ಬೆಂಗಳೂರಿಗೆ ತಂಪೆರದ ಮಳೆ; ಹಲವೆಡೆ ಸಂಚಾರ ವ್ಯತ್ಯಯ
ಬಿಸಿಲಿನಿಂದ ಬೇಸತ್ತ ಜನರಿಗೆ ವರುಣನ ಆಗಮನದಿಂದ ನಿರಾಳತೆ
Bengaluru Rains: Rain Brings Relief From Heat, Traffic Disrupted In Several Areas


ಬೆಂಗಳೂರು, 15 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಕಳೆದ ಮೂರ್ನಾಲ್ಕು ದಿನಗಳಿಂದ ಬಿಸಿಲಿನ ಝಳದಿಂದ ಬಸವಳಿದಿದ್ದ ಬೆಂಗಳೂರಿನ ಜನರಿಗೆ ಮಂಗಳವಾರ ಸಂಜೆ ಸುರಿದ ಮಳೆ ತಂಪಿನ ಅನುಭವ ನೀಡಿತು. ಮಧ್ಯಾಹ್ನದಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಸಂಜೆ ವೇಳೆಗೆ ಹಲವು ಪ್ರದೇಶಗಳಲ್ಲಿ ಜೋರು ಮಳೆಯಾಯಿತು.

ಸಂಜೆ ಸುಮಾರು 6 ಗಂಟೆ ವೇಳೆಗೆ ಆರಂಭವಾದ ಮಳೆ ಕೆಲಕಾಲ ಮುಂದುವರಿಯಿತು. ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರು ಮಳೆಯಿಂದಾಗಿ ತೊಂದರೆ ಅನುಭವಿಸಿದರು. ನಗರದ ಹಲವು ಪ್ರಮುಖ ರಸ್ತೆಗಳಲ್ಲಿನ ಸಂಚಾರವೂ ಕೆಲಕಾಲ ಅಸ್ತವ್ಯಸ್ತಗೊಂಡಿತು.

ಉತ್ತರ ಬೆಂಗಳೂರಿನ ಹೆಬ್ಬಾಳ, ಆರ್.ಟಿ. ನಗರ, ಸಂಜಯನಗರ, ಹೊಸ ಬಿಇಎಂಎಲ್ ಬಡಾವಣೆ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಿತ್ತು. ರಸ್ತೆಗಳಲ್ಲೇ ನೀರು ನಿಂತಿದ್ದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ವಾಹನ ಚಾಲಕರು ಪರದಾಡಿದರು.

ನಗರದ ವಹಿವಾಟು ಪ್ರದೇಶ , ರಾಜಾಜಿನಗರ, ಜಯನಗರ, ಬಸವನಗುಡಿ, ಮಹಾತ್ಮ ಗಾಂಧಿ ರಸ್ತೆ, ಇಂದಿರಾನಗರ, ಶಾಂತಿನಗರ, ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ಗೊಟ್ಟಿಗೆರೆ, ರೂಪೇನ ಅಗ್ರಹಾರ ಹಾಗೂ ನಾಗಸಂದ್ರ ಸೇರಿದಂತೆ ಹಲವು ಭಾಗಗಳಲ್ಲಿಯೂ ಮಳೆಯಾಗಿದೆ. ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವೂ ಉಂಟಾಯಿತು.

ಹವಾಮಾನ ಇಲಾಖೆ ಹೇಳಿಕೆಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮಂಗಳವಾರ ಸಂಜೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ಭಾರಿ ಗಾಳಿಯೊಂದಿಗೆ ಕೆಲವು ಕಡೆ ಮಳೆಯಾಗುವ ಸಾಧ್ಯತೆಯನ್ನೂ ಇಲಾಖೆ ತಿಳಿಸಿತ್ತು. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿತ್ತು.

ಇತ್ತೀಚೆಗೆ ಗಣಪತಿ ಹಬ್ಬದ ದಿನವೂ ಬೆಂಗಳೂರಿನ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಿತ್ತು. ಆದರೆ ಉಷ್ಣಾಂಶ ಹೆಚ್ಚಿದ್ದ ಹಿನ್ನೆಲೆಯಲ್ಲಿ ಜನರು ಬಿಸಿಲಿನ ಕಾವಿನಿಂದ ಬಳಲುತ್ತಿದ್ದರು. ಇದೀಗ ಮಂಗಳವಾರ ಸಂಜೆ ಸುರಿದ ಮಳೆ ನಗರದಲ್ಲಿ ತಂಪಿನ ವಾತಾವರಣ ನಿರ್ಮಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande