ಉದ್ಯೋಗ ಅವಕಾಶಗಳಿಗೆ ಕೌಶಲ್ಯಗಳು ಪೂರಕ : ಶಾಸಕ ನಾರಾ ಭರತರೆಡ್ಡಿ
ಬಳ್ಳಾರಿ, 15 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ಯುವಜನರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸುವಲ್ಲಿ ಕೌಶಲ್ಯಾಭಿವೃದ್ಧಿ ಪೂರಕ ಎಂದು ಬಳ್ಳಾರಿ ನಗರ ಕ್ಷೇತ್ರದ ಶಾಸಕರಾದ ನಾರಾ ಭರತರೆಡ್ಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕೌಶಲ್ಯಾಭಿವೃ
ಉದ್ಯೋಗ ಅವಕಾಶಗಳಿಗೆ ಕೌಶಲ್ಯಗಳು ಪೂರಕ : ಶಾಸಕ ನಾರಾ ಭರತರೆಡ್ಡಿ


ಉದ್ಯೋಗ ಅವಕಾಶಗಳಿಗೆ ಕೌಶಲ್ಯಗಳು ಪೂರಕ : ಶಾಸಕ ನಾರಾ ಭರತರೆಡ್ಡಿ


ಬಳ್ಳಾರಿ, 15 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್: ಯುವಜನರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸುವಲ್ಲಿ ಕೌಶಲ್ಯಾಭಿವೃದ್ಧಿ ಪೂರಕ ಎಂದು ಬಳ್ಳಾರಿ ನಗರ ಕ್ಷೇತ್ರದ ಶಾಸಕರಾದ ನಾರಾ ಭರತರೆಡ್ಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕೌಶಲ್ಯಾಭಿವೃದ್ಧಿ ಕೇಂದ್ರ ಮಂಗಳವಾರ ಏರ್ಪಡಿಸಿದ್ದ 'ಕೌಶಲ್ಯ ತರಬೇತಿ ಪ್ರಮಾಣಪತ್ರ ವಿತರಣೆ' ಹಾಗೂ ಉದ್ಯೋಗ ಅವಕಾಶಗಳ ಮಾಹಿತಿಯನ್ನು ನೀಡುವ 'ಜಾಬ್ ಪೋರ್ಟಲ್' ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಈ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಶೈಕ್ಷಣಿಕ ಅರ್ಹತೆಯ ಜೊತೆಗೆ ಕೌಶಲ್ಯಗಳು ಅಗತ್ಯ.

ಕೌಶಲಗಳನ್ನು ಕಲಿಯುವ ಮೂಲಕ ಉದ್ಯೋಗ ಕ್ಷೇತ್ರದಲ್ಲಿ ನೈಪುಣ್ಯತೆಯನ್ನು, ಅಭಿವೃದ್ಧಿಯನ್ನು, ಆರ್ಥಿಕವಾಗಿ ಬಲಗೊಳ್ಳಬಹುದು ಎಂದರು.

ಸಂಜೀವರಾಯನಕೋಟೆ ಸಮೀಪದಲ್ಲಿ 600 ಎಕರೆ ಭೂಮಿಯಲ್ಲಿ 5000 ಕೋಟಿ ಬಂಡವಾಳವನ್ನು ಹೂಡಿಕೆ ಮಾಡಿ ಅಂತರಾಷ್ಟ್ರೀಯ ಮಟ್ಟದ ಜೀನ್ಸ್ ಗಾರ್ಮೆಂಟ್ ಪಾರ್ಕನ್ನು ಪ್ರಾರಂಭಿಸಿ ಬಳ್ಳಾರಿ ಜಿಲ್ಲೆ, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಶೇ. 80 ರಷ್ಟು ಉದ್ಯೋಗ ಸೃಷ್ಠಿಸಲಾಗುತ್ತದೆ. ಅಲ್ಲದೇ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ ತಮ್ಮದೇ ಆಗಿರುವ `ಟಚ್ ಫಾರ್ ಲೈಫ್’ ಫೌಂಡೇಶನ್ನಿಂದ 10 ಲಕ್ಷ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಅವರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕೌಶಲ್ಯವೇ ಯುವಜನರ ಭವಿಷ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಶೈಕ್ಷಣಿಕ ಅರ್ಹತೆ ಇದ್ದರೆ ಸಾಕಾಗುವುದಿಲ್ಲ. ಉದ್ಯೋಗ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿ ಪ್ರಾಯೋಗಿಕ ಜ್ಞಾನ, ತಾಂತ್ರಿಕ ಕೌಶಲ್ಯ ಮತ್ತು ವೃತ್ತಿಪರ ಸಾಮರ್ಥ್ಯವನ್ನು ಹೊಂದಿರುವುದು ಅತ್ಯಂತ ಮುಖ್ಯ ಎಂದರು.

ನಮ್ಮ ಸಂಸ್ಥೆಯ ಕೌಶಲ್ಯಾಭಿವೃದ್ಧಿ ಕೇಂದ್ರದ ಮೂಲಕ ವಿವಿಧ ತರಬೇತಿಗಳನ್ನು ಪಡೆದು ಯುವಜನರು ವೃತ್ತಿ ಜೀವನವನ್ನು ರೂಪಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದರು.

ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು ಅವರು, ಸಂಸ್ಥೆಯು ಯುವಜನರಿಗೆ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ. ನಮ್ಮ ಸಂಸ್ಥೆಯ ಕೌಶಲ್ಯ ತರಬೇತಿ ಕೇಂದ್ರವು ಅನೇಕರ ಭವಿಷ್ಯದ ಭಾಗವಾಗಲಿದೆ ಎಂದರು.

ಕೌಶಲ್ಯಾಭಿವೃದ್ಧಿ ಕೇಂದ್ರದ ಸಿಇಒ ಡಾ. ಡಿ.ಎಲ್. ರಮೇಶಗೋಪಾಲ್ ಅವರು, ಸ್ವಾಗತಿಸಿ, ಕೌಶಲ್ಯಾಭಿವೃದ್ಧಿ ಕೇಂದ್ರದ ಚಟುವಟಿಕೆಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ತರಬೇತಿ ಪಡೆದು ಖ್ಯಾತರಾದವರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಐಟಿ ಕಮಿಟಿ ಚೇರ್ಮನ್ ಪಿ. ವೇಣುಗೋಪಾಲ ಗುಪ್ತ ಅವರು, ಉದ್ಯೋಗ ಅವಕಾಶಗಳ ಕುರಿತಾದ ಉದ್ಯೋಗದಾತರು ಮತ್ತು ಉದ್ಯೋಗಗಳ ಹುಡುಕಾಟ ಮಾಡುತ್ತಿರುವ ಮಧ್ಯವರ್ತಿಯ ರೀತಿಯಲ್ಲಿ ಜಾಬ್ ಪೋರ್ಟಲ್ ಕಾರ್ಯನಿರ್ವಹಿಸುತ್ತದೆ. ಆಸಕ್ತರು ಸಂಸ್ಥೆಗಳ ಬೇಡಿಕೆಯನ್ನು ಮತ್ತು ಉದ್ಯೋಗ ಹುಡುಕಾಡುವವರು ನೋಂದಣಿ ಮಾಡಿಕೊಳ್ಳಬೇಕು ಎಂದರು.

ಕಾಳಿದಾಸ ಅವರು ಕಾರ್ಯಕ್ರಮ ನಿರೂಪಿಸಿದರು. ಕೌಶಲ್ಯಾಭಿವೃದ್ಧಿ ಕೇಂದ್ರದ ಚೇರ್ಮನ್ ನಾಗಳ್ಳಿ ರಮೇಶ್ ಅವರು ವಂದನಾರ್ಪಣೆ ಸಲ್ಲಿಸಿದರು.

ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ, ಎಸ್. ದೊಡ್ಡನಗೌಡ, ಉಪಾಧ್ಯಕ್ಷರಾದ ಸೊಂತ ಗಿರಿಧರ್ ಹಾಗೂ ಪಿ. ಪಾಲಣ್ಣ, ಜಂಟಿ ಕಾರ್ಯದರ್ಶಿಗಳಾದ, ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ ಹಾಗೂ ವಿ. ರಾಮಚಂದ್ರ, ಖಜಾಂಚಿಗಳಾದ, ಎಸ್. ಸತ್ಯನಾರಾಯಣ, ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಾಬ್ ಪೋರ್ಟಲ್ ವೆಬ್ ಸೈಟ್ ವಿಳಾಸ : www.jobroots.in

ಮೊಬೈಲ್ ಸಂಖ್ಯೆ : 8660455326, 9880654649 ಗೆ ಕಚೇರಿ ವೇಳೆ ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯೊಳಗಾಗಿ ಕರೆ ಮಾಡಿರಿ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande