೆರವಾಗುವುದರ ಜೊತೆಗೆ, ಉದ್ಯೋಗಕ್ಕಾಗಿ ನಗರ ಹಾಗೂ ಹೊರ ಜಿಲ್ಲೆಗಳಿಗೆ ವಲಸೆ ಹೋಗುವ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯೂ ಇದೆ.
ಗ್ರಾಮೀಣ ಭಾಗದ ಅರ್ಹ ಕುಟುಂಬಗಳಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸುವ ಉದ್ದೇಶದಿಂದ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಫಾರ್ಮ್ ನಂ.6 ಮೂಲಕ ಉದ್ಯೋಗ ಬೇಡಿಕೆ ಸಲ್ಲಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಕೆಲಸದ ಅಗತ್ಯವಿರುವವರು ಗ್ರಾಮ ಪಂಚಾಯಿತಿಗೆ ತೆರಳಿ ಅರ್ಜಿ ಸಲ್ಲಿಸಬೇಕು. ಸ್ವೀಕರಿಸುವ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ನಿಯಮಾನುಸಾರ ಉದ್ಯೋಗ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಎಂದು ರೋಣ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ
ಚಂದ್ರಶೇಖರ ಬಿ. ಕಂದಕೂರ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP