ಸಂಡೂರು: ನಾಲ್ವರು ಬಾಲಕಾರ್ಮಿಕರ ರಕ್ಷಣೆ
ಸಂಡೂರು, 29 ಆಗಸ್ಟ್ (ಹಿ.ಸ.) ಆ್ಯಂಕರ್ : ಸಂಡೂರು ತಾಲೂಕಿನ ಕುರೆಕುಪ್ಪ ಪಟ್ಟಣ ವ್ಯಾಪ್ತಿಯಲ್ಲಿ ಬರುವ ವಿವಿಧ ಉದ್ದಿಮೆಗಳ ಮೇಲೆ ಶನಿವಾರ ಜಂಟಿ ಟಾಸ್ಕ್ ಫೋರ್ಸ್ ಸಮಿತಿ ದಿಢೀರ್ ದಾಳಿ ನಡೆಸಿ, ನಾಲ್ವರು ಬಾಲ ಮತ್ತು ಕಿಶೋರ ಕಾರ್ಮಿಕರನ್ನು ರಕ್ಷಣೆ ಮಾಡಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ
ಸಂಡೂರು: ನಾಲ್ವರು ಬಾಲಕಾರ್ಮಿಕರ ರಕ್ಷಣೆ


ಸಂಡೂರು, 29 ಆಗಸ್ಟ್ (ಹಿ.ಸ.)

ಆ್ಯಂಕರ್ : ಸಂಡೂರು ತಾಲೂಕಿನ ಕುರೆಕುಪ್ಪ ಪಟ್ಟಣ ವ್ಯಾಪ್ತಿಯಲ್ಲಿ ಬರುವ ವಿವಿಧ ಉದ್ದಿಮೆಗಳ ಮೇಲೆ ಶನಿವಾರ ಜಂಟಿ ಟಾಸ್ಕ್ ಫೋರ್ಸ್ ಸಮಿತಿ ದಿಢೀರ್ ದಾಳಿ ನಡೆಸಿ, ನಾಲ್ವರು ಬಾಲ ಮತ್ತು ಕಿಶೋರ ಕಾರ್ಮಿಕರನ್ನು ರಕ್ಷಣೆ ಮಾಡಿದೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಕಾರ್ಮಿಕ ಇಲಾಖೆ, ಕಂದಾಯ, ಶಿಕ್ಷಣ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಚೈಲ್ಡ್ಲೈನ್ ಸಹಯೋಗದೊಂದಿಗೆ ಕುರೆಕುಪ್ಪದ ಸುಮಾರು 25 ಉದ್ದಿಮೆಗಳ ಪರಿಶೀಲನೆ ನಡೆಸಲಾಯಿತು. ಈ ವೇಳೆ ಕಂಡುಬಂದ ನಾಲ್ವರು ಮಕ್ಕಳಿಗೆ ಕೆಲಸದಿಂದ ಬಿಡುಗಡೆಗೊಳಿಸಿ, ಅವರ ವಯಸ್ಸಿನ ದಾಖಲೆಗಳನ್ನು ಪರಿಶೀಲಿಸಿ, ಹಿಂದೆ ವ್ಯಾಸಂಗ ಮಾಡುತ್ತಿದ್ದ ಶಾಲೆಗಳಿಗೆ ಮರು ದಾಖಲಿಸಲಾಗಿದೆ.

ಮಕ್ಕಳನ್ನು ನಿಯಮಬಾಹಿರವಾಗಿ ಕೆಲಸಕ್ಕೆ ನೇಮಿಸಿಕೊಂಡಿದ್ದ ಅಂಗಡಿ ಹಾಗೂ ಉದ್ದಿಮೆ ಮಾಲೀಕರ ವಿರುದ್ಧ ಬಾಲಕಾರ್ಮಿಕ ಕಾಯ್ದೆಯಡಿ ಸಂಬಂಧಿಸಿದ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುವುದು. ಇದೇ ವೇಳೆ, ಯಾವುದೇ ಕಾರಣಕ್ಕೂ ಬಾಲಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಳ್ಳಬಾರದು ಎಂದು ಅಂಗಡಿಗಳಿಗೆ ಜಾಗೃತಿ ಪೋಸ್ಟರ್ಗಳನ್ನು ಅಂಟಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ. ಮೌನೇಶ್ ತಿಳಿಸಿದ್ದಾರೆ.

ಈ ಜಂಟಿ ಕಾರ್ಯಾಚರಣೆಯಲ್ಲಿ ಉಪತಹಶೀಲ್ದಾರ್ ಸುಬ್ಬರಾವ್, ಸಂಡೂರು ಕಾರ್ಮಿಕ ನಿರೀಕ್ಷಕ ಮಂಜುನಾಥ ತೊಂಡೆಹಾಳ್, ಮೇಲ್ವಿಚಾರಕಿ ಚೇತನಾ, ತಂಬಾಕು ನಿಯಂತ್ರಣ ಕೋಶದ ಗೋವಿಂದಪ್ಪ, ಪುರಸಭೆ ಕಂದಾಯ ಅಧಿಕಾರಿ ಹರ್ಷ, ಪೊಲೀಸ್ ಇಲಾಖೆಯ ರವಿಕುಮಾರ್ ಹಾಗೂ ಮಕ್ಕಳ ಸಹಾಯವಾಣಿಯ ಕಾರ್ತಿಕ್ ಭಾಗವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande