
ಬೆಂಗಳೂರು, 29 ಆಗಸ್ಟ್(ಹಿ.ಸ):
ಆ್ಯಂಕರ್:
ಹೊಸ ಮೆಟ್ರೋ ರೈಲುಗಳ ಸೇರ್ಪಡೆಯ ಬೆನ್ನಲ್ಲೇ ಹಳೆಯ ಮೆಟ್ರೋ ರೈಲುಗಳಿಗೂ ಬೆಂಗಳೂರು ಮೆಟ್ರೋ ರೈಲು ನಿಗಮವು ಸಮಗ್ರ ದುರಸ್ತಿ ಕಾರ್ಯ ಕೈಗೊಳ್ಳಲು ಮುಂದಾಗಿದೆ. 2011ರಿಂದ ಸೇವೆಯಲ್ಲಿರುವ ಕೆಲವು ರೈಲುಗಳು ಈಗಾಗಲೇ 10 ಲಕ್ಷ ಕಿ.ಮೀ.ಗೂ ಅಧಿಕ ಸಂಚರಿಸಿರುವ ಹಿನ್ನೆಲೆಯಲ್ಲಿ ರೈಲುಗಳ ತಾಂತ್ರಿಕ ಗುಣಮಟ್ಟ, ಸುರಕ್ಷತೆ ಹಾಗೂ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ಅಗತ್ಯ ದುರಸ್ತಿ ಮತ್ತು ಬಿಡಿಭಾಗಗಳ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಪ್ರಸ್ತುತ ಹಸಿರು ಮತ್ತು ನೇರಳೆ ಮಾರ್ಗಗಳಲ್ಲಿ ಒಟ್ಟು 57 ರೈಲುಗಳು ಸಂಚರಿಸುತ್ತಿವೆ. ಮೊದಲ ಹಂತದಲ್ಲಿ ಈ ಎರಡೂ ಮಾರ್ಗಗಳಲ್ಲಿರುವ ಹಳೆಯ ರೈಲುಗಳಿಗೆ ಸಮಗ್ರ ದುರಸ್ತಿ ಕಾರ್ಯ ಕೈಗೊಳ್ಳುವ ಸಾಧ್ಯತೆಯಿದೆ.
ಹಸಿರು ಮಾರ್ಗಕ್ಕೆ ಶೀಘ್ರದಲ್ಲೇ 21 ಹೊಸ ಮೆಟ್ರೋ ರೈಲುಗಳು ಸೇರ್ಪಡೆಯಾಗಲಿವೆ. ಹೊಸ ರೈಲುಗಳು ಸೇವೆಗೆ ಬಂದ ಬಳಿಕ ಹಸಿರು ಮಾರ್ಗದ ಕೆಲವು ಹಳೆಯ ರೈಲುಗಳನ್ನು ನೇರಳೆ ಮಾರ್ಗಕ್ಕೆ ವರ್ಗಾಯಿಸುವ ಯೋಜನೆಯೂ ಇದೆ. ಹೀಗಾಗಿ ಹಳೆಯ ರೈಲುಗಳ ನಿರ್ವಹಣೆ ಮತ್ತು ಮರುಹಂಚಿಕೆ ಪ್ರಕ್ರಿಯೆ ಮಹತ್ವ ಪಡೆದಿದೆ.
ಸಾಮಾನ್ಯವಾಗಿ ಮೆಟ್ರೋ ರೈಲುಗಳಿಗೆ ಸುಮಾರು 30 ವರ್ಷಗಳ ಸೇವಾ ಅವಧಿಯಲ್ಲಿ ದೊಡ್ಡ ಪ್ರಮಾಣದ ದುರಸ್ತಿ ನಡೆಸಲಾಗುತ್ತದೆ. ಆದರೆ ಸುಮಾರು 15 ವರ್ಷಗಳ ಕಾರ್ಯಾಚರಣೆಯ ಬಳಿಕ ಮಧ್ಯಂತರ ಸಮಗ್ರ ದುರಸ್ತಿ ನಡೆಸಲಾಗುತ್ತದೆ. ಈ ವೇಳೆ ರೈಲಿನ ಮೋಟಾರ್, ವಿದ್ಯುತ್ ವ್ಯವಸ್ಥೆ, ಬ್ಯಾಟರಿ, ಚಕ್ರ, ಅಚ್ಚು, ಬ್ರೇಕ್, ಬಾಗಿಲು, ಹವಾನಿಯಂತ್ರಣ, ಗಾಳಿ ಪೂರೈಕೆ, ಸಂಕೇತ ವ್ಯವಸ್ಥೆ ಹಾಗೂ ವಿದ್ಯುನ್ಮಾನ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತದೆ.
ಪ್ರಯಾಣಿಕರ ಆಸನ, ಒಳಾಂಗಣ ವ್ಯವಸ್ಥೆ ಹಾಗೂ ಸುರಕ್ಷತಾ ಉಪಕರಣಗಳನ್ನೂ ಪರಿಶೀಲಿಸಿ ಅಗತ್ಯವಿದ್ದಲ್ಲಿ ದುರಸ್ತಿ ಅಥವಾ ಬದಲಾವಣೆ ಮಾಡಲಾಗುತ್ತದೆ. ಒಂದು ರೈಲಿನ ಸಮಗ್ರ ದುರಸ್ತಿ ಪೂರ್ಣಗೊಳಿಸಲು ಸುಮಾರು 15 ದಿನಗಳು ಬೇಕಾಗುತ್ತದೆ ಎಂದು ತಿಳಿದುಬಂದಿದೆ.
ಈಗಾಗಲೇ ನಾಲ್ಕು ಹೊಸ ಮೆಟ್ರೋ ರೈಲುಗಳು ನಿಗಮಕ್ಕೆ ಬಂದಿದ್ದು, ಇದರ ಬೆನ್ನಲ್ಲೇ ಹಳೆಯ ರೈಲುಗಳ ಸಮಗ್ರ ದುರಸ್ತಿ ಪ್ರಕ್ರಿಯೆಗೂ ಚಾಲನೆ ನೀಡಲಾಗುತ್ತಿದೆ ಎಂದು ನಮ್ಮ ಮೆಟ್ರೋ ತಾಂತ್ರಿಕ ವಿಭಾಗ ಮಾಹಿತಿ ನೀಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R